Advertisement

ಸಂಪುಟ ವಿಸ್ತರಣೆ; ಕಾಂಗ್ರೆಸ್‌ ದಿಲ್ಲಿ ಚಲೋ

06:00 AM Aug 17, 2017 | |

ಬೆಂಗಳೂರು: ವಾರವೊಂದರಲ್ಲಿ ಎರಡೆರಡು ಬಾರಿ ಕರ್ನಾಟಕಕ್ಕೆ ಭೇಟಿ ನೀಡಿರುವ ಕಾಂಗ್ರೆಸ್‌ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್‌ ಗಾಂಧಿ ರಾಜ್ಯದಲ್ಲಿ ಈಗಲೇ ರಾಜಕೀಯ ಚಟುವಟಿಕೆಯ ದೂಳೆಬ್ಬಿಸಿದ್ದಾರೆ. ಬುಧವಾರ ನಗರಕ್ಕೆ ಆಗಮಿಸಿ ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದಿಲ್ಲಿಗೆ ಮರಳಿದ ಬೆನ್ನಲ್ಲೇ ರಾಜ್ಯ ನಾಯಕರು ಸಂಪುಟ ವಿಸ್ತರಣೆ ಕಾರಣಕ್ಕಾಗಿ ರಾಜಧಾನಿಯತ್ತ ಮುಖ ಮಾಡಿದ್ದಾರೆ.

Advertisement

ಈಗಾಗಲೇ ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌, ಕಾರ್ಯಾಧ್ಯಕ್ಷರಾದ ದಿನೇಶ್‌ ಗುಂಡೂರಾವ್‌, ಎಸ್‌.ಆರ್‌.ಪಾಟೀಲ್‌, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಗುರುವಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್‌ ಗಾಂಧಿ ಜೊತೆಗೆ ಚರ್ಚೆ ನಡೆಸಲಿದ್ದಾರೆ. ಇನ್ನೊಂದೆಡೆ, ಕಾಂಗ್ರೆಸ್‌ ಹೊಸ್ತಿಲಲ್ಲಿರುವ ಜೆಡಿಎಸ್‌ ಬಂಡಾಯ ಶಾಸಕರು ಹೈಕಮಾಂಡ್‌ ಭೇಟಿಗಾಗಿ ದೆಹಲಿಗೆ ತೆರಳಿದ್ದಾರೆ.

ಈಗಾಗಲೇ ಸಚಿವಾಕಾಂಕ್ಷಿಗಳೂ ಕೂಡ ದೆಹಲಿಗೆ ತೆರಳಿದ್ದು, ತಮ್ಮ ನಾಯಕರ ಮೂಲಕ ಸಂಪುಟ ಸೇರಲು ಲಾಬಿ ಮುಂದುವರೆಸಿದ್ದಾರೆ. ಎಚ್‌.ಎಸ್‌. ಮಹದೇವ ಪ್ರಸಾದ್‌ ನಿಧನ, ಡಾ.ಜಿ.ಪರಮೇಶ್ವರ ಹಾಗೂ ಎಚ್‌.ವೈ ಮೇಟಿ ರಾಜಿನಾಮೆಯಿಂದ ಮೂರು ಸ್ಥಾನಗಳು ಖಾಲಿಯಾಗಿದ್ದು, ಜಾತಿ ಲೆಕ್ಕಾಚಾರದಲ್ಲಿ ಸ್ಥಾನ ಭರ್ತಿ ಮಾಡುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ.

ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆರ್‌.ಬಿ. ತಿಮ್ಮಾಪುರ, ಸಿದ್ದು ನ್ಯಾಮಗೌಡ, ಸಿ.ಎಸ್‌. ನಾಡಗೌಡ, ಅಶೋಕ ಪಟ್ಟಣ, ರಾಜಶೇಖರ ಪಾಟೀಲ್‌ ಹುಮ್ನಾಬಾದ್‌, ಷಡಕ್ಷರಿ, ಎಚ್‌.ಎಂ. ರೇವಣ್ಣ, ಸಿ.ಎಸ್‌. ಶಿವಳ್ಳಿ , ಶಿವರಾಜ್‌ ತಂಗಡಗಿ, ಪಿ.ಎಂ. ನರೇಂದ್ರಸ್ವಾಮಿ ದೆಹಲಿಗೆ ತೆರಳಿದ್ದು, ತಮ್ಮ ಪರವಾಗಿ ಲಾಬಿ ಮುಂದುವರೆಸಿದ್ದಾರೆ.

ಹಳೆ ಮೈಸೂರು ಭಾಗದಲ್ಲಿ  ಲಿಂಗಾಯತ ಮತ್ತು ದಲಿತ ಸಮುದಾಯಕ್ಕೆ ಸೇರಿದ ಇಬ್ಬರು ಸಚಿವರ ಸ್ಥಾನಗಳು ಖಾಲಿಯಾಗಿರುವುದರಿಂದ ಆ ಭಾಗದಲ್ಲಿ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಲಿಂಗಾಯತರ ಕೋಟಾದಡಿ ತಿಪಟೂರು ಶಾಸಕ ಷಡಕ್ಷರಿ ಪರವಾಗಿ ಪರಮೇಶ್ವರ್‌ ಒಲವು ತೋರಿದ್ದು, ದಲಿತರ ಕೋಟಾದಲ್ಲಿ ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಪೈಪೋಟಿ ನಡೆಸುತ್ತಿದ್ದಾರೆ.

Advertisement

ಉತ್ತರ ಕರ್ನಾಟಕ ಭಾಗದಲ್ಲಿ ಕುರುಬ ಸಮುದಾಯಕ್ಕೆ ಸೇರಿದ ಎಚ್‌.ವೈ ಮೇಟಿ ಅವರಿಂದ ತೆರವಾದ ಸ್ಥಾನಕ್ಕೆ ಮತ್ತೆ ಅವರೂ ಸಂಪುಟ ಸೇರಲು ತೆರೆ ಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ ಎನ್ನಲಾಗಿದೆ. ತಮ್ಮ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಹಗರಣದ ಪ್ರಕರಣಕ್ಕೆ ಕ್ಲೀನ್‌ ಚಿಟ್‌ ಸಿಕ್ಕಿರುವುದರಿಂದ ಆರೋಪದಿಂದ ಹೊರ ಬಂದಿರುವ ತಮಗೇ ಸಚಿವ ಸ್ಥಾನ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಚುನಾವಣೆ ವರ್ಷವಾಗಿರುವುದರಿಂದ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ಹೈ ಕಮಾಂಡ್‌ ಅವರನ್ನು ಸಂಪುಟಕ್ಕೆ ಸೇರಿಕೊಳ್ಳುವ “ರಿಸ್ಕ್’ ತೆಗೆದುಕೊಳ್ಳುವುದು ಅನುಮಾನ ಎನ್ನಲಾಗುತ್ತಿದೆ.

ಆದರೆ, ಅದೇ ಸಮುದಾಯಕ್ಕೆ ಸೇರಿರುವ ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ. ರೇವಣ್ಣ ಹಾಗೂ ಕುಂದಗೋಳ ಶಾಸಕ ಸಿ.ಎಸ್‌. ಶಿವಳ್ಳಿ ತೀವ್ರ ಪೈಪೋಟಿ ನಡೆಸಿದ್ದಾರೆ. ಈ ನಡುವೆ ಭೋವಿ ಸಮುದಾಯಕ್ಕೆ ಸೇರಿರುವ ಶಿವರಾಜ್‌ ತಂಗಡಗಿ ತಮ್ಮ ಸಮುದಾಯದವರು ಯಾರೂ ಸಚಿವರಿಲ್ಲ ಎಂಬ ಕಾರಣಕ್ಕೆ ಮತ್ತೆ ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಇನ್ನು ಲಿಂಗಾಯತ ಸಮುದಾಯಕ್ಕೆ ಸೇರಿರುವ ಸವದತ್ತಿ ಶಾಸಕ ಅಶೋಕ್‌ ಪಟ್ಟಣ ಬೆಳಗಾವಿ ಜಿಲ್ಲೆಗೆ ಇನ್ನೊಂದು ಮಂತ್ರಿ ಸ್ಥಾನ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಭಾಲ್ಕಿ ಶಾಸಕ ರಾಜಶೇಖರ ಪಾಟೀಲ್‌, ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ, ಮುದ್ದೆಬಿಹಾಳ್‌ ಶಾಸಕ ಸಿ.ಎಸ್‌. ನಾಡಗೌಡ ಹಿರಿತನದ ಆಧಾರದಲ್ಲಿ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಆರ್‌.ಬಿ. ತಿಮ್ಮಾಪುರ್‌ ದಲಿತ ಕೋಟಾದಲ್ಲಿ ಸಂಪುಟ ಸೇರಲು ಕಸರತ್ತು ನಡೆಸಿದ್ದಾರೆ.

ಗೃಹ ಖಾತೆ ಲೆಕ್ಕಾಚಾರ
ಪರಮೇಶ್ವರ್‌ ರಾಜೀನಾಮೆಯಿಂದ ಖಾಲಿಯಾಗಿರುವ ಗೃಹ ಖಾತೆಯನ್ನು ಯಾರಿಗೆ ಕೊಡಬೇಕೆಂಬ ಬಗ್ಗೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್‌ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಅನೇಕ ಹಿರಿಯ ಸಚಿವರು ಗೃಹ ಸಚಿವ ಸ್ತಾನ ನಿರಾಕರಿಸಿದ್ದಾರೆ. ಆದರೆ, ಹಿರಿಯ ಸಚಿವರಾಗಿರುವ ರಮಾನಾಥ ರೈ ಗೃಹ ಖಾತೆ ವಹಿಸಿಕೊಳ್ಳಲು ಸಮ್ಮತಿ ಸೂಚಿಸಿದ್ದು, ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಹೈ ಕಮಾಂಡ್‌ ಒಲವು ತೋರದಿದ್ದಲ್ಲಿ ಯಾರಿಗೆ ನೀಡಬೇಕೆಂಬ ಕುರಿತು ತೀರ್ಮಾನ ಮಾಡಲಿದ್ದಾರೆ.

ಗುಜರಾತ್‌ ಶಾಸಕರನ್ನು ರಾಜ್ಯಕ್ಕೆ ಕರೆ ತಂದು ರಕ್ಷಣೆ ನೀಡಿದ ಹಿನ್ನೆಲೆಯಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೆ ಗೃಹ ಖಾತೆ ನೀಡಬೇಕೆಂಬ ಬೇಡಿಕೆ ಕೇಳಿ ಬಂದಿದೆ. ಅವಕಾಶ ನೀಡಿದರೆ, ನಿಭಾಯಿಸಲು ಡಿ.ಕೆ.ಶಿವಕುಮಾರ್‌ ಕೂಡ ಸಿದ್ದರಿರುವುದರಿಂದ ಹೈ ಕಮಾಂಡ್‌ ಗುಜರಾತ್‌ ರಾಜ್ಯಸಭೆ ಚುನಾವಣೆಯಲ್ಲಿ ಅಹಮದ ಪಟೇಲ್‌ ಗೆಲುವಿಗೆ ಕಾರಣವಾಗಿರುವ ಡಿ.ಕೆ. ಶಿವಕುಮಾರ್‌ಗೆ ಕೊಡುಗೆಯಾಗಿ ಗೃಹ ಖಾತೆ ನೀಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.ಪರಿಷತ್‌ ಅಭ್ಯರ್ಥಿ ಆಯ್ಕೆ ಇದೇ ವೇಳೆ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಒಂದು ಸ್ಥಾನ ಖಾಲಿ ಇರುವುದರಿಂದ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆಯೂ ಇಂದಿನ ಸಭೆಯಲ್ಲಿ ಚರ್ಚೆ ನಡೆಯಲಿದೆ. ಈಗಾಗಲೇ ಹತ್ತಕ್ಕೂ ಹೆಚ್ಚು ಜನರು ಆಕಾಂಕ್ಷಿಗಳು ಲಾಬಿ ನಡೆಸುತ್ತಿದ್ದು, ಕೆಲವರು ದೆಹಲಿಗೂ ತೆರಳಿದ್ದಾರೆ. 

ಮಾಜಿ ಸಚಿವೆ ರಾಣಿ ಸತೀಶ್‌, ಭಾರತಿ ಶಂಕರ, ಮಾಜಿ ಮೇಯರ್‌ ರಾಮಚಂದ್ರಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜೆ.ಸಿ. ಚಂದ್ರಶೇಖರ ಅವರ ಹೆಸರುಗಳು ಮುಂಚೂಣಿಯಲ್ಲಿ ಕೇಳಿ ಬರುತ್ತಿವೆಯಾದರೂ, ಚುನಾವಣೆ ದೃಷ್ಠಿಯಿಂದ ಅಲ್ಪ ಸಂಖ್ಯಾತರಿಗೆ ನೀಡಬೇಕೆಂದು ಮುಖ್ಯಮಂತ್ರಿ ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗುತ್ತಿದ್ದು, ಅವರ ಆಪ್ತ ಹಾಗೂ ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ ಮೂಗಳು ತಿಳಿಸಿವೆ.

ಗೃಹ ಖಾತೆ ಲೆಕ್ಕಾಚಾರ
ಪರಮೇಶ್ವರ್‌ ರಾಜೀನಾಮೆಯಿಂದ ಖಾಲಿಯಾಗಿರುವ ಗೃಹ ಖಾತೆಯನ್ನು ಯಾರಿಗೆ ಕೊಡಬೇಕೆಂಬ ಬಗ್ಗೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್‌ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಅನೇಕ ಹಿರಿಯ
ಸಚಿವರು ಗೃಹ ಸಚಿವ ಸ್ಥಾನ ನಿರಾಕರಿಸಿದ್ದಾರೆ. ಆದರೆ, ಹಿರಿಯ ಸಚಿವರಾಗಿರುವ ರಮಾನಾಥ ರೈ ಗೃಹ ಖಾತೆ ವಹಿಸಿಕೊಳ್ಳಲು ಸಮ್ಮತಿ ಸೂಚಿಸಿದ್ದು, ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಹೈ ಕಮಾಂಡ್‌ ಒಲವು ತೋರದಿದ್ದಲ್ಲಿ ಯಾರಿಗೆ ನೀಡಬೇಕೆಂಬ ಕುರಿತು ತೀರ್ಮಾನ ಮಾಡಲಿದ್ದಾರೆ.

ಗುಜರಾತ್‌ ಶಾಸಕರನ್ನು ರಾಜ್ಯಕ್ಕೆ ಕರೆ ತಂದು ರಕ್ಷಣೆ ನೀಡಿದ ಹಿನ್ನೆಲೆಯಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೆ ಗೃಹ ಖಾತೆ ನೀಡಬೇಕೆಂಬ ಬೇಡಿಕೆ ಕೇಳಿ ಬಂದಿದೆ. ಅವಕಾಶ ನೀಡಿದರೆ, ನಿಭಾಯಿಸಲು ಡಿ.ಕೆ. ಶಿವಕುಮಾರ್‌ ಕೂಡ ಸಿದ್ದರಿರುವುದರಿಂದ ಹೈ ಕಮಾಂಡ್‌ ಗುಜರಾತ್‌ ರಾಜ್ಯಸಭೆ ಚುನಾವಣೆಯಲ್ಲಿ ಅಹಮದ ಪಟೇಲ್‌ ಗೆಲುವಿಗೆ ಕಾರಣವಾಗಿರುವ ಡಿ.ಕೆ. ಶಿವಕುಮಾರ್‌ಗೆ ಕೊಡುಗೆಯಾಗಿ ಗೃಹ ಖಾತೆ ನೀಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next