Advertisement

ಸಮರ್ಥ ನಾಯಕನಿಲ್ಲದೇ ನಲುಗಿದ ಕಾಂಗ್ರೆಸ್‌

11:37 AM May 29, 2019 | Suhan S |

ಚಾಮರಾಜನಗರ: ಕಾಂಗ್ರೆಸ್‌ನ ಭದ್ರಕೋಟೆ ಎಂದು ಹೇಳಲಾಗುತ್ತಿದ್ದ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಬುಡ ಅಲುಗಾಡುತ್ತಿದೆ. ಎರಡು ವಿಧಾನಸಭಾ ಕ್ಷೇತ್ರಗಳು ಕೈಬಿಟ್ಟು ಹೋಗಿದ್ದ ಜಿಲ್ಲೆಯಲ್ಲಿ ಈಗ ಲೋಕಸಭಾ ಕ್ಷೇತ್ರವನ್ನೇ ಕಾಂಗ್ರೆಸ್‌ ಕಳೆದುಕೊಂಡಿದೆ. ಆ ಪಕ್ಷಕ್ಕೆ ಜಿಲ್ಲೆಯಲ್ಲಿ ಸಮರ್ಥ ನಾಯಕತ್ವವೇ ಇಲ್ಲದಂತಾಗಿದೆ.

Advertisement

ಎಚ್.ಎಸ್‌. ಮಹದೇವಪ್ರಸಾದ್‌ ಇದ್ದಾಗ ಜಿಲ್ಲೆಯಲ್ಲಿ ಕಾಂಗ್ರೆಸ್‌ ಅನ್ನು ಸುಭದ್ರವಾಗಿ ಕಟ್ಟಿದ್ದರು. ಒಂದು ಲೋಕಸಭಾ ಕ್ಷೇತ್ರ, ನಾಲ್ಕು ವಿಧಾನಸಭಾ ಕ್ಷೇತ್ರಗಳು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಕಾಂಗ್ರೆಸ್‌ ಪಕ್ಷವೇ ಅಧಿಕಾರದಲ್ಲಿತ್ತು.

ಪಕ್ಷ ಬಲಪಡಿಸುತ್ತಿದ್ದ ಎಚ್.ಎಸ್‌.ಎಂ: ಮಹದೇವಪ್ರಸಾದ್‌ ಅವರಿದ್ದಾಗ ಪಕ್ಷದಲ್ಲಿ ಒಂದು ಶಿಸ್ತಿತ್ತು. ಅವರು ಹೇಳಿದ ಮಾತಿಗೆ ಉಳಿದೆಲ್ಲರೂ ಬದ್ಧರಾಗಿರುತ್ತಿದ್ದರು. ಅವರನ್ನು ಕ್ಯಾಪ್ಟನ್‌ ಎಂದೇ ಪಕ್ಷದಲ್ಲಿ ಕರೆಯುತ್ತಿದ್ದರು. ಪ್ರತಿ ಚುನಾವಣೆಗಳಲ್ಲಿ ಪಕ್ಷ ಗೆಲ್ಲಲು ಬೇಕಾದ ತಂತ್ರಗಳನ್ನು ಅವರು ರೂಪಿಸುತ್ತಿದ್ದರು. ಯಾವ ತಾಲೂಕಿನಲ್ಲಿ, ಯಾವ ಹೋಬಳಿಯಲ್ಲಿ ಪಕ್ಷ ದುರ್ಬಲವಾಗಿದೆ? ಅಲ್ಲಿ ಪಕ್ಷವನ್ನು ಬಲ ಪಡಿಸಿ ಮತಗಳನ್ನು ಪಡೆಯಲು ಏನು ಮಾಡಬೇಕೆಂಬುದೆಲ್ಲ ಅವರಿಗೆ ಕರತಲಾಮಲಕವಾಗಿತ್ತು.

ಎರಡನೇ ಸ್ಪರ್ಧೆಯಲ್ಲಿ ಗೆಲ್ಲಲಾಗಲಿಲ್ಲ: ಅವರ ಹಠಾತ್‌ ನಿಧನದಿಂದ ಜಿಲ್ಲೆಯಲ್ಲಿ ಪಕ್ಷ ನಾಯಕನನ್ನು ಕಳೆದುಕೊಂಡಿತು. ಅದರ ಪರಿಣಾಮ 2018ರ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟವಾಗಿ ಗೋಚರಿಸಿತು. ಬೇರೆ ಕ್ಷೇತ್ರಗಳಿರಲಿ ಸ್ವತಃ ಅವರು ಪ್ರತಿನಿಧಿಸುತ್ತಿದ್ದ ಗುಂಡ್ಲುಪೇಟೆ ಕ್ಷೇತ್ರದಲ್ಲೇ ಅವರ ಪತ್ನಿಯೇ 2ನೇ ಸ್ಪರ್ಧೆಯಲ್ಲಿ ಗೆಲ್ಲಲಾಗಲಿಲ್ಲ. ಇತ್ತ ಕೊಳ್ಳೆಗಾಲ ವಿಧಾನಸಭಾ ಕ್ಷೇತ್ರವನ್ನೂ ಕಾಂಗ್ರೆಸ್‌ ಕಳೆದುಕೊಂಡಿತು.

ಮಹದೇವಪ್ರಸಾದ್‌ ಅನುಪಸ್ಥಿತಿ: ಈ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಧ್ರುವನಾರಾಯಣಗೆ ಕಾಡಿದ್ದು, ಮಹದೇವಪ್ರಸಾದ್‌ ಅವರ ಅನುಪಸ್ಥಿತಿ. ವೀರಶೈವ ಲಿಂಗಾಯತ ಮತಗಳು ಬಿಜೆಪಿ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರಿಂದಾಗಿ ಗಣನೀಯ ಸಂಖ್ಯೆಯಲ್ಲಿ ಬಿಜೆಪಿಗೆ ಹೋಗುತ್ತಿದ್ದರೂ, ಮಹದೇವಪ್ರಸಾದ್‌ ಸಹ ವೀರಶೈವರಾಗಿದ್ದ ಕಾರಣ ಕಾಂಗ್ರೆಸ್‌ ಬೆಂಬಲಿಸುವ ವೀರಶೈವ ಬಳಗವೂ ಇತ್ತು. ಅಂಥ ಬಳಗಗಳನ್ನು ಮಹದೇವಪ್ರಸಾದ್‌ ಹಿಡಿದಿಟ್ಟುಕೊಂಡಿದ್ದರು. ಕಾಂಗ್ರೆಸ್‌ನ ಸಾಂಪ್ರದಾಯಿಕ ಮತ ಬ್ಯಾಂಕ್‌ ಆದ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಜೊತೆಗೆ, ಮಹದೇವಪ್ರಸಾದ್‌ ಪ್ರಭಾವದಿಂದ ಸೃಷ್ಟಿಯಾಗಿದ್ದ ವೀರಶೈವ ಲಿಂಗಾಯತ ಮತಗಳು ಶೇ. 20 ರಿಂದ 25ರಷ್ಟು ಪ್ರಮಾಣದಲ್ಲಾದರೂ ಕಾಂಗ್ರೆಸ್‌ಗೆ ಬರುತ್ತಿದ್ದವು. ಈ ಬಾರಿ ಧ್ರುವನಾರಾಯಣರಿಗೆ ಈ ಮತಗಳು ಕೈಕೊಟ್ಟವು.

Advertisement

ಸಮರ್ಥ ನಾಯಕತ್ವದ ಕೊರತೆ: ಮಹದೇವಪ್ರಸಾದ್‌ ನಿಧನಾನಂತರ ಪಕ್ಷದಲ್ಲಿ ಸಮರ್ಥ ನಾಯಕತ್ವವನ್ನು ಯಾರೂ ನಿರ್ವಹಿಸಲಿಲ್ಲ. ಸಂಸದರಾಗಿದ್ದ ಧ್ರುವನಾರಾಯಣ ಅವರು ಪಕ್ಷವನ್ನು ಲೀಡ್‌ ಮಾಡಲು ಯತ್ನಿಸಿದರು. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ಪರ್ಯಾಯವಾಗಿ ತಾವೂ ಜಿಲ್ಲೆಯ ನಾಯಕರಾಗಲು ಹೊರಟರು. ತಾನೊಬ್ಬ ಪ್ರಬಲ ನಾಯಕ ಎಂದು ಪುಟ್ಟರಂಗಶೆಟ್ಟಿ ಅಂದುಕೊಂಡರೇ ಹೊರತು, ಹಾಗೆ ಜಿಲ್ಲಾ ಮಟ್ಟದ ನಾಯಕರಾಗಲು ತೋರಬೇಕಾದ ನಡೆಗಳನ್ನು ಅವರು ತೋರಲಿಲ್ಲ.

ಕ್ಷೇತ್ರಕ್ಕೆ ಸೀಮಿತರಾದರೇ?: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಪುಟ್ಟರಂಗಶೆಟ್ಟಿ ಅವರು, ಜಿಲ್ಲಾ ಉಸ್ತುವಾರಿ ಸಚಿವರಾದ ನಂತರವೂ ಕ್ಷೇತ್ರಕ್ಕೆ ಸೀಮಿತರಾದಂತೆ ಉಳಿದರು. ಇಡೀ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸುವ ಹೊಣೆ ತಮ್ಮ ಮೇಲಿದೆ. ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾದರೂ ಅದು ಪಕ್ಷಕ್ಕಾದ ನಷ್ಟ ಎಂದು ಅವರು ಭಾವಿಸಲಿಲ್ಲ ಎಂದು ಪಕ್ಷದಲ್ಲಿರುವ ಮುಖಂಡರೇ ಹೇಳುತ್ತಾರೆ.

ಅಸಮಾಧಾನ: ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಹಾಗೂ ಕೊಳ್ಳೇಗಾಲ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬರಲಿಲ್ಲ. ಸ್ವತಃ ಉಸ್ತುವಾರಿ ಸಚಿವರ ಸಮುದಾಯದ ಮತಗಳು, ಅವರ ಕ್ಷೇತ್ರವನ್ನು ಹೊರತುಪಡಿಸಿ ಬೇರೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ದೊರಕದಿರಲು ಕಾರಣವೇನು ಎಂದು ಆ ಪಕ್ಷದ ಮುಖಂಡರೇ ಪ್ರಶ್ನಿಸುತ್ತಿದ್ಧಾರೆ. ಲೋಕಸಭಾ ಚುನಾವಣೆಯಲ್ಲಿ ಉಸ್ತುವಾರಿ ಸಚಿವರು ಪ್ರತಿನಿಧಿಸುವ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 9 ಸಾವಿರ ಮತಗಳ ಮುನ್ನಡೆ ಬಿಜೆಪಿಗೆ ದೊರೆತಿದೆ. ಇದರ ಹಿನ್ನೆಲೆಯೇನು? ಎಂಬ ಸಂಶಯ ಪಕ್ಷದಲ್ಲಿ ವ್ಯಕ್ತವಾಗುತ್ತಿದೆ. ಸಚಿವರು ತಮ್ಮ ಚುನಾವಣೆಯಲ್ಲೂ ಕ್ಷೇತ್ರದ ಮುನ್ನಡೆಯನ್ನು ಬೇರೆ ಪಕ್ಷಕ್ಕೆ ಬಿಟ್ಟುಕೊಡುತ್ತಾರೆಯೇ? ಎಂಬ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಕೇವಲ ಒಂದು ವರ್ಷದ ಹಿಂದೆ ಅವರಿಗೆ ದೊರೆತಿದ್ದ ಲೀಡ್‌ ಈ ಬಾರಿ ಧ್ರುವನಾರಾಯಣರಿಗೆ ದೊರಕಿಸಲಿಲ್ಲವೇಕೆ? ಎಂಬ ಪ್ರಶ್ನಿಸುತ್ತಿದ್ದಾರೆ.

ಮೋದಿ ಪರ ಘೋಷಣೆ: ಸಚಿವರು ಲೋಕಸಭಾ ಕ್ಷೇತ್ರದ ಮತ ಯಾಚನೆಗೆ ತಮ್ಮ ಸಮುದಾಯದ ಮೋಳೆಗಳಿಗೆ ಹೋದ ಸಂದರ್ಭದಲ್ಲಿ ಸಚಿವರ ಎದುರೇ ಪ್ರಧಾನಿ ಮೋದಿಯವರ ಪರವಾಗಿ ಘೋಷಣೆ ಕೂಗಿದ ಪ್ರಸಂಗಗಳು ನಡೆದವು. ಈ ಘಟನೆಯನ್ನು ಸಚಿವರ ಕಟ್ಟಾ ಬೆಂಬಲಿಗರೇ ಮಾಧ್ಯಮಗಳಿಗೆ ರವಾನಿಸಿದ ಹಿನ್ನೆಲೆಯೇನು? ಎಂಬ ಬಗ್ಗೆ ಈಗ ಚರ್ಚೆಗಳಾಗುತ್ತಿವೆ.

ತಿರುಗುಬಾಣವಾಗುವ ಸಾಧ್ಯತೆ: ಜಿಲ್ಲಾ ಮಟ್ಟದಲ್ಲಿ ನಾಯಕರೆನಿಸಿಕೊಳ್ಳಬೇಕಾದವರು, ಇಡೀ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಲು ಶ್ರಮಿಸಬೇಕು. ಆದರೆ ಉಸ್ತುವಾರಿ ಸಚಿವರು ಆ ಪ್ರಯತ್ನ ಮಾಡಲಿಲ್ಲ. ತಮ್ಮ ಕ್ಷೇತ್ರಕ್ಕೆ ಸೀಮಿತವಾದರು. ಹೋಗಲಿ, ತಮ್ಮ ಕ್ಷೇತ್ರದಲ್ಲೂ ಪಕ್ಷಕ್ಕೆ ಮುನ್ನಡೆ ದೊರಕಿಸಲಿಲ್ಲ ಎಂಬ ಅಸಮಾಧಾನಗಳು ಕಾಂಗ್ರೆಸ್‌ ಪಕ್ಷದಲ್ಲಿ ವ್ಯಕ್ತವಾಗುತ್ತಿವೆ. ಈ ಅಸಮಾಧಾನಗಳು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪುಟ್ಟರಂಗಶೆಟ್ಟಿ ಅವರಿಗೇ ತಿರುಗುಬಾಣವಾಗುವ ಸಾಧ್ಯತೆಗಳು ಹೆಚ್ಚಿವೆ.

ಕ್ಯಾಪ್ಟನ್‌ರನ್ನು ಮರೆತರೇ?:

ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಪ್ರಬಲವಾಗಿ ಸಂಘಟಿಸಿದ್ದ ದಿ. ಎಚ್.ಎಸ್‌ ಮಹದೇವಪ್ರಸಾದ್‌ ಅವರನ್ನು ಮರೆತರೇ ಎಂದು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ಪ್ರಸಂಗವೂ ನಡೆದಿತ್ತು. ಜಿಲ್ಲಾ ಕೇಂದ್ರದಲ್ಲಿ ಲೋಕಸಭಾ ಚುನಾವಣೆಗೆ ಮುಂಚೆ ನಡೆದ ಪ್ರಚಾರ ಸಭೆಯಲ್ಲಿ ಮಹದೇವಪ್ರಸಾದ್‌ ಅವರ ಭಾವಚಿತ್ರವನ್ನೂ ಎಲ್ಲಿಯೂ ಹಾಕಿರಲಿಲ್ಲ. ಇಷ್ಟು ಬೇಗ ಅವರನ್ನು ಪಕ್ಷದ ನಾಯಕರು ಮರೆತುಬಿಟ್ಟರೇ? ಎಂದು ಅವರ ಅಭಿಮಾನಿಗಳು ಫೇಸ್‌ಬುಕ್‌, ವಾಟ್ಸಪ್‌ಗ್ಳಲ್ಲಿ ಪ್ರಶ್ನಿಸಿದ್ದರು.
ಕಾರ್ಯಮಗಳಿಗೆ ಗೈರಾಗುತ್ತಿದ್ದ ಉಸ್ತುವಾರಿ ಸಚಿವ

ಮಹದೇವಪ್ರಸಾದ್‌ ಅವರಿದ್ದಾಗ ಪಕ್ಷದಲ್ಲಿ ಅಪಾರ ಶಿಸ್ತಿತ್ತು. ಪ್ರಮುಖರು ಕಾರ್ಯಕ್ರಮಗಳಿಗೆ ಗೈರು ಹಾಜರಾಗುತ್ತಿರಲಿಲ್ಲ. ಆದರೆ ಅವರ ಬಳಿಕ ಉಸ್ತುವಾರಿ ಸಚಿವರಾದ ಪುಟ್ಟರಂಗಶೆಟ್ಟಿ ಅವರು ಆಗಿನ ಸಂಸದ ಧ್ರುವನಾರಾಯಣ ಅವರು ಸಂಘಟಿಸಿದ ಕಾರ್ಯಕ್ರಮಗಳಿಗೇ ಗೈರು ಹಾಜರಾಗುತ್ತಿದ್ದರು. ಪ್ರಮುಖವಾಗಿ ಕೇಂದ್ರೀಯ ವಿದ್ಯಾಲಯ ಉದ್ಘಾಟನೆಗೆ ಕೇಂದ್ರ ಸಚಿವ ಬಿಜೆಪಿ ನಾಯಕ ಅನಂತಕುಮಾರ್‌ ಅವರೇ ಹಾಜರಾಗಿದ್ದರು.
ಆದರೆ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿಯವರು ಆ ಕಾರ್ಯಕ್ರಮಕ್ಕೆ ಗೈರು ಹಾಜರಾದರು. ಧ್ರುವ ಅವರ ಆಸಕ್ತಿಯಿಂದ ಜಿಲ್ಲೆಗೆ ಮಂಜೂರಾದ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಉದ್ಘಾಟನೆಗೂ ಪುಟ್ಟರಂಗಶೆಟ್ಟಿ ಗೈರು ಹಾಜರಾದರು. ಅಲ್ಲದೇ ಸಂಸದರ ಅನುದಾನದಿಂದ ನಿರ್ಮಾಣಗೊಂಡ ಕೃಷಿಕ ಸಮಾಜ ಕಟ್ಟಡದ ಉದ್ಘಾಟನೆಗೂ ಸಚಿವರು ಬರಲಿಲ್ಲ.
● ಕೆ.ಎಸ್‌. ಬನಶಂಕರ ಆರಾಧ್ಯ
Advertisement

Udayavani is now on Telegram. Click here to join our channel and stay updated with the latest news.

Next