ಯಾದಗಿರಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿ ಕೈಬಿಡಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನಾ ರ್ಯಾಲಿ ನಡೆಸಿ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಆರಂಭವಾದ ಪ್ರತಿಭಟನಾ ರ್ಯಾಲಿ ತಹಶೀಲ್ದಾರ್ ಕಚೇರಿ ವರೆಗೆ ನಡೆಯಿತು. ಈ ವೇಳೆ ಮಾತನಾಡಿದ ಕಾಂಗ್ರೆಸ್
ಮುಖಂಡರು, ದೆಹಲಿಯಲ್ಲಿ ರೈತರು ಸುಮಾರು ತಿಂಗಳಿಂದ ಸರ್ಕಾರದ ನೀತಿಯನ್ನು ವಿರೋಧಿಸಿ ಧರಣಿ ನಡೆಸುತ್ತಿದ್ದರೂ ಆಳುವವರು ರೈತರ ಗೋಳು ಕೇಳುತ್ತಿಲ್ಲ ಎಂದು ದೂರಿದರು.
ಈ ಸರ್ಕಾರ ರೈತರಷ್ಟೇ ಅಲ್ಲದೆ ಬಡ ವರ್ಗಗಳ ಮೇಲೂ ಬರೆ ಎಳೆಯುವ ಕೆಲಸ ಮಾಡಿದ್ದು, ನಿತ್ಯ ಉಪಯೋಗಿ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಜನ ಸಾಮಾನ್ಯರು ಕೆಜಿ ಎಣ್ಣೆಗೆ 160 ರೂ. ನೀಡಿ ಖರೀದಿಸುವ ಕಾಲ ಬಂದಿದೆ. ಇನ್ನು ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ಬೆಲೆ ಏರಿಕೆಯಿಂದ ಸಾರ್ವಜನಿಕರ ಜೀವನದ ಮೇಲೆ ಸಾಕಷ್ಟು ಪ್ರಭಾವ ಬೀರಿದೆ ಎಂದು ಹೇಳಿದರು.
ನಗರ ಮಂಡಲ ಅಧ್ಯಕ್ಷ ಸುದರ್ಶನ ನಾಯಕ್, ಬ್ಲಾಕ್ ಅಧ್ಯಕ್ಷ ಮರೆಪ್ಪ ಬಿಳಾರ್, ಮಾಜಿ ಕಾಡಾ ಅಧ್ಯಕ್ಷ ಶ್ರೀನಿವಾಸ್‌ರೆಡ್ಡಿ ಕಂದುಕೂರ, ಜಿಲ್ಲಾ ಕಿಸಾನ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಾಣಿಕರೆಡ್ಡಿ ಕುರುಕುಂದಿ, ಮಂಜುಳಾ ಗೂಳಿ, ರಾಘವೇಂದ್ರ ಮಾನಸಗಲ್, ಅಬ್ದುಲ್ ರಝಾಕ್, ಶರಣಪ್ಪ ಎಂ ಕುಲೂರ್, ನಗರಸಭೆ ಸದಸ್ಯರಾದ ವೆಂಕಟರೆಡ್ಡಿ ಮನಿಕೇರಿ, ಗಣೇಶ್ ದುಪ್ಪಲ್ಲಿ, ಹನುಮಂತ ನಾಯಕ್, ಚೆನ್ನಕೇಶವ ಗೌಡ, ಬಸರಾಜ್ ಸೊನ್ನದ್, ಭೀಮರಾಯ ಭಾರಿಗಿಡ ಇದ್ದರು.