ಲಕ್ನೋ: ಇದು ಕಾಂಗ್ರೆಸ್ ಮಾಡಿದ ಎಡವಟ್ಟು. ಭಾರತದ ಅವಿಭಾಜ್ಯ ಅಂಗವಾದ ಜಮ್ಮು-ಕಾಶ್ಮೀರ ರಾಜ್ಯವನ್ನು “ಭಾರತ ಆಕ್ರಮಿತ ಕಾಶ್ಮೀರ’ ಎಂದು ಉಲ್ಲೇಖೀಸುವ ಮೂಲಕ ಕಾಂಗ್ರೆಸ್ ಅತಿದೊಡ್ಡ ಪ್ರಮಾದವೆಸಗಿದೆ.
ಮೋದಿ ಸರ್ಕಾರದ 3 ವರ್ಷಗಳ ವೈಫಲ್ಯವನ್ನು ಬಿಂಬಿಸುವ ಸಲುವಾಗಿ ಲಕ್ನೋದಲ್ಲಿ ಕಾಂಗ್ರೆಸ್ ಕಾರ್ಯಕ್ರಮವೊಂದನ್ನು
ಹಮ್ಮಿಕೊಂಡಿತ್ತು. ಅಲ್ಲಿ ಹಂಚಲಾದ 16 ಪುಟಗಳ ಪುಸ್ತಿಕೆಯ 12ನೇ ಪುಟದಲ್ಲಿ ಭಾರತದ ನಕ್ಷೆಯನ್ನು ಪ್ರಕಟಿಸಲಾಗಿದೆ.
ಅದರಲ್ಲಿ ಇಡೀ ಜಮ್ಮು-ಕಾಶ್ಮೀರ ರಾಜ್ಯವನ್ನು ಭಾರತ ಆಕ್ರಮಿತ ಕಾಶ್ಮೀರ ಎಂದು ಉಲ್ಲೇಖೀಸಲಾಗಿದೆ.
ಈ ವಿಚಾರ ಬಹಿರಂಗವಾದೊಡನೆ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ, “ಇದೊಂದು ಆಕ್ಷೇಪಾರ್ಹ ವರ್ತನೆಯಾಗಿದೆ. ಕಾಶ್ಮೀರ ವಿವಾದವನ್ನು ಹುಟ್ಟುಹಾಕಿರುವ ಕಾಂಗ್ರೆಸ್ ಇದೀಗ ತಮ್ಮ ತಪ್ಪಿನ ಬಗ್ಗೆ ಉತ್ತರಿಸಬೇಕು. ಕಾಂಗ್ರೆಸ್ ನಿಜವಾಗಿಯೂ ಭಾರತದ ಪರವೋ ಅಥವಾ ಪಾಕಿಸ್ತಾನದ ಪರವೋ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಹೇಳಿದೆ.