Advertisement

Congress ಅಸಮಾಧಾನ ಸ್ಫೋಟ; ಸತೀಶ್ ಜಾರಕಿಹೊಳಿ vs ಮಹೇಂದ್ರ ತಮ್ಮಣ್ಣವರ

07:16 PM Jun 06, 2024 | Team Udayavani |

ಬೆಳಗಾವಿ : ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷದೊಳಗೇ ಪ್ರಭಾವಿ ಸಚಿವ ಮತ್ತು ಶಾಸಕರ ನಡುವೆ ಸಮರ ಬಹಿರಂಗವಾಗಿದೆ.

Advertisement

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಕುಡಚಿ ಮೀಸಲು ಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆಯ ಆರೋಪ ಮಾಡಿರುವುದು ಕೋಲಾಹಲಕ್ಕೆ ಕಾರಣವಾಗಿದೆ.

ಮಹೇಂದ್ರ ತಮ್ಮಣ್ಣವರ ವಿರುದ್ಧ ಆಕ್ರೋಶ ಹೊರ ಹಾಕಿರುವ ಸಚಿವ ಸತೀಶ್ ಜಾರಕಿಹೊಳಿ, ‘ತಮ್ಮಣ್ಣವರಗೆ ಟಿಕೆಟ್ ಕೊಡಿಸಲು ನಾನು ಕಾರಣವಾಗಿದ್ದೇನೆ. ಒಂದು ವೇಳೆ ಅವರನ್ನು ಬೆಳೆಸುವ ಉದ್ದೇಶವಿಲ್ಲದಿದ್ದರೆ ಬೇರೆಯವರಿಗೆ ಟಿಕೆಟ್ ನೀಡುವಂತೆ ಸೂಚಿಸುತ್ತಿದ್ದೆ. ಮತದಾನಕ್ಕೆ ಮುನ್ನ ಮಹೇಂದ್ರ ತಮ್ಮಣ್ಣವರ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಚುನಾವಣೆಯಲ್ಲಿ ಅವರ ಸಂಬಂಧಿ ಶಂಭು ಕಲ್ಲೋಳಿಕರ ಪರವಾಗಿ ಕೆಲಸ ಮಾಡಿದ್ದಾರೆ’ ಎಂದು ಆರೋಪ ಮಾಡಿದ್ದಾರೆ.

‘ಕುಡಚಿಯಲ್ಲಿ ಶಂಭು ಕಲ್ಲೋಳಿಕರಗೆ ಕೇವಲ ಮೂರು ಸಾವಿರ ಮತಗಳು ಬಂದಿವೆ.ಮಹೇಂದ್ರ ತಮ್ಮಣ್ಣವರ ತಾಕತ್ತು ಅಷ್ಟೇ ಎಂದು ವ್ಯಂಗ್ಯವಾಡಿದ್ದಾರೆ.ನಾನು ಯಾವ ನಾಯಕರನ್ನು ತುಳಿಯುವ ಪ್ರಯತ್ನ ಮಾಡುತ್ತಿಲ್ಲ. ಪಕ್ಷದಲ್ಲಿ ಇದ್ದುಕೊಂಡು ಬೇರೆಯವರ ಪರವಾಗಿ ಮಹೇಂದ್ರ ತಮ್ಮಣ್ಣವರ ಕೆಲಸ ಮಾಡಿದ್ದಾರೆ’ ಎಂದು ಗಂಭೀರ ಆರೋಪ ಮಾಡಿರುವುದು ಕಾಂಗ್ರೆಸ್ ಪಕ್ಷದಲ್ಲಿರುವ ಅಸಮಾಧಾನದ ಹೋಗೆ ಹೊರ ಬಂದಿರುವುದನ್ನು ಸ್ಪಷ್ಟಪಡಿಸಿದೆ.

ತಮ್ಮಣ್ಣವರ ತಿರುಗೇಟು
‘ಕುಡಚಿ ಕ್ಷೇತ್ರದಿಂದ 22 ಸಾವಿರ ಮತಗಳ ಲಿಡ್ ಕೊಡಲಾಗಿದೆಯಾದರೂ ನಮ್ಮ ಏಳಿಗೆ ಸಹಿಸದ ಸಚಿವ ಸತೀಶ ಜಾರಕಿಹೊಳಿ ನನ್ನ ವಿರುದ್ದ ಅನಾವಶ್ಯಕ ಆರೋಪ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆ ಯಶಸ್ವಿಯಾಗಿ ಮುಗಿದಿದೆ. ಚುನಾವಣೆ ಪೂರ್ವದಿಂದಲೂ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದೇನೆ’ ಎಂದಿದ್ದಾರೆ.

Advertisement

‘ಕುಡಚಿ ಕ್ಷೇತ್ರದಲ್ಲಿ 22588 ಲಿಡ್ ಬಂದರೂ ನನ್ನ ಮೇಲೆ ಆರೋಪ ಮಾಡಿರುವುದು ಬೇಸರ ತರಿಸಿದೆ. ಜಾರಕಿಹೊಳಿ ಸ್ವಕ್ಷೇತ್ರದ ಯಮಕನಮರಡಿಯಲ್ಲಿ 57 ಸಾವಿರ ಲಿಡ್ ತೆಗೆದುಕೊಂಡಿದ್ದಾರೆ. ಆದರೆ ಲೋಕಸಭೆ ಚುನಾವಣೆಯಲ್ಲಿ 23 ಸಾವಿರ ಮಾತ್ರ ಕಾಂಗ್ರೆಸ್ ಪರವಾಗಿ ಮತಗಳು ಬಂದಿರುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಪ್ರತಿ ಸವಾಲು ಹಾಕಿದ್ದಾರೆ.

‘ಪಕ್ಷೇತರ ಶಂಭು ಕಲ್ಲೋಳಕರಗೆ ಬೆಂಬಲ ಕೊಟ್ಟಿರುವ ಆರೋಪಕ್ಕೆ ತಿರುಗೇಟ ನೀಡಿ, ಕಲ್ಲೋಳಕರ ಕುಡಚಿಯಲ್ಲಿ ಕೇವಲ 3400 ಮತಗಳು ಮಾತ್ರ ತೆಗೆದುಕೊಂಡಿದ್ದಾರೆ. ಒಂದು ವೇಳೆ ನಾನು ಅವರ ಪರವಾಗಿ ಕೆಲಸ ಮಾಡಿದರೆ ಅವರಿಗೆ 20 ಸಾವಿರ ಮತಗಳನ್ನು ಕೊಡಲಾಗುತ್ತಿತ್ತು.ಜಾರಕಿಹೊಳಿ ಅವರು ದಲಿತ ಸಮಾಜದ ಮುಖಂಡರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಮಾಜಿ ಶಾಸಕ ಶ್ಯಾಮ ಘಾಟಗೆ, ಮಹಾವೀರ ಮೋಹಿತೆ, ಪ್ರದೀಪ ಮಾಳಗೆ, ಸುರೇಶ ತಳವಾರ ಮನೆ ಹಿಡಿಸಿದ್ದಾರೆ’ ಎಂದು ಕಿಡಿ ಕಾರಿದರು.

‘ದಲಿತ ಸಮಾಜದ ಮೇಲೆ ಅವರಿಗೆ ಕಳಕಳಿ ಇದ್ದರೆ ದಲಿತ ನಾಯಕರನ್ನು ಬೆಳೆಸುವ ಕೆಲಸ ಮಾಡುತ್ತಿದ್ದರು. ಹೈಕಮಾಂಡ್ ಗೆ ದೂರು ನೀಡಿದರೆ ನಾನು ಉತ್ತರ ಕೊಡಲು ಸಿದ್ದ. ಸಚಿವರು ಮುಂಬರುವ ಜಿಪಂ, ತಾಪಂ, ಚುನಾವಣೆಯಲ್ಲಿ ಗೋಕಾಕ ಮತ್ತು ಅರಭಾವಿಯಲ್ಲಿ ಲಿಡ್ ತೋರಿಸಲಿ’ ಎಂದು ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next