ಚಿಕ್ಕಬಳ್ಳಾಪುರ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ನೂತನ ಸದಸ್ಯರನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ನೋಂದಣಿ ಮಾಡಿಕೊಳ್ಳುತ್ತಿದ್ದು, ಮಾರ್ಚ್ 31ರ ಮಾಸಾಂತ್ಯದವರೆಗೆ ಸುಮಾರು ಸಾವಿರದಷ್ಟು ನೂತನ ಸದಸ್ಯರ ಡಿಜಿಟಲ್ ನೋಂದಣಿ ಆಗಿದೆ ಎಂದು ಕೆಪಿಸಿಸಿ ಸದಸ್ಯ ವಿನಯ್ ಎನ್ (ಶ್ಯಾಮ್) ತಿಳಿಸಿದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ನೂರಾರು ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಡಿಜಿಟಲ್ ತಂತ್ರಜ್ಞಾನದ ಮೂಲಕ ಸದಸ್ಯತ್ವ ನೋಂದಣಿಯಲ್ಲಿ ಕಾಂಗ್ರೆಸ್ ಮುಖಂಡರುಗಳು ಪಾಲ್ಗೊಂಡಿದ್ದು, ನಾನೂ ಸಹ ಅನೇಕ ಗ್ರಾಮಗಳಿಗೆ ಭೇಟಿ ನೀಡಿ ಸದಸ್ಯತ್ವ ನೋಂದಣಿ ಮಾಡಿಕೊಳ್ಳುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಈ ಸದಸ್ಯತ್ವ ಅಭಿಯಾನದ ಸಂಖ್ಯೆ ಸುಮಾರು 50 ಸಾವಿರ ಮುಟ್ಟಲಿದೆ ಎಂದರು.
ಸದಸ್ಯತ್ವ ಅಭಿಯಾನ ಯಶಸ್ವಿ ಸಾಧ್ಯತೆ: ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಇನ್ನೂ ಹೆಚ್ಚು ಯಶಸ್ವಿ ಕಾಣುತ್ತಿತ್ತು. ಆದರೆ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರು, ಸಚಿವ ಡಾ.ಕೆ.ಸುಧಾಕರ್ ಆಡಳಿತದ ವೈಖರಿ ಹಾಗೂ ಹಿಟ್ಲರ್ ನಂತೆ ವರ್ತಿಸುತ್ತಿರುವ ಕಾರಣ ಕಾಂಗ್ರೆಸ್ ಪಕ್ಷಕ್ಕೆ ಸದಸ್ಯರಾಗಲು ಅನೇಕ ಕಡೆ ಸದಸ್ಯರುಗಳು ಹಿಂಜರಿಯುತ್ತಿದ್ದಾರೆ ಎಂದು ಆರೋಪಿಸಿದರು.
ಶರವೇಗದಲ್ಲಿ ಸದಸ್ಯತ್ವ ನೋಂದಣಿ: ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅತ್ಯಂತ ಕಡಿಮೆ ನೋಂದಣಿ ಆಗಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಈ ಕ್ಷೇತ್ರದಲ್ಲಿ ಇಲ್ಲಿನ ಎಲ್ಲಾ ಮುಖಂಡರುಗಳು ಐವತ್ತು ಸಾವಿರಕ್ಕೂ ಹೆಚ್ಚು ನೂತನ ಸದಸ್ಯರನ್ನು ಕಾಂಗ್ರೆಸ್ ಪಕ್ಷಕ್ಕೆ ಡಿಜಿಟಲ್ ಮೂಲಕ ನೋಂದಣಿ ಮಾಡಿಸಬೇಕು ಎಂದು ಆದೇಶಿಸಿದ್ದರು.
ಅವರ ಆದೇಶದ ಮೇರೆಗೆ ನಂತರದ ದಿನಗಳಲ್ಲಿ ಶರವೇಗದಲ್ಲಿ ಡಿಜಿಟಲ್ ಮೂಲಕ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಇನ್ನೂ ಎರಡು ವಾರಗಳ ಕಾಲ ಈ ನೋಂದಣಿ ಕಾರ್ಯಕ್ರಮದ ಅವಧಿ ವಿಸ್ತರಣೆ ಆಗಿರುವುದರಿಂದ ಮತ್ತಷ್ಟು ಹೆಚ್ಚು ಸದಸ್ಯರನ್ನು ಕಾಂಗ್ರೆಸ್ ಪಕ್ಷಕ್ಕೆ ನೋಂದಾಯಿಸಲು ಅವಕಾಶ ಲಭ್ಯವಾಗಿದೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕೆಪಿಸಿಸಿ ಸದಸ್ಯ ವಿನಯ್ ಎನ್ ಶ್ಯಾಮ್ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನ ನಡೆಯಿತು.