ಹುಣಸೂರು: ದಿವಂಗತ ಶಾಸಕ ಚಿಕ್ಕಮಾದು ಹುಟ್ಟೂರಾದ ಹೊಸರಾಮನಹಳ್ಳಿಯಲ್ಲಿ ಅವರ ಅಗಲಿಕೆ ಬಳಿಕ ಅವರ ಕುಟುಂಬ ಕಾಂಗ್ರೆಸ್ ಸೇರಿದ್ದಲ್ಲದೆ, ಇಡೀ ಗ್ರಾಮವೇ ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತಿರುವುದು ಸಂತಸ ತಂದಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಹೇಳಿದರು.
ತಾಲೂಕಿನ ಹೊಸರಾಮನಹಳ್ಳಿಯಲ್ಲಿ ಚುನಾವಣಾ ವೆಚ್ಚಕ್ಕೆ ದೇಣಿಗೆ ನೀಡಿ ಬೆಂಬಲ ವ್ಯಕ್ತಪಡಿಸಿದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಜನಪ್ರತಿನಿಧಿಗಳೊಂದಿಗೆ ಗ್ರಾಮದ ಎಲ್ಲ ಬೀದಿಗಳಲ್ಲಿ ಸಂಚರಿಸಿ ಮತ ಯಾಚಿಸಿದ ವೇಳೆ ಮಾತನಾಡಿದ ಅವರು, ಗ್ರಾಮದಲ್ಲಿ ಹಲವಾರು ಅಭಿವೃದ್ಧಿ ಕೆಲಸ ಮಾಡಿಸಿರುವ ತೃಪ್ತಿ ನನಗಿದೆ ಎಂದರು.
ಪಕ್ಕದ ಹಳೇಬೀಡು, ಬಿಳಿಕೆರೆ, ಜೀನಹಳ್ಳಿ ಕೆರೆಗಳಿಗೆ ಹೊಸರಾಮನಹಳ್ಳಿ ಏತ ನೀರಾವರಿ ಯೋಜನೆ ಮೂಲಕ 25 ವರ್ಷಗಳ ನಂತರ ನೀರು ತುಂಬಿಸಿರುವೆ. ಆ ಮೂಲಕ ಅಂತರ್ಜಲ ವೃದ್ಧಿ ಹಾಗೂ ಜನ-ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ನೀಗಿಸಿದ್ದೇನೆಂಬ ತೃಪ್ತಿ ಇದೆ.
ಅದೇ ರೀತಿ ಲಕ್ಷ್ಮಣತೀರ್ಥ ನದಿಯ ಆಯರಹಳ್ಳಿ ಏತ ನೀರಾವರಿ ಯೋಜನೆಗೆ ಚೆಕ್ ಡ್ಯಾಂ ನಿರ್ಮಾಣ, ಚೋಳನಹಳ್ಳಿ ಕೆರೆ, ಬೋಲನಹಳ್ಳಿ ಕೆರೆ ಹಾಗೂ ಮೈದನಹಳ್ಳಿ ಕೆರೆಗಳಿಗೆ ನೀರು ಒದಗಿಸುವ ಯೋಜನೆ ಮಂಜೂರು ಮಾಡಿಸಿದ್ದೇನೆ. ಸಿದ್ದರಾಮಯ್ಯ ನೇತೃತ್ವದ ಸರಕಾರ ಹಲವು ಭಾಗ್ಯಗಳನ್ನು ಕಲ್ಪಿಸುವ ಮೂಲಕ ಬಡವರಿಗೆ ನೆರವಾಗಿದೆ.
ಕ್ಷೇತ್ರದ ಮತ್ತಷ್ಟು ಅಭಿವೃದ್ಧಿ ಮಾಡಲು ಜನ ಮತ್ತೆ ನನ್ನನ್ನು ಬೆಂಬಲಿಸಬೇಕೆಂದು ಹೇಳಿದರು. ಜಿಪಂ ಸದಸ್ಯೆ ಗೌರಮ್ಮ, ಮಾಜಿ ಸದಸ್ಯ ಮಂಜು, ಚಿಕ್ಕಮಾದು ಪುತ್ರಿ ಮಮತಾ, ತಾಪಂ ಮಾಜಿ ಸದಸ್ಯ ಸಿದ್ದನಾಯ್ಕ, ಗ್ರಾಪಂ ಮಾಜಿ ಅಧ್ಯಕ್ಷ ಚೌಡನಾಯ್ಕ, ಬಿಳಿಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣ್, ಯುವ ಅಧ್ಯಕ್ಷ ಸ್ವಾಮಿ ಇತರರಿದ್ದರು.
ಲಕ್ಷ ರೂ. ದೇಣಿಗೆ: ಹೊಸರಾಮನಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಗ್ರಾಮಸ್ಥರು ಅಭ್ಯರ್ಥಿ ಶಾಸಕ ಎಚ್.ಪಿ.ಮಂಜುನಾಥರಿಗೆ ಚುನಾವಣಾ ವೆಚ್ಚಕ್ಕಾಗಿ ಒಂದು ಲಕ್ಷ ರೂ. ದೇಣಿಗೆ ನೀಡಿದರು. ಸೆಸ್ಕ್ ನಿವೃತ್ತ ನೌಕರ ರಾಜಪ್ಪ 10 ಸಾವಿರ ರೂ. ವೈಯಕ್ತಿಕ ದೇಣಿಗೆ ನೀಡಿದರು.
ಪಕ್ಷ ಸೇರ್ಪಡೆ: ಗ್ರಾಪಂ ಸದಸ್ಯ ಶಿವಕುಮಾರ್, ಯಜಮಾನರಾದ ಮಹದೇವನಾಯ್ಕ, ಚೌಡನಾಯ್ಕ, ಸಿದ್ದನಾಯ್ಕ, ಬೋಳನಹಳ್ಳಿಯ ರವಿಕುಮಾರ್, ಮಾಜಿ ಅಧ್ಯಕ್ಷ ಚೌಡನಾಯ್ಕ, ಮಣಿಲಾಸಿದ್ದನಾಯ್ಕ ನೂರಾರು ಮಂದಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.