Advertisement

ಭಾಲ್ಕಿ ಪುರಸಭೆ ಮತ್ತೆ ಕಾಂಗ್ರೆಸ್‌ ತೆಕ್ಕೆಗೆ

06:36 PM Nov 08, 2020 | Suhan S |

ಭಾಲ್ಕಿ: ಪಟ್ಟಣದ ಪುರಸಭೆಯಲ್ಲಿ ಬಿಜೆಪಿಗೆ ಮುಖಭಂಗವಾಗಿದ್ದು, ಕಾಂಗ್ರೆಸ್‌ ಪಕ್ಷದ ಸದಸ್ಯ ಬಸವರಾಜ ವಂಕೆಯವರಿಗೆ ಅಧ್ಯಕ್ಷ ಸ್ಥಾನ ಒಲಿದಿದೆ. ಈ ಮೂಲಕ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮತ್ತೂಮ್ಮೆ ಹಿಡಿತ ಸಾಧಿಸಿದ್ದಾರೆ.

Advertisement

ತಾಪಂನಲ್ಲಿ ಶನಿವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಬಸವರಾಜ ವಂಕೆ ಮತ್ತು ಉಪಾಧ್ಯಕ್ಷೆಯಾಗಿ ರಾಜೇಶ್ವರಿ ರಾಜಕುಮಾರ ಮೊರೆ ಅವರು ಆಯ್ಕೆಯಾಗಿದ್ದಾರೆ. ಪುರಸಭೆಯಲ್ಲಿ ಕಾಂಗ್ರೆಸ್‌ಸರಳ ಬಹುಮತ ಹೊಂದಿದೆ. ಆದರೆ, ಅಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿಯಿಂದಲೂ ನಾಮಪತ್ರ ಸಲ್ಲಿಕೆ ಆಗಿದ್ದರಿಂದ ಚುನಾವಣೆ ನಡೆಯಿತು. ಕಾಂಗ್ರೆಸ್‌ನ 20 ಸದಸ್ಯರು ಮೇಜು ಕುಟ್ಟುವ ಮೂಲಕ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಬಸವರಾಜ ವಂಕೆ ಅವರನ್ನು ಬೆಂಬಲಿಸಿದರು. ಬಿಜೆಪಿ ಅಭ್ಯರ್ಥಿ ಕೇವಲ 04 ಮತಗಳು ಪಡೆದು ಸೋಲನ್ನು ಅನುಭವಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ರಾಜೇಶ್ವರ ರಾಜಕುಮಾರ ಮೋರೆಯವರ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗಿತ್ತು. ಹೀಗಾಗಿ ಚುನಾವಣಾಧಿಕಾರಿ ಅಣ್ಣಾರಾವ ಪಾಟೀಲ್‌ ಅಂತಿಮವಾಗಿ ಬಸವರಾಜ ವಂಕೆ ಅಧ್ಯಕ್ಷ ಮತ್ತು ಉಪಾಧ್ಯಕ್ಷೆಯಾಗಿ ರಾಜೇಶ್ವರ ರಾಜಕುಮಾರ ಆಯ್ಕೆ ಆಗಿದ್ದಾರೆ ಎಂದು ಘೋಷಣೆ ಮಾಡಿದರು. ಜೆಡಿಎಸ್‌ನ ನಾಲ್ವರು ಸದಸ್ಯರು ಚುನಾವಣೆಯಲ್ಲಿ ತಟಸ್ಥರಾಗಿ ಉಳಿದಿದ್ದರು. ಕಾಂಗ್ರೆಸ್‌ನ ಮುಖಂಡರು ಮತ್ತು ಪುರಸಭೆಯ ಎಲ್ಲ ಸದಸ್ಯರು ಇದ್ದರು.

ಪಟ್ಟಣದ ಅಭಿವೃದ್ಧಿಗೆ ಅನುದಾನ :  ಪುರಸಭೆಯ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸನ್ಮಾನಿಸಿದರು. ನಂತರ ಮಾತನಾಡಿದ ಅವರು, ನಾನು ಪೌರಾಡಳಿತ ಸಚಿವನಾಗಿದ್ದ ಸಂದರ್ಭದಲ್ಲಿ ಪಟ್ಟಣದ ಅಭಿವೃದ್ಧಿಗೆ 250 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದೇನೆ. 24×7 ಕುಡಿವ ನೀರು ಪೂರೈಕೆಗೆ 140 ಕೋಟಿ ರೂ ಹಾಗೂ ರಸ್ತೆ, ಚರಂಡಿ, ಬೀದಿದೀಪ ಅಳವಡಿಕೆಗೆ 110 ಕೋಟಿ ರೂ. ಅನುದಾನ ನೀಡಿದ್ದೇನೆ. ಅಭಿವೃದ್ಧಿ ಕೆಲಸಗಳು ಪ್ರಗತಿಯಲ್ಲಿವೆ. ಏನೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತನ್ನಿ. ಅಭಿವೃದ್ಧಿ ಕೆಲಸಕ್ಕಾಗಿ ಪಕ್ಷಾತೀತವಾಗಿ ಸ್ಪಂದಿಸುತ್ತೇನೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next