ಬೆಂಗಳೂರು: ಅಭಿವೃದ್ಧಿ ಕಾಮಗಾರಿ ಮತ್ತು ಯೋಜನೆಗಳ ಹೆಸರಲ್ಲಿ ಕಳೆದೊಂದು ತಿಂಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಜಾರಿಗೆ ತಂದಿರುವ 20 ಸಾವಿರ ಕೋಟಿಗೂ ಅಧಿಕ ಮೊತ್ತದ ಟೆಂಡರ್ ಮತ್ತು ಬಿಡ್‌ಗಳನ್ನು ತಡೆಹಿಡಿಯಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಈ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಮೂಲಕ ಕೇಂದ್ರ ಚುನಾವಣ ಆಯೋಗಕ್ಕೆ ಮಾ.31ರಂದು ಪತ್ರ ಬರೆದಿದ್ದಾರೆ.
ಲೋಕೋಪಯೋಗಿ, ನೀರಾವರಿ, ಆರೋಗ್ಯ, ರೈಲ್ವೇ ಇಲಾಖೆಗಳಿಗೆ ಸಂಬಂಧಿಸಿದ ವಿವಿಧ ಕಾಮಗಾರಿಗಳು ಮತ್ತು ಯೋಜನೆಗಳಿಗೆ ಟೆಂಡರ್‌ಗಳನ್ನು ಕರೆಯಲಾಗಿದೆ. ಇದರ ಮೊತ್ತ 20 ಸಾವಿರ ಕೋಟಿಗೂ ಅಧಿಕವಾಗಿದೆ. ಈ ಕಾಮಗಾರಿಗಳ ಯಶಸ್ವಿ ಬಿಡ್‌ದಾರರಿಂದ 40 ಪರ್ಸೆಂಟ್ ಕಮಿಷನ್ ಪಡೆದು ಆ ಹಣವನ್ನು ವಿಧಾನಸಭೆ ಚುನಾವಣೆಗೆ ಬಳಸಿಕೊಳ್ಳುವ ಇರಾದೆ ಆಡಳಿತಾರೂಢ ಪಕ್ಷ ಇಟ್ಟುಕೊಂಡಿದೆ. ಆದ್ದರಿಂದ ರಾಜ್ಯ ಮತ್ತು ಕೇಂದ್ರ ಸರಕಾರ ತರಾತುರಿಯಲ್ಲಿ ಟೆಂಡರ್‌ಗಳನ್ನು ಹೊರಡಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಗುತ್ತಿಗೆ ಕಾಮಗಾರಿಗಳಲ್ಲಿ ಸರಕಾರ 40 ಪರ್ಸೆಂಟ್ ಕಮಿಷನ್ ಪಡೆದುಕೊಳ್ಳುತ್ತಿದೆ ಎಂದು ಆರೋಪಿಸಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ 2021ರ ಜೂ.7ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು. ಇದೇ ವಿಚಾರವಾಗಿ ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ನಿವಾಸದಲ್ಲಿ ಲೋಕಾಯುಕ್ತ ಪೊಲೀಸರು 8 ಕೋಟಿ ರೂ.ಗಳನ್ನು ಜಪ್ತಿ ಮಾಡಿದ್ದಾರೆ. ಹೀಗಾಗಿ, ಪಾರದರ್ಶಕ, ನ್ಯಾಯಮಸಮ್ಮತ ಚುನಾವಣೆ ದೃಷ್ಟಿಯಿಂದ ಹಳೆಯ ದಿನಾಂಕಗಳನ್ನು ನಮೂದಿಸಿ ಹೊರಡಿಸಲಾಗಿರುವ ಟೆಂಡರ್‌ಗಳನ್ನು ತಡೆ ಹಿಡಿಯಬೇಕು ಮತ್ತು ಸೂಕ್ತ ಕಾನೂನು ಕ್ರಮಗಳನ್ನು ಜರಗಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಆಯೋಗದ ಅಧಿಕಾರಿಗಳ ವಿರುದ್ಧವೇ ಕೈ ದೂರು
ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಒಂದೇ ಇಲಾಖೆ ಅಥವಾ ಒಂದೇ ಕಡೆ ಅನೇಕ ವರ್ಷಗಳಿಂದ ಠಿಕಾಣಿ ಹೂಡಿರುವ ಅಧಿಕಾರಿಗಳನ್ನು ಎತ್ತಂಗಡಿ ಮಾಡಬೇಕು ಎಂಬ ಬೇಡಿಕೆ ಸಾಮಾನ್ಯವಾಗಿ ಇರುತ್ತದೆ. ಆದರೆ, ಕಾಂಗ್ರೆಸ್ ಪಕ್ಷ ಚುನಾವಣ ಆಯೋಗದಲ್ಲಿರುವ ಅಧಿಕಾರಗಳ ವಿರುದ್ಧವೇ ಆಕ್ಷೇಪವೆತ್ತಿದೆ.
ಈ ವಿಚಾರವಾಗಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಜಂಟಿಯಾಗಿ ಕೇಂದ್ರ ಚುನಾವಣ ಆಯೋಗಕ್ಕೆ ದೂರು ಪತ್ರ ಸಲ್ಲಿಸಿದ್ದಾರೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ರಾಘವೇಂದ್ರ 9 ವರ್ಷಗಳಿಂದ ಜ್ಞಾನೇಶ್ 6 ವರ್ಷ, ಪ್ರಾಣೇಶ್ 5 ವರ್ಷ ಮತ್ತು ಯೋಗೇಶ್ ಮೂರು ವರ್ಷಕ್ಕಿಂತ ಅಧಿಕ ಅವಧಿಯಿಂದ ಇದ್ದಾರೆ. ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆಯ ದೃಷ್ಟಿಯಿಂದ ಈ ಅಧಿಕಾರಿಗಳು ತತ್‌ಕ್ಷಣ ಅವರ ಮಾತೃ ಇಲಾಖೆಗಳಿಗೆ ವರ್ಗಾವಣೆ ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.