Advertisement

Congress Government: ಸಿಎಂ ಸಿದ್ದರಾಮಯ್ಯರಿಗೆ ಶೋಷಿತ ಸಮಾಜದ ಶ್ರೀಗಳ ಬಲ

01:36 AM Aug 26, 2024 | Team Udayavani |

ಬೆಂಗಳೂರು: ಮುಡಾ ಪ್ರಕರಣದಲ್ಲಿ ಈಗಾಗಲೇ ಕಾಂಗ್ರೆಸ್‌ ಹೈಕಮಾಂಡ್‌, ಉಪಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟ, ಪಕ್ಷ ದ ಶಾಸಕರು ಮುಖ್ಯಮಂತ್ರಿಗೆ ಬೆಂಬಲ ಘೋಷಿಸುವ ಮೂಲಕ ಬಲ ತುಂಬಿದ್ದಾರೆ. ಅದರ ಮುಂದುವರಿದ ಭಾಗವಾಗಿ ಈಗ ಧಾರ್ಮಿಕ ಮುಖಂಡರು ಕೂಡ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದಾರೆ.

Advertisement

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆಗೆ ರಾಜ್ಯಪಾಲರು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಕುರುಬ ಸಮುದಾಯದ ಕಾಗಿನೆಲೆ ಕನಕಗುರು ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸೇರಿದಂತೆ ವಿವಿಧ ಹಿಂದುಳಿದ ಮತ್ತು ಶೋಷಿತ ಸಮುದಾಯಗಳ ಸ್ವಾಮೀಜಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೈತಿಕ ಬೆಂಬಲ ಘೋಷಿಸುವುದರ ಜತೆಗೆ ಮುಖ್ಯಮಂತ್ರಿ ಪರ ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ.

ಈ ಸಂಬಂಧ 10ಕ್ಕೂ ಅಧಿಕ ಹಿಂದುಳಿದ ವರ್ಗ ಮತ್ತು ದಲಿತ ಹಾಗೂ ಶೋಷಿತ ಸಮುದಾಯಗಳ ಸ್ವಾಮೀಜಿಗಳ ನಿಯೋಗ ರವಿವಾರ “ಕಾವೇರಿ’ಗೆ ತೆರಳಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಅಭಿಯೋಜನೆಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ, ಅದರ ಅನಂತರ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಮತ್ತು ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳ ಬಗ್ಗೆ ಚರ್ಚೆ ನಡೆಸಿದರು.

ಈ ವೇಳೆ ಸ್ವಾಮೀಜಿಗಳೆಲ್ಲರೂ ಉದ್ದೇಶಿತ ಪ್ರಕರಣದಲ್ಲಿ ತಮ್ಮ ಯಾವುದೇ ತಪ್ಪಿಲ್ಲ. ಕೃತಕವಾಗಿ ಸರಕಾರವನ್ನು ಅಸ್ಥಿರಗೊಳಿಸುವ ಕೇಂದ್ರ ಸರಕಾರ ಮತ್ತು ರಾಜಭವನದ ಷಡ್ಯಂತ್ರ ತೀವ್ರ ಖಂಡನೀಯ. ಇದು ಸಂವಿಧಾನ ವಿರೋಧಿ ನಡೆಯಾಗಿದೆ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಈ ವಿಚಾರದಲ್ಲಿ ಒಕ್ಕೊರಲಿನಿಂದ ತಮ್ಮ ಪರವಾಗಿ ನಿಂತು ಹೋರಾಟ ನಡೆಸಲಾಗುವುದು ಎಂದು ಅಭಯ ನೀಡಿದರು.

ಈ ವೇಳೆ ಸಚಿವರಾದ ಬೈರತಿ ಸುರೇಶ್‌, ಡಾ| ಎಂ.ಸಿ. ಸುಧಾಕರ್‌, ಶಾಸಕರಾದ ಬಿ.ಕೆ. ಸಂಗಮೇಶ್ವರ, ಶಿವಲಿಂಗೇಗೌಡ, ಮಾಜಿ ಶಾಸಕ ಆರ್‌. ಶಂಕರ್‌ ಮತ್ತಿತರರು ಇದ್ದರು.

Advertisement

ಯಾವ್ಯಾವ ಸ್ವಾಮೀಜಿಗಳ ಬಲ?
ನಿಯೋಗದಲ್ಲಿ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನದ ಶ್ರೀ ಶಾಂತವೀರ ಸ್ವಾಮೀಜಿ, ಚಿತ್ರದುರ್ಗದ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಚಿತ್ರದುರ್ಗದ ಮಾದರಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ, ಮಧುರೈ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಹೊಸದುರ್ಗದ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಶಿವಮೊಗ್ಗ ನಿಟ್ಟೂರು ನಾರಾಯಣ ಗುರುಪೀಠದ ಶ್ರೀ ರೇಣುಕಾನಂದ ಸ್ವಾಮೀಜಿ, ಚಿತ್ರದುರ್ಗದ ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ, ತಂಗಡಗಿಯ ಹಡಪದ ಅಪ್ಪಣ್ಣ ಗುರುಪೀಠದ ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ವಿಜಯನಗರದ ಶ್ರೀ ಸರೂರು ಶಾಂತಮ್ಮಯ್ಯ ಸ್ವಾಮೀಜಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next