ಕೋಲಾರ: ರಾಜ್ಯದಲ್ಲಿ ಸು ಮಾರು 11 ಲಕ್ಷ ಬಿಪಿಎಲ್ ಕಾರ್ಡ್ ರದ್ದು ಮಾಡಿ ಬಡವರ ಅನ್ನ ಕಿತ್ತುಕೊಳ್ಳುತ್ತಿದ್ದಾರೆ. ಆರ್ಥಿಕ ಅದಕ್ಷತೆ, ಅಸಮರ್ಪಕ ನಿರ್ವಹಣೆಯಿಂದ ಖಜಾನೆ ಬರಿದಾಗಿದ್ದು ರಾಜ್ಯ ಸಾಲದ ದವಡೆಗೆ ಸಿಲುಕಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್. ಡಿ. ಕುಮಾರಸ್ವಾಮಿ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗಿದೆ ಎಂದು ನಾನು ಹೇಳುವುದಿಲ್ಲ, ಬದಲಿಗೆ ಆರ್ಥಿಕ ಅದಕ್ಷತೆ, ಅಸಮರ್ಪಕ ನಿರ್ವಹಣೆಯಿಂದ ಖಜಾನೆ ಬರಿದಾಗಿ ರಾಜ್ಯವು ಸಾಲದ ದವಡೆಗೆ ಸಿಲುಕಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಜನತೆ ಮತ್ತಷ್ಟು ತೆರಿಗೆ ಹೊರೆ ಎದುರಿಸಬೇಕಾಗುತ್ತದೆ ಎಂದರು.
11 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಆಗಿ ಮಾಡಲಾಗುತ್ತಿದೆ. ಅಂದರೆ 11 ಲಕ್ಷ ಕುಟುಂಬಗಳ ಅನ್ನವನ್ನು ಸರಕಾರ ಕಿತ್ತುಕೊಳ್ಳುತ್ತಿದೆ. ಈ ಬದಲಾವಣೆಗೆ ಕೈ ಹಾಕಿರುವ ಸರಕಾರದ ಬಗ್ಗೆ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಕೇಂದ್ರ ಸರಕಾರ ಎಲ್ಲೂ ರಾಜ್ಯಕ್ಕೆ ಕೊಡುತ್ತಿರುವ ಅಕ್ಕಿ ಕಡಿತ ಮಾಡಿಲ್ಲ. ಇವರು ಮಾಡಿರುವ ತಪ್ಪಿನಿಂದ ಎಪಿಎಲ್ ಕಾರ್ಡುದಾರರು ಇನ್ನು ಮೇಲೆ ಹಣ ಕೊಟ್ಟು ಅಕ್ಕಿ ಖರೀದಿ ಮಾಡಬೇಕು, ಅಲ್ಲವೇ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಈಗ ನೋಡಿದರೆ ಸರಕಾರದ ಮೇಲೆ ಹೊರೆ ತಪ್ಪಿಸಲು ಬಿಪಿಎಲ್, ಎಪಿಎಲ್ ನಾಟಕ ಆಡುತ್ತಿದ್ದಾರೆ. ಐದೂ ಗ್ಯಾರಂಟಿಗಳ ಮೇಲೆ ವರ್ಷಕ್ಕೆ 52 ಸಾ ವಿರ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಜನರ ತೆರಿಗೆ ಹಣವನ್ನು ಗ್ಯಾರಂಟಿಗಳಿಗೆ ಉಪಯೋಗ ಮಾಡುವುದು ಬೇರೆ. ನಿಜಕ್ಕೂ ಗ್ಯಾರಂಟಿಗಳಿಂದ ಸರಕಾರಕ್ಕೆ ಹೊರೆ ಏನೂ ಇಲ್ಲ. ತೆರಿಗೆ ಹೆಚ್ಚಿಸಿ ಸಂಗ್ರಹ ಮಾಡಿರುವ ಹಣ ಏನಾಯಿತು. ಈಗ ರಾಜ್ಯ ಸರಕಾರ 1.5 ಲಕ್ಷ ಕೋಟಿ ಸಾಲ ಮಾಡುತ್ತಿದೆ. ಆ ಸಾಲ ತೀರಿಸುವವರು ಯಾರು. ಬಡ್ಡಿ ಕಟ್ಟುವವರು ಯಾರು ಎಂದು ಕಿಡಿಕಾರಿದರು.
ಗ್ಯಾರಂಟಿ ಯೋಜನೆಗಳನ್ನು ನೋಡಲು ಪ್ರಧಾನಿ ಮೋದಿ ಅವರನ್ನು ರಾಜ್ಯಕ್ಕೆ ಬರುವಂತೆ ಕರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಮಾಡುತ್ತಾರೆ? ಇಲ್ಲಿ ಏನೇನು ಆಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಪ್ರಧಾನಿಗಳು ಇರಲಿ, ಇಲ್ಲಿನ ದುಸ್ಥಿತಿಯನ್ನು ನಾವೇ ನೋಡುತ್ತಿದ್ದೇವೆ ಎಂದರು.