ಹೊಸದಿಲ್ಲಿ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷ ವಾಗಿರುವ ಕಾಂಗ್ರೆಸ್, 18 ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೂನ್ಯ ಸಂಪಾದನೆ ಮಾಡಿದೆ. ಕಾಂಗ್ರೆಸ್ ಈ ರಾಜ್ಯಗಳಲ್ಲಿ ಬಹುತೇಕ ನಿರ್ನಾಮವಾಗಿರುವುದಕ್ಕೆ ಇದು ಸಾಕ್ಷಿಯಾಗಿದೆ.
ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳ ಪ್ರಕಾರ ಇದೇ ಭಾನುವಾರ ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್ ಕ್ರಿಯಾ ಸಮಿತಿಯ ಸಭೆ ಕರೆಯಲಾಗಿದ್ದು ಈ ಸಭೆಯಲ್ಲಿ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಾರಿ ಕೇವಲ 52 ಸೀಟುಗಳನ್ನು ಮಾತ್ರವೇ ಗೆದ್ದಿದ್ದು, ಅದರ ಸೋಲು, ವೈಫಲ್ಯಗಳ ಕಾರಣಗಳನ್ನು ಕೂಡ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮೂಲಗಳು ಹೇಳಿವೆ.
2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೇವಲ 44 ಸೀಟು ಸಿಕ್ಕಿದ್ದವು. 2019ರ ಲೋಕಸಭಾ ಚುನಾವಣೆಯಲ್ಲೀಗ 52 ಸ್ಥಾನ ಸಿಕ್ಕಿರುವುದೇ ದೊಡ್ಡ ಸಂಗತಿ ಎಂದು ತಿಳಿಯಲಾಗಿದೆ.
ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿರುವ ರಾಜ್ಯಗಳೆಂದರೆ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಚಂಡೀಗಢ, ದಾದರ್ ಮತ್ತು ನಾಗರ ಹವೇಲಿ, ದಮನ್ ಮತ್ತು ದೀವ್, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ದಿಲ್ಲಿ, ರಾಜಸ್ಥಾನ, ಸಿಕ್ಕಿಂ, ತ್ರಿಪುರ ಮತ್ತು ಉತ್ತರಾಖಂಡ.
ಕಾಂಗ್ರೆಸ್‌ನ ಈ ಪರಿಯಲ್ಲಿ ನಿರ್ನಾಮವಾಗಿರುವ ಕಾರಣ ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಜ್ ಬಬ್ಬರ್ ಮತ್ತು ಒಡಿಶಾ ಕಾಂಗ್ರೆಸ್ ಅಧ್ಯಕ್ಷ ನಿರಂಜನ್ ಪಟ್ನಾಯಕ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.