Advertisement

Congress Government: ನಾನು ದಲಿತ, ನಾನೇಕೆ ಮುಖ್ಯಮಂತ್ರಿಯಾಗಬಾರದು?: ಆರ್‌.ಬಿ.ತಿಮ್ಮಾಪುರ

10:52 PM Jan 14, 2025 | Team Udayavani |

ಹುಬ್ಬಳ್ಳಿ: ಕಾಂಗ್ರೆಸ್‌ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೆವಾಲಾ ಸೋಮವಾರ ಶಾಸಕಾಂಗ ಸಭೆಯಲ್ಲಿ ಪಕ್ಷವನ್ನು ಯಾರೂ ಮೀರಿ ಹೋಗಬೇಡಿ. ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ. ಸರಕಾರ ಪಕ್ಷದ್ದೇ ವಿನಾ ಪಕ್ಷವು ಸರಕಾರದ್ದಲ್ಲ, ಸಿಎಂ ಸ್ಥಾನದ ವಿಚಾರವಾಗಿ ಬಹಿರಂಗ ಹೇಳಿಕೆ ನೀಡಬೇಡಿ ಎಂದ ಮರುದಿನವೇ ಸಚಿವರೊಬ್ಬರು ಸಿಎಂ ಸ್ಥಾನದ ವಿಚಾರವಾಗಿ ಪ್ರಶ್ನೆ ಎತ್ತಿದ್ದಾರೆ.

Advertisement

ದಲಿತ ಸಿಎಂ ಕೂಗು ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ, ದಲಿತರು ಯಾಕೆ ಸಿಎಂ ಆಗಬಾರದು. ನಾನು ದಲಿತನಾಗಿದ್ದು, ಮುಖ್ಯಮಂತ್ರಿಯಾದರೆ ಏನು ತಪ್ಪು ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಪ್ರಶ್ನಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮುಖ್ಯಮಂತ್ರಿ ನಾನಾಗಲಿ ಅಥವಾ ಮತ್ತೊಬ್ಬರಾಗಲಿ, ದಲಿತರು ಸಿಎಂ ಆಗಬೇಕೆಂದರೆ ಅವರೇ ಆಗಬೇಕು. ಮುಖ್ಯಮಂತ್ರಿ ಮಾಡಿದರೆ ಯಾರು ಬೇಡ ಅನ್ನುತ್ತಾರೆ. ನನಗೆ ಅಷ್ಟು ಶಕ್ತಿ ಇದೆಯೋ ಇಲ್ಲವೋ, ಶಾಸಕಾಂಗ ಪಕ್ಷ ಸಭೆಯಲ್ಲಿ ನನ್ನ ಒಪ್ಪುತ್ತಾರೋ ಇಲ್ಲವೋ ಇದೆಲ್ಲ ಪರಿಗಣನೆ ಆಗುತ್ತದೆ. ಅಲ್ಲೇ ಎಲ್ಲವೂ ತೀರ್ಮಾನ ಆಗಬೇಕು. ಹೈಕಮಾಂಡ್‌ ಹೇಳಿದರೆ ನಾನೇ ಮುಖ್ಯಮಂತ್ರಿ ಆಗುತ್ತೇನೆ. ಆದರೆ, ಸದ್ಯಕ್ಕೆ ಇದ್ಯಾವುದೂ ಇಲ್ಲ. ಮಾಧ್ಯಮದಲ್ಲಿ ನಾನು ಸಿಎಂ, ನಾನು ಸಿಎಂ ಎಂದು ಹೇಳಿಕೊಂಡರೆ ಆಗಲು ಸಾಧ್ಯವೇ ಎಂದು ಪ್ರಶ್ನಿಸಿದರು.

ದೆಹಲಿಯಲ್ಲಿ ಕುಳಿತು ಸಭೆ ರದ್ದು ಮಾಡಿಸಿರುವುದು ಎಲ್ಲವೂ ಮಾಧ್ಯಮ ಸೃಷ್ಟಿ. ಕಾಂಗ್ರೆಸ್‌ ಸರ್ಕಾರ 5 ವರ್ಷ ಅಧಿಕಾರದಲ್ಲಿರಲಿದೆ. ಡಾ.ಜಿ.ಪರಮೇಶ್ವರ್‌ ಮನೆಯಲ್ಲಿ ನಡೆಯಬೇಕಾಗಿದ್ದ ದಲಿತರ ಸಭೆ ಮುಂದೂಡಲಾಗಿದೆ. ಅಧಿಕಾರ ಹಂಚಿಕೆ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

ಸಣ್ಣತನದ ರಾಜಕಾರಣ:
ಹಸುಗಳ ಕೆಚ್ಚಲು ಕೊಯ್ದಿದ್ದು ವಿರೋಧಿಸಿ ಬಿಜೆಪಿ ಪ್ರತಿಭಟನೆ ಮಾಡುತ್ತಿರುವ ವಿಚಾರವಾಗಿ ಮಾತನಾಡಿ ದಲಿತರ ಎಷ್ಟೋ ಕೊಲೆಗಳಾಗಿವೆ. ಬಿಜೆಪಿಯವರು ಈ ವಿಷಯವಾಗಿ ಯಾವತ್ತಾದರೂ ಧ್ವನಿ ಎತ್ತಿದ್ದಾರಾ ಹಾಗೂ ಪ್ರತಿಭಟನೆ ಮಾಡಿದ್ದಾರಾ?. ಆಕಳಿಗೆ ಹಿಂಸೆ ನೀಡಿದವರನ್ನು ಬಲಿ ಹಾಕಬೇಕು. ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಇದೇ ವಿಚಾರಕ್ಕೆ ರಾಜಕೀಯ ಮಾಡುವುದು ಸರಿಯಲ್ಲ. ಬಿಜೆಪಿಯವರು ಈ ವಿಷಯವಾಗಿ ಸಣ್ಣತನದ ರಾಜಕಾರಣ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

Advertisement

ಇದನ್ನೂ ಓದಿ: ಬಣ ಜಗಳ ಸಾಕು ನಿಲ್ಲಿಸಿ, ಗೊಂದಲದ ಹೇಳಿಕೆ ನೀಡಿದ್ರೆ ಕ್ರಮ: ಕಾಂಗ್ರೆಸ್‌ ಹೈಕಮಾಂಡ್‌ ತಾಕೀತು

ಜನಪರವಾಗಿ ಸಂವಿಧಾನ ತಿದ್ದುಪಡಿ ಮಾಡಲು ಅವಕಾಶವಿದ್ದು, ನಾವು ಮಾಡಿದ್ದೇವೆ. ಅವರು ಸಹ ಅದನ್ನೇ ಮಾಡಿದ್ದಾರೆ. ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನು ಸಚಿವರನ್ನಾಗಿ ಮಾಡಿದವರು ಯಾರು? ಅದರ ಬಗ್ಗೆ ಯಾಕೆ ಮಾತನಾಡುವುದಿಲ್ಲ. ದಲಿತರು ನೋವು ಅನುಭವಿಸುತ್ತಿದ್ದಾರೆ. ಅವರ ಬಗ್ಗೆ ಸ್ವಲ್ಪವಾದರೂ ಕಾಳಜಿ ಇದೆಯಾ? ಎಲ್ಲ ಧರ್ಮವನ್ನೂ ಸರಿಸಮನಾಗಿ ಕಾಣಲು ಸಂವಿಧಾನ ಹೇಳಿದೆ. ಅದನ್ನು ಇವರು ಪಾಲಿಸುತ್ತಾರಾ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.