ಬೆಂಗಳೂರು: ರಾಜ್ಯದ ವಿವಿಧ ನಿಗಮ-ಮಂಡಳಿಗಳ ನಿರ್ದೇಶಕರು ಮತ್ತು ಸದಸ್ಯರ ಆಯ್ಕೆಗೆ ಸಂಬಂಧಿಸಿದಂತೆ ಮಂಗಳವಾರ
ಮೊದಲ ಸಭೆ ನಡೆಯಿತು. ಈ ವೇಳೆ ಪಕ್ಷಕ್ಕಾಗಿ ದುಡಿದು, ಇದುವರೆಗೂ ಗುರುತಿಸಿಕೊಳ್ಳದ ತಳ ಸಮುದಾಯಗಳು ಹಾಗೂ ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ನೀಡಲು ತೀರ್ಮಾನಿಸಲಾಯಿತು.
ಗೃಹ ಸಚಿವ ಡಾ| ಜಿ. ಪರಮೇಶ್ವರ್ ನೇತೃತ್ವದಲ್ಲಿ ನಡೆದ ಆಯ್ಕೆ ಸಮಿತಿಯ ಸಭೆಯಲ್ಲಿ ಸದಸ್ಯರೆಲ್ಲರೂ ಭಾಗವಹಿಸಿದ್ದರು. ಈ ವೇಳೆ ವಿವಿಧ ಕಡೆಯಿಂದ ನಿಗಮ-ಮಂಡಳಿಗಳ ಸದಸ್ಯರು ಹಾಗೂ ನಿರ್ದೇಶಕರ ಹುದ್ದೆಗಳಿಗೆ ಆಕಾಂಕ್ಷಿಗಳಿಂದ ಬಂದ ಅರ್ಜಿಗಳ ಮೊದಲ ಹಂತದ ಪರಿಶೀಲನೆ ಕಾರ್ಯ ನಡೆಯಿತು. ಸೆ. 13ರಂದು ಮತ್ತೆ ಸಮಿತಿಯು ಸಭೆ ಸೇರಲಿದ್ದು ಅಲ್ಲಿ ಬಹುತೇಕ ಆಯ್ಕೆ ಪ್ರಕ್ರಿಯೆ ಅಂತ್ಯಗೊಳ್ಳುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕೆಪಿಸಿಸಿ ಕಚೇರಿಗೆ ಆಕಾಂಕ್ಷಿಗಳಿಂದ ಎರಡೂವರೆ ಸಾವಿರ ಅರ್ಜಿಗಳು ಬಂದಿದ್ದರೆ, ನೇರವಾಗಿ ಸಚಿವ ಪರಮೇಶ್ವರ್ ಸೇರಿ ಸಮಿತಿ ಸದಸ್ಯರಿಗೂ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಅದರಲ್ಲಿ ಶಾಸಕರು, ಸಚಿವರ ಶಿಫಾರಸು ಪತ್ರಗಳೂ ಇವೆ. ಅವೆಲ್ಲವುಗಳ ಬಗ್ಗೆ ಮೊದಲ ಸಭೆಯಲ್ಲಿ ಚರ್ಚಿಸಲಾಯಿತು. ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ದುಡಿದ ಮುಂಚೂಣಿ ಕಾರ್ಯಕರ್ತರಿಗೆ ಆದ್ಯತೆ ನೀಡುವ ಬಗ್ಗೆ ಚರ್ಚಿಸಲಾಯಿತು.
ಯಾವುದೇ ಕಾರಣಕ್ಕೂ ಕಾರ್ಯಕರ್ತರನ್ನು ಕಡೆಗಣಿಸಬಾರದು. ಈ ನಿಟ್ಟಿನಲ್ಲಿ ಜಿಲ್ಲಾ ಘಟಕಗಳ ಅಧ್ಯಕ್ಷರಿಂದ ಹೆಸರು ಪಡೆಯಬೇಕು. ಯುವ ಕಾಂಗ್ರೆಸ್, ಸಾಮಾಜಿಕ ಜಾಲತಾಣ, ಎನ್‌ಎಸ್‌ಯುಐ ಸೇರಿ ವಿವಿಧ ಮುಂಚೂಣಿ ಘಟಕಗಳಲ್ಲಿ ಕಾರ್ಯನಿರ್ವಹಿಸಿದ ಅರ್ಹರನ್ನು ಗುರುತಿಸಲು ತೀರ್ಮಾನ ಕೈಗೊಳ್ಳಲಾಯಿತು. ಮುಂದಿನ ಸಭೆಯ ಹೊತ್ತಿಗೆ ನಿಗಮ-ಮಂಡಳಿಗಳ ಸದಸ್ಯರು ಮತ್ತು ನಿರ್ದೇಶಕರ ಆಯ್ಕೆ ಪಟ್ಟಿ ಸಿದ್ಧಗೊಳ್ಳಲಿದೆ. ನಂತರ ಅದನ್ನು ಸಿಎಂ-ಡಿಸಿಎಂ ಗಮನಕ್ಕೆ ತಂದು ಅಂತಿಮಗೊಳಿಸಲಾಗುವುದು ಎನ್ನಲಾಗಿದೆ.