Advertisement

16 ಚುನಾವಣೆಯಲ್ಲಿ 10 ಬಾರಿ ಕಾಂಗ್ರೆಸ್‌ ಪ್ರಾಬಲ್ಯ

09:38 PM Apr 02, 2019 | Lakshmi GovindaRaju |

ತುಮಕೂರು: ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಸ್ಪರ್ಧಿಸುವ ಮೂಲಕ ದೇಶದ ಗಮನ ಸೆಳೆದಿರುವ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌, ಬಿಜೆಪಿ ನೇರ ಹಣಾಹಣಿ ನಡೆಸಲು ಸಜ್ಜಾಗಿದೆ. ಈ ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ ಕಾಂಗ್ರೆಸ್‌, ಬಿಜೆಪಿ ಪಕ್ಷಗಳೇ ಗೆಲುವು ಸಾಧಿಸುತ್ತಾ ಬಂದಿದ್ದು, ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಜೆಡಿಎಸ್‌ ಕ್ಷೇತ್ರವನ್ನು ಇನ್ನು ಮುಂದೆ ತನ್ನದಾಗಿಸಿಕೊಳ್ಳಲು ರಣವ್ಯೂಹ ರಚಿಸುತ್ತಿದೆ.

Advertisement

8 ವಿಧಾನಸಭಾ ಕ್ಷೇತ್ರ ಒಳಗೊಂಡಿರುವ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ 1952ರಿಂದ ಚುನಾವಣೆ ಪ್ರಾರಂಭವಾಗಿದ್ದು, 2014ರವರೆಗೆ 16 ಲೋಕಸಭಾ ಚುನಾವಣೆ ಕಂಡಿದೆ. ಏಪ್ರಿಲ್‌ 18ರಂದು 17ನೇ ಲೋಕಸಭಾ ಚುನಾವಣೆ ನಡೆಯಲಿದೆ. ಇದಕ್ಕಾಗಿ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಒಗ್ಗಟ್ಟಾಗಿ ಅಭ್ಯರ್ಥಿ ಕಣಕ್ಕಿಳಿಸಿವೆ.

ದೇವೇಗೌಡರಿಂದ ಪ್ರಚಾರ ಆರಂಭ: 8 ವಿಧಾನ ಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ 3 ಕ್ಷೇತ್ರಗಳಲ್ಲಿ ಶಾಸಕರಿದ್ದಾರೆ. ಕಾಂಗ್ರೆಸ್‌ನ ಒಂದು ಕ್ಷೇತ್ರದಲ್ಲಿ ಶಾಸಕರಿದ್ದಾರೆ. ಉಳಿದ 3 ಕ್ಷೇತ್ರಗಳಲ್ಲಿ ಜೆಡಿಎಸ್‌ ಪ್ರಾಬಲ್ಯವಿದೆ. ಕ್ಷೇತ್ರದಲ್ಲಿ ಬಿಜೆಪಿ 4 ಶಾಸಕರಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನಿಸಿ ಜೆಡಿಎಸ್‌ ಅಭ್ಯರ್ಥಿ ಗೆಲ್ಲುತ್ತಾರೆ ಎನ್ನುವ ಅಂದಾಜು ಮಾಡಿ ಮತ ಬೇಟೆಗೆ ಮುಂದಾಗಿದ್ದಾರೆ. ಜಿಲ್ಲೆಯ ಪಟ್ಟನಾಯಕನಹಳ್ಳಿಯಲ್ಲಿ ವಿವಿಧ ಹೋಮಾದಿ ಮಾಡಿ ಅಲ್ಲಿಂದ ಚಿಕ್ಕನಾಯಕನ ಹಳ್ಳಿ ವಿಧಾನಸಭಾ ಕ್ಷೇತ್ರ ಮೂಲಕ ಬುಕ್ಕಾಪಟ್ಟಣದಿಂದ ಪ್ರಚಾರ ಆರಂಭಿಸಿದ್ದಾರೆ.

ಕ್ಷೇತ್ರದ ನಾಡಿ ಮಿಡಿತ: ಈವರೆಗೂ ನಡೆದಿರುವ ಚುನಾವಣೆಯಲ್ಲಿ 10 ಬಾರಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಬಿಜೆಪಿ ನಾಲ್ಕು ಬಾರಿ ಗೆಲುವು, ಜೆಡಿಎಸ್‌ ಒಂದು ಬಾರಿ ಗೆಲುವು ಕಂಡಿದೆ. 2019ರ ಚುನಾವಣೆ ಮಹತ್ವದ ಚುನಾವಣೆಯಾಗಿದ್ದು, ಕಾಂಗ್ರೆಸ್‌, ಜೆಡಿಎಸ್‌ ಒಂದಾಗಿ ಒಮ್ಮತದ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಕಣಕ್ಕಿಳಿದಿದಾರೆ. ಇದೇ ಕ್ಷೇತ್ರದಲ್ಲಿ 3 ಬಾರಿ ಕಾಂಗ್ರೆಸ್‌ನಿಂದ, 1 ಬಾರಿ ಬಿಜೆಪಿಯಿಂದ ಗೆಲುವು ಸಾಧಿಸಿ ಕ್ಷೇತ್ರದ ನಾಡಿ ಮಿಡಿತ ಅರಿತಿರುವ ಜಿ.ಎಸ್‌.ಬಸವರಾಜ್‌ ಎದುರಾಳಿಯಾಗಿದ್ದಾರೆ.

ತಂತ್ರಗಾರಿಕೆ, ಮರು ತಂತ್ರಗಾರಿಕೆ: ತುಮಕೂರು ಕ್ಷೇತ್ರವನ್ನು ಜೆಡಿಎಸ್‌ ವಶಪಡಿಸಿಕೊಳ್ಳಬೇಕು ಎನ್ನುವ ಆಕಾಂಕ್ಷೆಯಿಂದ ಎಲ್ಲಾ ರೀತಿಯ ತಂತ್ರಗಾರಿಕೆಯನ್ನು ಜೆಡಿಎಸ್‌ ಮಾಡುತ್ತಿದೆ. ಬಿಜೆಪಿಯೂ ಮರು ತಂತ್ರಗಾರಿಕೆ ರೂಪಿಸಲು ಕಾರ್ಯಪ್ರವೃತ್ತವಾಗಿದೆ. ಈ ತಂತ್ರಗಾರಿಕೆಗಳ ನಡುವೆ ಕ್ಷೇತ್ರದ ಮತದಾರ ಎರಡೂ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು ಮುಂದೆ ಮತದಾರ ಯಾರ ಕೈಯಿಡಿಯುತ್ತಾನೆ ಎನ್ನುವುದನ್ನು ಕಾದು ನೋಡಬೇಕು.

Advertisement

17ನೇ ಲೋಕಸಭೆಗೆ 15 ಅಭ್ಯರ್ಥಿಗಳು ಸ್ಪರ್ಧೆ: ಇದೇ ಏಪ್ರಿಲ್‌ 18ರಂದು ನಡೆಯಲಿರುವ 17ನೇ ಲೋಕಸಭಾ ಚುನಾವಣೆಗೆ 15 ಮಂದಿ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಲು ಸ್ಪರ್ಧೆ ನಡೆಸುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ಜಾತ್ಯತೀತ ಜನತಾದಳದ ಅಭ್ಯರ್ಥಿ ಎಚ್‌.ಡಿ. ದೇವೇಗೌಡ, ಭಾರತೀಯ ಜನತಾ ಪಕ್ಷದ ಜಿ.ಎಸ್‌.ಬಸವರಾಜ್‌, ಭಾರತ ಕಮ್ಯುನಿಸ್ಟ್‌ ಪಕ್ಷದ ಎನ್‌.ಶಿವಣ್ಣ, ಬಹುಜನ ಸಮಾಜ ಪಕ್ಷದ ಕೆ.ಸಿ.ಹನುಮಂತರಾಯ,

ಉತ್ತಮ ಪ್ರಜಾಕೀಯ ಪಾರ್ಟಿಯ ಎಂ.ಆರ್‌.ಛಾಯಾಮೋಹನ್‌, ಅಂಬೇಡ್ಕರ್‌ ಸಮಾಜ ಪಾರ್ಟಿಯ ಸಿ.ಪಿ.ಮಹಾಲಕ್ಷ್ಮೀ, ಪಕ್ಷೇತರರಾದ ಕಪನಿಗೌಡ ಟಿ.ಎನ್‌.ಕುಮಾರಸ್ವಾಮಿ, ಜಿ.ನಾಗೇಂದ್ರ, ಪ್ರಕಾಶ್‌ ಆರ್‌.ಎ.ಜೈನ್‌, ಬಿ.ಎಸ್‌.ಮಲ್ಲಿಕಾರ್ಜುನ್‌, ಡಿ.ಶರಧಿಶಯನ ಕೆ.ವಿ.ಶ್ರೀನಿವಾಸ್‌ ಕಲ್ಕೆರೆ, ಜೆ.ಕೆ.ಸಮಿ, ಟಿ.ಬಿ.ಸಿದ್ದರಾಮೇಗೌಡ ಚುನಾವಣಾ ಕಣದಲ್ಲಿದ್ದಾರೆ.

ಈವರೆಗೆ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಪಕ್ಷ ಮತ್ತು ಅಭ್ಯರ್ಥಿಗಳು, ಮತಗಳು
-1952 ಕಾಂಗ್ರೆಸ್‌ ಸಿ.ಆರ್‌.ಬಸಪ್ಪ 116596
-1957 ಕಾಂಗ್ರೆಸ್‌ ಎಂ.ವಿ.ಕೃಷ್ಣಪ್ಪ 116863
-1962 ಕಾಂಗ್ರೆಸ್‌ ಎಂ.ವಿ.ಕೃಷ್ಣಪ್ಪ 119617
-1967 ಪಿಎಸ್‌ಪಿ ಕೆ.ಲಕ್ಕಪ್ಪ 115312
-1971 ಕಾಂಗ್ರೆಸ್‌ ಕೆ.ಲಕ್ಕಪ್ಪ 161779
-1977 ಕಾಂಗ್ರೆಸ್‌ ಕೆ.ಲಕ್ಕಪ್ಪ 237086
-1980 ಕಾಂಗ್ರೆಸ್‌ ಕೆ.ಲಕ್ಕಪ್ಪ 243229
-1984 ಕಾಂಗ್ರೆಸ್‌ ಜಿ.ಎಸ್‌.ಬಸವರಾಜ್‌ 265249
-1989 ಕಾಂಗ್ರೆಸ್‌ ಜಿ.ಎಸ್‌.ಬಸವರಾಜ್‌ 376878
-1991 ಬಿಜೆಪಿ ಎಸ್‌.ಮಲ್ಲಿಕಾರ್ಜುನಯ್ಯ 255168
-1996 ಜೆಡಿಎಸ್‌ ಸಿ.ಎನ್‌.ಭಾಸ್ಕರಪ್ಪ 192228
-1998 ಬಿಜೆಪಿ ಎಸ್‌.ಮಲ್ಲಿಕಾರ್ಜುನಯ್ಯ 327312
-1999 ಕಾಂಗ್ರೆಸ್‌ ಜಿ.ಎಸ್‌.ಬಸವರಾಜ್‌ 318922
-2004 ಬಿಜೆಪಿ ಎಸ್‌.ಮಲ್ಲಿಕಾರ್ಜುನಯ್ಯ 303016
-2009 ಬಿಜೆಪಿ ಜಿ.ಎಸ್‌.ಬಸವರಾಜ್‌ 331064
-2014 ಕಾಂಗ್ರೆಸ್‌ ಎಸ್‌.ಪಿ.ಮುದ್ದಹನುಮೇಗೌಡ 429868

* ಚಿ.ನಿ ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next