ಮೈಸೂರು : ಆರೆಸ್ಸೆಸ್ ಹಿಂದುತ್ವ ಆಧಾರದ ಮೇಲೆ ಕೆಲಸ ಮಾಡುತ್ತಿದೆ ಎಂಬುದು ಅವರ ಆಕ್ಷೇಪವಾಗಿದ್ದು,ಹಿಂದುತ್ವದ ಆಧಾರದ ಮೇಲೆ ಆರೆಸ್ಸೆಸ್ ಬೃಹತ್ ಸಂಘಟನೆಯಾಗಿ ಬೆಳೆದಿದೆ. ಆರೆಸ್ಸೆಸ್ ಗೆ ದೇಶಾದ್ಯಂತ ಜನ್ನಮನ್ನಣೆ ಕೂಡ ದೊರೆತಿದೆ. 1925ರಿಂದ ಇದುವರೆಗೂ ನಿರಂತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ದೇಶದ ಏಕೈಕ ಸಂಘಟನೆ ಎಂದು ಸಂಸದ ವಿ. ಶ್ರೀನಿವಾಸಪ್ರಸಾದ್ ಹೇಳಿಕೆ ನೀಡಿದ್ದಾರೆ.
ದೇವನೂರು ಮಹದೇವರ ‘ಆರೆಸ್ಸೆಸ್ ಆಳ ಅಗಲ’ ಕೃತಿ ಅವರ ವೈಯಕ್ತಿಕ ಭಾವನೆ , ಎಂದ ಅವರು ಸಂಘಟನೆಯ ಸಿದ್ದಾಂತ ಮತ್ತು ನಿಲುವು ಬಗ್ಗೆ ಆಕ್ಷೇಪವಿರಬಹುದು, ಆದರೆ ಬೃಹತ್ ಸಂಘಟನೆಯನ್ನು ಈ ಕಾರಣಗಳಿಗಾಗಿ ನೈತಿಕವಾಗಿ ಕುಗ್ಗಿಸಲಾಗದು ಎಂದರು.
ಬಿಜೆಪಿಯವರು ಹೇಳಿರುವ ಡಬಲ್ ಇಂಜಿನ್ ಸರಕಾರ ಅನ್ನುವುದರಲ್ಲಿ ತಪ್ಪೇನಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಆಡಳಿತಲ್ಲಿರುವುದರಿಂದ, ರಾಜ್ಯಕ್ಕೆ ಕೇಂದ್ರ ಸರ್ಕಾರದ ಬಲ ಇರುವುದರಿಂದ ಅದನ್ನು ಡಬಲ್ ಇಂಜಿನ್ ಸರ್ಕಾರ ಅಂತಾ ಹೇಳಿದ್ದಾರೆ. ಪ್ರಧಾನಿ ಮೋದಿ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಇಬ್ಬರೂ ಸಂಭಾವಿತರು,ಆದರೆ ಇಂತಹ ನಾಯಕತ್ವ ಕಾಂಗ್ರೆಸ್ ನಲ್ಲಿಲ್ಲ. ಮೋದಿಯವರನ್ನು ಟೀಕಿಸುತ್ತಿಲೇ ಕಾಂಗ್ರೆಸ್ ಸರ್ವನಾಶ ಆಗುತ್ತಿದೆ. ಟೀಕಿಸಿದಷ್ಟು ಮೋದಿ ಪ್ರಬಲರಾಗಿ ಬೆಳೆದಿದ್ದಾರೆ. ಬೊಮ್ಮಾಯಿ ಅವರ ಸರಳತೆ, ವಿಧೇಯತೆ, ಜನರಿಗೆ ಸ್ಪಂದಿಸುವ ಗುಣ ನಿಜಕ್ಕೂ ಮೆಚ್ಚುವಂತದ್ದು.ಬೊಮ್ಮಾಯಿ ಅವಧಿ ಪೂರ್ಣಗೊಳಿಸುವುದರಲ್ಲಿ ಸಂಶಯವಿಲ್ಲ ಎಂದರು.
ಸಿಎಂಗೆ ಮಂಡಿ ನೋವಿನ ಸಮಸ್ಯೆ ಇರಬಹುದು, ಹೈಕಮಾಂಡ್ ಈ ವಿಚಾರ ನೋಡಿಕೊಳ್ಳುತ್ತದೆ. ಯಡಿಯೂರಪ್ಪ ಅವರು ಪಕ್ಷದಲ್ಲಿಯೇ ಇದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಬಗ್ಗೆ ಹೇಳಿದ್ದಾರೆ. ಹಾಗಾಗಿ ಅವರು ನೇಪಥ್ಯಕ್ಕೆ ಸರಿಯುವ ಮಾತೇ ಇಲ್ಲ. ಒಂದು ವೇಳೆ ಹಾಗಾದರೆ ಬಿಜೆಪಿಗೆ ಹೆಚ್ಚು ನಷ್ಟ ವಾಗಲ್ಲ. ಬಿಜೆಪಿಯನ್ನು ಹಿಂದೆ ಬೆಂಬಲಿಸುವವರು ಮುಂದೆಯೂ ಬೆಂಬಲಿಸುತ್ತಾರೆ. ಮೈಸೂರು ಭಾಗದಲ್ಲಿ ಮಾತ್ರ ಬಿಜೆಪಿಗೆ ಸಂಘಟನೆ ಕೊರತೆ ಇದೆ. ಇದರಿಂದಾಗಿ ಕೆಲವು ಚುನಾವಣೆಗಳಲ್ಲಿ ಸೋಲಾಗಿರಬಹುದು. ಆದರೆ ಸಾರ್ವತ್ರಿಕ ಚುನಾವಣೆ ನಡೆದರೆ ಬಿಜೆಪಿಯೇ ಮೇಲುಗೈ ಸಾಧಿಸುತ್ತದೆ. ಮೂರೂ ಪಕ್ಷಗಳು ನಡೆಸಿರುವ ಆಂತರಿಕ ಸಮೀಕ್ಷೆಯಲ್ಲೇ ಈ ವರದಿ ಬಂದಿದೆ ಎಂದರು.
ಸಿದ್ದರಾಮೋತ್ಸವ ಆಚರಣೆಯ ಅಗತ್ಯವಿರಲಿಲ್ಲ, ಅದರಿಂದಾಗಿ ಕಾಂಗ್ರೆಸ್ ನಲ್ಲಿಯೇ ಗೊಂದಲಗಳು ಆರಂಭವಾಗಿವೆ. ಸಿದ್ದರಾಮಯ್ಯ ಮಹಾನ್ ಸುಳ್ಳುಗಾರ. ಅವರ ಹಸಿ ಸುಳ್ಳುಗಳನ್ನು ಕಂಡು ನನಗೂ ಆಶ್ಚರ್ಯವಾಗಿದೆ.ರಾಜಕೀಯ ಅಸ್ತಿತ್ವ ರೂಪಿಸಿಕೊಂಡು ಜಿಲ್ಲೆಯಲ್ಲೇ ಸೋತು ಸುಣ್ಣವಾಗಿದ್ದಾರೆ. ಮುಖ್ಯಮಂತ್ರಿಯಾಗಿ 36 ಸಾವಿರ ಮತಗಳಿಂದ ಸೋತಿದ್ದೇಕೆ. ರಾತ್ರೋರಾತ್ರಿ ಚಾಮುಂಡೇಶ್ವರಿ ಬಿಟ್ಟು ಬಾದಾಮಿಗೆ ಪಲಾಯನ ಮಾಡಿದ್ದೇಕೆ. ಇದೇ ಕಾರಣಕ್ಕೆ ನಾನು ಹೇಳಿರೋದು,ಸಿದ್ದರಾಮೋತ್ಸವನ್ನ ಮುಂದೆ ಒಂಟಿಕೊಪ್ಪಲ್ ಪಂಚಾಂಗದಲ್ಲಿ ಸೇರಿಸಬೇಕು ಎಂದು. ಕೇವಲ ತಮ್ಮ ಶಕ್ತಿ ಪ್ರದರ್ಶನಕ್ಕಾಗಿ ಈ ಉತ್ಸವ ಮಾಡುತ್ತಿರುವುದು ಬಿಟ್ಟರೆ ಇನ್ನಾವ ಕಾರಣವಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮಧ್ಯೆ ಮೇಕೆದಾಟುವಿಂದ ಶುರುವಾಗಿರುವ ಜಗಳ ಸಿದ್ದರಾಮೋತ್ಸವಕ್ಕೂ ಮುಂದುವರಿದಿದೆ ಎಂದರು.