Advertisement

ಕಾಂಗ್ರೆಸ್‌ಗೆ ಬಂಡಾಯದ ಭಯ

12:33 PM May 08, 2018 | |

ಬೆಂಗಳೂರು: ರಾಜಧಾನಿಯ ಜಿದ್ದಾಜಿದ್ದಿನ ಕ್ಷೇತ್ರಗಳಲ್ಲಿ ಒಂದಾದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದ್ದು, ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ.

Advertisement

ಈಗಾಗಲೇ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬಿಜೆಪಿಯ ಪ್ರಭಾವಿ ನಾಯಕ ಅರವಿಂದ ಲಿಂಬಾವಳಿ ಅವರು ಹ್ಯಾಟ್ರಿಕ್‌ ನಿರೀಕ್ಷೆಯಲಿದ್ದು, ಕಾಂಗ್ರೆಸ್‌ನಿಂದ ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ಎ.ಸಿ.ಶ್ರೀನಿವಾಸ್‌ ಕಣಕ್ಕಿಳಿದಿದ್ದಾರೆ. ಆದರೆ, ನಲ್ಲೂರಹಳ್ಳಿ ನಾಗೇಶ್‌ ಟಿಕೆಟ್‌ ಸಿಗದೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ಕಾಂಗ್ರೆಸ್‌ಗೆ ಮತ ವಿಭಜನೆಯ ಆತಂಕ ತಂದಿದೆ. ಜೆಡಿಎಸ್‌ನಿಂದ ಸತೀಶ್‌ ಹಾಗೂ ಆಮ್‌ ಆದ್ಮಿ ಪಕ್ಷದ ಭಾಸ್ಕರ್‌ ಪ್ರಸಾದ್‌ ಸಹ ಕಣಕ್ಕಿಳಿದಿದ್ದು, ಹತ್ತು ಪಕ್ಷೇತರರು ಕಣದಲ್ಲಿದ್ದಾರೆ.

ಮಹದೇವಪುರ ಕ್ಷೇತ್ರದಲ್ಲಿ 1.20 ಲಕ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಾಗೂ 80 ಸಾವಿರದಷ್ಟು ಒಕ್ಕಲಿಗ, 50 ಸಾವಿರ ಕುರುಬರು, 40 ಸಾವಿರ ರೆಡ್ಡಿ, 35 ಸಾವಿರ ಮುಸ್ಲಿಮರು, 18 ಸಾವಿರ ಲಿಂಗಾಯತ ಹಾಗೂ 1.23 ಲಕ್ಷ ಇತರೆ ಸಮುದಾಯ ಮತದಾರರಿದ್ದಾರೆ. ಒಕ್ಕಲಿಗ, ಕುರುಬ, ರೆಡ್ಡಿ, ಮುಸ್ಲಿಂ ಮತದಾರರು ನಿರ್ಣಾಯಕರಾಗಿದ್ದಾರೆ.

ಅತಿ ಹೆಚ್ಚಿನ ಸಂಖ್ಯೆಯ ಟೆಕ್‌ಪಾರ್ಕ್‌, ಐಟಿ-ಬಿಟಿ, ಬಹುರಾಷ್ಟ್ರೀಯ ಕಂಪನಿಗಳಿರುವ ಮಹದೇವಪುರ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯ ವಲಸಿಗರಿದ್ದು, ಅಪಾರ್ಟ್‌ಮೆಂಟ್‌ಗಳಲ್ಲಿ 1.50 ಲಕ್ಷಕ್ಕೂ ಹೆಚ್ಚಿನ ಸಂಖ್ಯೆ ಮತದಾರರಿದ್ದಾರೆ. ಇಲ್ಲಿನ ಮತದಾರರ ಸೆಳೆಯಲು ಎಲ್ಲ ಅಭ್ಯರ್ಥಿಗಳು ನಾನಾ ರೀತಿಯ ಕಸರತ್ತಿನಲ್ಲಿ ತೊಡಗಿದ್ದಾರೆ. ಜತೆಗೆ ಗ್ರಾಮೀಣ ಭಾಗದ ಮತಗಳ ಕಡೆಗೂ ಹೆಚ್ಚಿನ ಗಮನ ಹರಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ರಾಜ್ಯ ಸರ್ಕಾರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿದ್ದು, ಅದರ ನಡುವೆಯೂ ಹಲವಾರು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎಂದು ಹೇಳುವ ಮೂಲಕ ಹಾಲಿ ಶಾಸಕ ಅರವಿಂದ ಲಿಂಬಾವಳಿ ಮತಯಾಚಿಸುತ್ತಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಕ್ಷೇತ್ರ ಅಭಿವೃದ್ಧಿ ಕಂಡಿಲ್ಲ. ನನಗೂ ಒಂದು ಅವಕಾಶ ನೀಡಿ ಎಂದು ಕಾಂಗ್ರೆಸ್‌ನ ಶ್ರೀನಿವಾಸ್‌ ಮನವಿ ಮಾಡುತ್ತಿದ್ದಾರೆ. ಜೆಡಿಎಸ್‌ನ ಸತೀಶ್‌ ಸಹ ಬಿರುಸಿನ ಪ್ರಚಾರ ನಡೆಸಿದ್ದಾರೆ.

Advertisement

ಇದರ ನಡುವೆ ಆಫ್ ಅಭ್ಯರ್ಥಿ ಭಾಸ್ಕರ್‌ ಪ್ರಸಾದ್‌ ಅವರು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸವಾಗಿರುವ ಐಟಿ-ಬಿಟಿ ಹಾಗೂ ಖಾಸಗಿ ಕಂಪನಿಗಳ ಉದ್ಯೋಗಿಗಳನ್ನು ಸೆಳೆಯುವ ಪ್ರಯತ್ನದಲಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ಸಿಗದೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಲ್ಲೂರಳ್ಳಿ ನಾಗೇಶ್‌ ನಾನು ಸ್ಥಳೀಯ. ನನಗೆ ಅವಕಾಶ ಕೊಡಿ ಎಂದು ಕೇಳುತ್ತಿದ್ದಾರೆ. ನಾಗೇಶ್‌ ಹೆಚ್ಚು ಮತ ಪಡೆದಷ್ಟೂ ಕಾಂಗ್ರೆಸ್‌ಗೆ ನಷ್ಟ ಎಂದು ಹೇಳಲಾಗುತ್ತಿದೆ.

ಕ್ಷೇತ್ರದ ವ್ಯಾಪ್ತಿಗೆ ಬರುವ ಬಿಬಿಎಂಪಿಯ 8 ವಾರ್ಡ್‌ಗಳ ಪೈಕಿ 4ರಲ್ಲಿ ಬಿಜೆಪಿ, 3ರಲ್ಲಿ ಕಾಂಗ್ರೆಸ್‌ ಹಾಗೂ 1 ವಾರ್ಡ್‌ನಲ್ಲಿ ಪಕ್ಷೇತರ ಸದಸ್ಯರಿದ್ದಾರೆ. ಅದೇ ರೀತಿ ಕ್ಷೇತ್ರದ 6 ಜಿ.ಪಂ ಸ್ಥಾನಗಳ ಪೈಕಿ 5ರಲ್ಲಿ ಕಾಂಗ್ರೆಸ್‌ ಹಾಗೂ ಒಂದರಲ್ಲಿ ಬಿಜೆಪಿ ಸದಸ್ಯರಿದ್ದಾರೆ.

* ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next