Advertisement

‘ಅಜ್ಜಿಗೆ ಅರಿವೆ ಚಿಂತೆ,ಮೊಮ್ಮಗಳಿಗೆ ಡಾಬಿನ ಚಿಂತೆ’:ಅರುಣ್ ಸಿಂಗ್ ಭೇಟಿಗೆ ಕಾಂಗ್ರೆಸ್ ಲೇವಡಿ

04:26 PM Jun 16, 2021 | Team Udayavani |

ಬೆಂಗಳೂರು: “ಅಜ್ಜಿಗೆ ಅರಿವೆ ಚಿಂತೆ, ಮೊಮ್ಮಗಳಿಗೆ ಡಾಬಿನ ಚಿಂತೆ” ಎನ್ನುವಂತೆ ರಾಜ್ಯದ ಜನತೆಗೆ ಬದುಕಿನ ಚಿಂತೆ, ಬಿಜೆಪಿಗೆ ಕುರ್ಚಿ ಕದನದ ಚಿಂತೆಯಾಗಿದೆ. ಒಂದು ಕಡೆ ಸಹಿ ಸಂಗ್ರಹಿಸುವವರು, ಮತ್ತೊಂದು ಕಡೆ ಪತ್ರ ಬರೆಯುವವರು, ಇನ್ನೊಂದು ಕಡೆ ಆ’ಸಂತೋಷಗೊಂಡವರು! ಎಂದಿಗೂ ಜನಪರವಾಗಿರದ ಬಿಜೆಪಿಗೆ ಅಧಿಕಾರ ಸಿಗುವುದು ರಾಜ್ಯಕ್ಕೆ ‘ಶಾಪ’ ತಟ್ಟಿದಂತೆ ಎಂದು ಕಾಂಗ್ರೆಸ್ ಟೀಕೆ ಮಾಡಿದೆ.

Advertisement

ಕರ್ನಾಟಕ ಕಾಂಗ್ರೆಸ್ ಟ್ವಿಟ್ಟರ್ ಖಾತೆಯಲ್ಲಿ ಬಿಜೆಪಿ ವಿರುದ್ಧ ಟೀಕೆಗಳ ಸುರಿಮಳೆಗೈಯಲಾಗಿದೆ.

ಅರುಣ್ ಸಿಂಗ್ ಅವರೇ, ‘ಕಟ್ಟೆ ಪಂಚಾಯ್ತಿ’ ನಡೆಸಲು ಓಡೋಡಿ ಬರುವ ತಾವು, ಜನರ ಸಮಸ್ಯೆಗಳ ಬಗ್ಗೆ ಚಿಂತನೆ ನಡೆಸಲು ಸಮಯವಿಲ್ಲವೇ? ಈ ಗತಿಗೆಟ್ಟ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಆಂತರಿಕ ಕಿತ್ತಾಟಗಳೇ ಸುದ್ದಿ ಮಾಡುತ್ತಿವೆ ಹೊರತು ಸಾಧನೆಗಳಲ್ಲ.ಈ ದುರಾಡಳಿತದ ಬಗ್ಗೆ ತಮಗೆ ಕನಿಷ್ಠ ವಿಷಾದ, ನಾಚಿಕೆ ಯಾವುದೂ ಇಲ್ಲವೇ ಎಂದು ಟೀಕಿಸಿದೆ.

ಇದನ್ನೂ ಓದಿ:ರಾಜ್ಯಕ್ಕಿಂದು ‘ಅರುಣಾ’ಗಮನ: ಕಮಲ ಪಾಳಯದಲ್ಲಿ ಕಳವಳ, ಬಿರುಸುಗೊಂಡ ಚಟುವಟಿಕೆ

ರಾಜ್ಯ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವಾಗ ಬಿಜೆಪಿ ಪಕ್ಷದ ಆಂತರಿಕ ಕಲಹ ತಾರಕಕ್ಕೇರಿದೆ. ಬೆಲೆ ಏರಿಕೆ, ನಿರುದ್ಯೋಗ, ಕೋವಿಡ್ ಮೂರನೇ ಅಲೆ, ಬ್ಲಾಕ್ ಫ‌ಂಗಸ್, ರೈತರ ಸಂಕಷ್ಟ, ಆರ್ಥಿಕ ಕುಸಿತಗಳ ಬಗ್ಗೆ ಚಿಂತಿಸಲು ಸಮಯವಿಲ್ಲದ ಬೇಜವಾಬ್ದಾರಿ ಬಿಜೆಪಿ ಸರ್ಕಾರಕ್ಕೆ ಕುರ್ಚಿ ಕದನ ನಡೆಸಲು ಮಾತ್ರ ಭರಪೂರ ಸಮಯವಿದೆ ಎಂದು ಲೇವಡಿ ಮಾಡಿದೆ.

Advertisement

ಬೆಲೆ ಏರಿಕೆಗೆ ಮೌನ, ನೆರೆ ಪರಿಹಾರಕ್ಕೆ ಮೌನ, ಆಕ್ಸಿಜನ್ ಕೇಳಿದಾಗ ಮೌನ, ರೆಮಿಡಿಸಿವಿರ್ ಕೇಳಿದಾಗ ಮೌನ, ಜಿಎಸ್‌ಟಿ ಬಾಕಿ ಕೇಳಿದಾಗ ಮೌನ, ಅಂಪೊಟರಿಸನ್ ಕೇಳಿದಾಗ ಮೌನ.. ಹೀಗೆ ಜನರ ವಿಷಯಗಳಿಗೆ ಮೌನ ವಹಿಸುವ ಬಿಜೆಪಿ ರಾಷ್ಟ್ರ ನಾಯಕರು ಕುರ್ಚಿ ಕಲಹ ನಿರ್ವಹಿಸಲು ಮಾತ್ರ ಗಡಿಬಿಡಿಯಲ್ಲಿ ಓಡೋಡಿ ಬರುತ್ತಾರೆ! ಬಿಜೆಪಿ ಆದ್ಯತೆ ಜನತೆಯಲ್ಲ, ಅಧಿಕಾರ ಎಂದು ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಕಿಡಿಕಾರಿದೆ.

Advertisement

Udayavani is now on Telegram. Click here to join our channel and stay updated with the latest news.

Next