Advertisement

ಕರ್ನಾಟಕ ಬಂದ್‌ಗೆ ಕಾಂಗ್ರೆಸ್‌ ಬೆಂಬಲ: ಡಿಕೆಶಿ

02:47 AM Sep 28, 2020 | Hari Prasad |

ಬೆಂಗಳೂರು: ರಾಜ್ಯ ಸರಕಾರದ ವಿರುದ್ಧ ರೈತರು, ದಲಿತ ಮತ್ತು ಕಾರ್ಮಿಕ ಸಂಘಟನೆಗಳು ನೀಡಿರುವ ಕರ್ನಾಟಕ ಬಂದ್‌ಗೆ ಕಾಂಗ್ರೆಸ್‌ ಸಂಪೂರ್ಣ ಬೆಂಬಲ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

Advertisement

ರವಿವಾರ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿ, ರೈತ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ನಮ್ಮ ಪಕ್ಷ ಸಂಪೂರ್ಣ ಬೆಂಬಲ ಕೊಡಲಿದೆ. ಬಂದ್‌ನಲ್ಲಿ ಶಾಂತಿಯುತವಾಗಿ ಪಾಲ್ಗೊಳ್ಳಲು ನಿರ್ಧರಿಸಲಾಗಿದೆ.

ಕೋವಿಡ್‌ ಸಂದರ್ಭದಲ್ಲಿಯೂ ಪಕ್ಷದ ಕಚೇರಿ ಮುಚ್ಚದೆ ಜನರ ಪರವಾಗಿದ್ದು, ಸರಕಾರ ಮಾಡಬೇಕಾದ ಕೆಲಸವನ್ನು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಮಾಡಿದರು ಎಂದು ಹೇಳಿದರು.

ಕೋವಿಡ್ ಸಂದರ್ಭದಲ್ಲಿ ಆಡಳಿತ ಪಕ್ಷ ಸರಿಯಾಗಿ ಕೆಲಸ ಮಾಡಲಿಲ್ಲ. ಆದರೆ, ಕಾಂಗ್ರೆಸ್‌ ನಾಯಕರು ಉತ್ತಮ ಕೆಲಸ ಮಾಡಿದರು. ಕಾರ್ಯಕರ್ತರ ಕೆಲಸವನ್ನು ಗಮನಿಸಿ ಸೋನಿಯಾ ಗಾಂಧಿ ಪತ್ರ ಬರೆದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೋವಿಡ್ ಸಂದರ್ಭದಲ್ಲಿ ಪಕ್ಷದ ವತಿಯಿಂದ ಅನೇಕ ಸಮಿತಿಗಳನ್ನು ರಚಿಸಿ ಆರೋಗ್ಯ ಹಸ್ತ ಸಹಿತ ಅನೇಕ ಕಾರ್ಯಕ್ರಮಗಳನ್ನು ದೇಶದಲ್ಲಿ ಮಾದರಿಯಾಗುವಂತೆ ಮಾಡಲಾಯಿತು ಎಂದರು.

Advertisement

ಗ್ರಾಮ ಪಂಚಾಯತ್‌ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು. ಈ ಹಿಂದೆ ಚುನಾವಣೆಯಲ್ಲಿ ಗೆದ್ದವರು, ಸೋತವರು ಹೇಗೆ ಕೆಲಸ ಮಾಡುತ್ತಿದ್ದಾರೆಂದು ಗಮನಿಸುತ್ತಿದ್ದೇವೆ. ಪಕ್ಷ ಸಂಘಟನೆಗೆ ಎಲ್ಲರಿಗೂ ಸದಸ್ಯತ್ವ ನೋಂದಣಿ ಮಾಡಿಸಬೇಕು.

ಬೂತ್‌ ಮಟ್ಟದ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಡಬೇಕು. ಯಾರೇ ಆಗಿರಲಿ ಬೂತ್‌ ಮಟ್ಟದಲ್ಲಿ ಸದಸ್ಯತ್ವ ಹೊಂದಬೇಕು ಎಂದು ಹೇಳಿದರು.

ವಿಧಾನಸಭೆಯಲ್ಲಿ ಸರಕಾರದ ವಿರುದ್ಧ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಲು ಸಾಧ್ಯವಾಗಲಿಲ್ಲ. ರೈತರಿಗೆ, ಕಾರ್ಮಿಕರಿಗೆ, ವಿಧ್ಯಾರ್ಥಿಗಳಿಗೆ ತೊಂದರೆ ಆಗಿದೆ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ. ವ್ಯಕ್ತಿ ಪೂಜೆಗಿಂತ, ಪಕ್ಷ ಪೂಜೆ ಮೇಲೆ ನಂಬಿಕೆ ಇಟ್ಟು ಅದರ ಆಧಾರದ ಮೇಲೆ ಕೆಲಸ ಮಾಡುವುದಾಗಿ ಹೇಳಿದರು.

ಸೋನಿಯಾ ಗಾಂಧಿ ಎಐಸಿಸಿಗೆ ಹೊಸದಾಗಿ ರಚಿಸಿರುವ ಸಮಿತಿಯಲ್ಲಿ ನಮ್ಮ ರಾಜ್ಯದಿಂದ ಹಲವಾರು ನಾಯಕರಿಗೆ ಅವಕಾಶ ಸಿಕ್ಕಿದೆ. ತಾವು ಏನಾದರೂ ತಪ್ಪು ಮಾಡಿದರೆ ಸೂಕ್ಷ್ಮವಾಗಿ ಅದನ್ನು ಹೇಳಿದರೆ ಖಂಡಿತ ತಿಳಿದುಕೊಳ್ಳುತ್ತೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next