Advertisement
ಸಂಪುಟ ಪುನಾರಚನೆಯಿಂದ ಪಕ್ಷದೊಳಗೆ ಮತ್ತಷ್ಟು ಬಂಡಾಯ ಸಾಧ್ಯತೆ ಇರುವುದರಿಂದ ಸೆಪ್ಟಂಬರ್ ತಿಂಗಳವರೆಗೆ ಆ ಯತ್ನ ಮಾಡುವುದಕ್ಕೆ ಪಕ್ಷ ಹಿಂದೇಟು ಹಾಕಿದೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳ ಹೀನಾಯ ಸೋಲಿನಿಂದ ಹಾಗೂ ಬಿಜೆಪಿ ಮತ್ತೆ ಆಪರೇಷನ್ ಕಮಲ ಆರಂಭಿಸುವ ಸಾಧ್ಯತೆ ಹೆಚ್ಚಿರುವುದರಿಂದ ದೋಸ್ತಿ ಪಕ್ಷಗಳು ಆತಂಕಗೊಂಡಿವೆ.
Related Articles
Advertisement
ಸದ್ಯ ಖಾಲಿ ಇರುವ ಮೂರು ಸ್ಥಾನಗಳನ್ನು ಭರ್ತಿ ಮಾಡಿ, ಒಂದು ವೇಳೆ, ಬಂಡಾಯ ಹೆಚ್ಚಾದರೆ ಸಂಪುಟ ಪುನಾರಚನೆಗೆ ಸಿದ್ಧತೆಗಳನ್ನು ಮಾಡಿಕೊಳ್ಳ ಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದೇ ಕಾರಣಕ್ಕೆ ಸಚಿವರಿಗೆ ತಕ್ಷಣಕ್ಕೆ ಯಾರಿಗೂ ರಾಜೀನಾಮೆಯ ಬಗ್ಗೆ ಸೂಚನೆ ನೀಡದೇ, ಪಕ್ಷದ ತೀರ್ಮಾನಕ್ಕೆ ಬದ್ದರಾಗಿರುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಹಿರಿಯರಿಗೆ ಗೇಟ್‌ಪಾಸ್?: ಒಂದು ಮೂಲದ ಪ್ರಕಾರ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಐದು ವರ್ಷ ಪೂರ್ಣ ಪ್ರಮಾಣದಲ್ಲಿ ಸಚಿವರಾಗಿದ್ದು, ಮೈತ್ರಿ ಸರ್ಕಾರದಲ್ಲಿಯೂ ಸಚಿವರಾಗಿರುವವರನ್ನು ಸಂಪುಟದಿಂದ ಕೈ ಬಿಡುವ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಹಿಂದಿನ ಸರ್ಕಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಸಚಿವರಾಗಿದ್ದ ಆರ್.ವಿ. ದೇಶಪಾಂಡೆ, ಕೃಷ್ಣ ಬೈರೇಗೌಡ, ಯು.ಟಿ. ಖಾದರ್, ಕೆ.ಜೆ. ಜಾರ್ಜ್ ಅವರನ್ನು ಸಂಪುಟದಿಂದ ಕೈ ಬಿಡುವ ಆಲೋಚನೆ ಹೊಂದಿದ್ದಾರೆ ಎನ್ನಲಾಗಿದೆ.
ಆದರೆ, ಗುರುವಾರ ನಡೆದ ಸಭೆಯಲ್ಲಿ ನಾಯಕರು ಎಲ್ಲ ಸಚಿವರಿಂದ ವಯಕ್ತಿಕ ಅಭಿಪ್ರಾಯ ಪಡೆದುಕೊಂಡಿದ್ದು, ಒಂದು ವರ್ಷದಲ್ಲಿ ಇಲಾಖೆಯಲ್ಲಿ ತಾವು ಮಾಡಿರುವ ಸಾಧನೆ ಹಾಗೂ ಮುಂದೆ ಮಾಡಬೇಕಾದ ಕೆಲಸಗಳ ಬಗ್ಗೆ ನಾಯಕರಿಗೆ ವಿವರಣೆ ನೀಡಿ, ಪರೋಕ್ಷವಾಗಿ ಸಂಪುಟದಲ್ಲಿ ತಾವು ಮುಂದುವರೆಯುವ ಇಚ್ಛೆಯನ್ನು ಸಚಿವರು ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಕಳೆದ ಒಂದು ವರ್ಷದಲ್ಲಿ ಕಾಂಗ್ರೆಸ್ ಸಚಿವರ ಇಲಾಖೆಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಬೆಂಬಲ ದೊರೆಯದಿರುವ ಬಗ್ಗೆಯೂ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಸಚಿವರ ಅಭಿಪ್ರಾಯಗಳನ್ನು ಆಲಿಸಿರುವ ನಾಯಕರು, ಮುಂದಿನ ದಿನಗಳಲ್ಲಿ ನಿಮಗೆ ವಹಿಸಿರುವ ಇಲಾಖೆಗಳಲ್ಲಿ ಉತ್ತಮ ಕೆಲಸ ಮಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿಯಿಂದ ಯಾವುದೇ ರೀತಿಯ ತೊಂದರೆಯಾಗದಂತೆ ಪಕ್ಷ ನೋಡಿಕೊಳ್ಳುತ್ತದೆ.
ಮೈತ್ರಿ ಸರ್ಕಾರಕ್ಕೆ ಮುಜುಗರವಾಗುವಂತೆ ನಡೆದುಕೊಳ್ಳದೇ ಮೈತ್ರಿ ಧರ್ಮ ಪಾಲಿಸುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ತಕ್ಷಣವೇ ಸಂಪುಟ ಪುನಾರಚನೆಗೆ ಸಚಿವರು ವಿರೋಧ ವ್ಯಕ್ತಪಡಿಸಿದ್ದರೂ, ಹೈಕಮಾಂಡ್ ನಿರ್ಧಾರಕ್ಕೆ ಬದ್ದರಾಗಿರುವಂತೆ ಪಕ್ಷದ ನಾಯಕರು ಸೂಚನೆ ನೀಡಿದ್ದಾರೆ.
ಪ್ರಮುಖ ನಾಯಕರ ಸಭೆ: ಸಚಿವರೊಂದಿಗಿನ ಸಭೆಯ ಬಳಿಕ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಗೃಹ ಸಚಿವ ಎಂ.ಬಿ.ಪಾಟೀಲ್, ಪರಮೇಶ್ವರ್ ಅವರ ನಿವಾಸದಲ್ಲಿಯೇ ಪ್ರತ್ಯೇಕ ಸಭೆ ನಡೆಸಿದರು.
ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಯಾವುದೇ ತೀರ್ಮಾನ ತೆಗೆದು ಕೊಂಡಿಲ್ಲ. ಸದ್ಯ ಸರ್ಕಾರದ ಕೆಲಸಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸಚಿವರಿಗೆ ಕಾರ್ಯ ನಿರ್ವಹಿಸುವಂತೆ ಸೂಚಿಸಿದ್ದೇವೆ.-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ ಸಚಿವ ಸ್ಥಾನ ಸಿಕ್ಕ ಬಳಿಕ ನಾನು ತುಂಬ ಖುಷಿಯಾಗಿದ್ದೇನೆ. ಒಂದು ಬಾರಿ ಸಚಿವನಾಗಬೇಕು ಎಂಬ ಬಯಕೆ ಇತ್ತು. ಮೂರು ತಿಂಗಳ್ಳೋ, ಮೂರು ದಿನವೋ ಸಚಿವ ಆಗಿದ್ದೇನೆ. ಸಚಿವ ಸ್ಥಾನ ಬಿಟ್ಟುಕೊಡುವಂತೆ ಹೈಕಮಾಂಡ್ ಕೇಳಿದರೆ ಬಿಟ್ಟು ಕೊಡುತ್ತೇನೆ.
-ಎಂ.ಟಿ.ಬಿ. ನಾಗರಾಜ್, ವಸತಿ ಸಚಿವ ಸಂಪುಟ ಪುನಾರಚನೆಯ ವಿಷಯ ಹೈ ಕಮಾಂಡ್‌ಗೆ ಬಿಟ್ಟಿದ್ದು, ಹಿರಿಯ ಸಚಿವರನ್ನು ಕೈ ಬಿಡುವ ಬಗ್ಗೆ ಯಾವುದೇ ಚರ್ಚೆ ಯಾಗಿಲ್ಲ. ಹೈ ಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ದನಾಗಿರುತ್ತೇನೆ.
-ಕೆ.ಜೆ. ಜಾರ್ಜ್, ಕೈಗಾರಿಕಾ ಸಚಿವ