Advertisement

ಆಂಧ್ರದಲ್ಲಿ ನಾಯ್ಡುಗೆ “ಕೈ’ಕೊಟ್ಟ ಕಾಂಗ್ರೆಸ್‌

12:30 AM Jan 25, 2019 | Team Udayavani |

ಹೊಸದಿಲ್ಲಿ: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ(ಟಿಡಿಪಿ)ದೊಂದಿಗೆ ಮೈತ್ರಿ ಮಾಡಿಕೊಂಡು ಕೈ ಸುಟ್ಟುಕೊಂಡ ಕಾಂಗ್ರೆಸ್‌ ಈಗ ಮೈತ್ರಿಗೆ ಗುಡ್‌ಬೈ ಹೇಳಿದೆ. ಮುಂಬರುವ ಆಂಧ್ರಪ್ರದೇಶ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಟಿಡಿಪಿ ಜತೆ ಮೈತ್ರಿ ಇಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಊಮ್ಮನ್‌ ಚಾಂಡಿ ಘೋಷಿಸಿದ್ದಾರೆ.

Advertisement

ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಎಲ್ಲ 175 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಲೋಕಸಭೆ ಚುನಾವಣೆ ವೇಳೆ 25 ಲೋಕಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಟಿಡಿಪಿ ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವೇ ನಮ್ಮ ಜೊತೆ ಕೈಜೋಡಿಸಿದೆ. ಅದಕ್ಕೂ, ರಾಜ್ಯಕ್ಕೂ ಸಂಬಂಧವಿಲ್ಲ ಎಂದು ಚಾಂಡಿ ಹೇಳಿದ್ದಾರೆ.

ಕಾಂಗ್ರೆಸ್‌ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಚಂದ್ರಬಾಬು ನಾಯ್ಡು, ಟಿಡಿಪಿ ಕೂಡ ಏಕಾಂಗಿಯಾಗಿ ಕಣಕ್ಕಿಳಿಯಲಿದೆ ಎಂದು ಹೇಳಿದ್ದಾರೆ. ಇದೇ ವೇಳೆ, ಪಕ್ಷದ ಕೆಲವು ನಾಯಕರು, “ಕಾಂಗ್ರೆಸ್‌ ಮೈತ್ರಿ ಕಡಿದುಕೊಂಡಿದ್ದು ಒಳ್ಳೆಯದೇ ಆಯಿತು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಾಯ್ಡು, ಪ್ರತಿಪಕ್ಷಗಳ ಮಹಾಮೈತ್ರಿಗೆ ಸದ್ಯಕ್ಕೆ ಸಾಮೂಹಿಕ ನಾಯಕತ್ವ ಅಗತ್ಯ ಎಂದು ಹೇಳಿದ್ದರು.

ಪ್ರಿಯಾಂಕಾ ಅವರ ರಾಜಕೀಯ ಪ್ರವೇಶ ಮುಂದಿನ ಮೂರು ತಿಂಗಳಲ್ಲಿ ಗೇಮ್‌ಚೇಂಜರ್‌ ಆಗಲಿದೆ. ಅವರ ಸಾಮರ್ಥ್ಯ ಮತ್ತು ಅರ್ಹತೆ ಬಗ್ಗೆ ಎಲ್ಲರಿಗೂ ಗೊತ್ತಿದೆ.
ಸಚಿನ್‌ ಪೈಲಟ್‌, ರಾಜಸ್ಥಾನ ಉಪಮುಖ್ಯಮಂತ್ರಿ

ಪ್ರಿಯಾಂಕಾ ರಾಜಕೀಯ ಪ್ರವೇಶ‌ದಿಂದಾಗಿ ಅವರ ಪತಿ ರಾಬರ್ಟ್‌ ವಾದ್ರಾ ನಡೆಸಿ ರುವ ಭ್ರಷ್ಟಾಚಾರಗಳೆಲ್ಲವೂ ಮುನ್ನೆಲೆಗೆ ಬರಲಿದ್ದು, ಇದು ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎಗೆ ಲಾಭವಾಗಿ ಪರಿಣಮಿಸಲಿದೆ.
ಸುಶೀಲ್‌ ಮೋದಿ, ಬಿಹಾರ ಉಪಮುಖ್ಯಮಂತ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next