Advertisement

ಮಂಗಳೂರಲ್ಲಿ “ಕೈ’ನಿಯೋಗ ತಡೆದ ಪೊಲೀಸರು

10:31 AM Dec 22, 2019 | Team Udayavani |

ಬೆಂಗಳೂರು: ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರ ಗೋಲಿಬಾರ್‌ಗೆ ಮೃತರಾಗಿರುವ ಇಬ್ಬರ ಕುಟುಂಬದವರಿಗೆ ಸಾಂತ್ವನ ಹೇಳಲು ಮಂಗಳೂರಿಗೆ ತೆರಳಿದ್ದ ಕಾಂಗ್ರೆಸ್‌ ನಿಯೋಗವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ನಡುವೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಶೇಷ ವಿಮಾನ ಮೂಲಕ ಮಂಗಳೂರಿಗೆ ತೆರಳಲು ನಿರ್ಧರಿಸಿದರೂ, ಸರ್ಕಾರ ಅವಕಾಶ ನಿರಾಕರಿಸಿದೆ.

Advertisement

ಗುರುವಾರ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ, ಪೊಲೀಸರು ನಡೆಸಿದ ಗೊಲೀಬಾರ್‌ನಿಂದ ಇಬ್ಬರು ಪ್ರತಿಭಟನಾಕಾರರು ಸಾವಿಗೀಡಾಗಿದ್ದರು. ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಎಸ್‌.ಆರ್‌.ಪಾಟೀಲ್‌ ನೇತೃತ್ವದಲ್ಲಿ ಕಾಂಗ್ರೆಸ್‌ ನಾಯಕರ ನಿಯೋಗ ಮಂಗಳೂರು ವಿಮಾನ ನಿಲ್ದಾಣ ತಲುಪುತ್ತಿದ್ದಂತೆ ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಶುಕ್ರವಾರ ಮಧ್ಯಾಹ್ನ ಮಂಗಳೂರಿಗೆ ತೆರಳಲು ಸಿದ್ಧತೆ ನಡೆಸಿದ್ದರು. ಆದರೆ, ಮಂಗಳೂರಿಗೆ ಯಾವುದೇ ವಿಶೇಷ ವಿಮಾನ ತೆರಳಲು ರಾಜ್ಯ ಸರ್ಕಾರ ಅವಕಾಶ ನಿರಾಕರಿಸಿದ್ದರಿಂದ ಸಿದ್ದರಾಮ ಯ್ಯ ಮಂಗಳೂರು ಭೇಟಿ ರದ್ದುಗೊಳಿಸಿದರು. ಬೆಂಗಳೂರಿನ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಮಂಗಳೂರು ಪ್ರತಿಭಟನೆಯಲ್ಲಿ ಪೊಲೀಸರಿಂದ ಅಮಾಯಕ ಹತ್ಯೆ ಪ್ರಕರಣವನ್ನು ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ಆಯೋಗ ರಚಿಸಿ ತನಿಖೆಗೊಳಪಡಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿನ ನಿಷೇಧಾಜ್ಞೆ ಉಲ್ಲಂ ಸುವಂತೆ ಪ್ರತಿಭಟಿಸಿ ಎಂದು ಯಾವುದೇ ಸಂಘ ಸಂಸ್ಥೆಗಳಿಗೆ ಕಾಂಗ್ರೆಸ್‌ ಪಕ್ಷವಾಗಲಿ ಜೆಡಿಎಸ್‌ ಆಗಲಿ ಕರೆ ನೀಡಿರಲಿಲ್ಲ. ಸೆಕ್ಷನ್‌ 144 ಜಾರಿಗೊಳಿಸುವ ವಾತಾವರಣ ರಾಜ್ಯದಲ್ಲಿ ಇರಲಿಲ್ಲ. ಕರ್ಫ್ಯೂ ವಿಧಿಸಲು ಅದಕ್ಕೆ ಆದ ಪೂರಕ ವಾತಾವರಣ ಇರಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳುತ್ತದೆ. ಸರ್ಕಾರ ಊಹಿಸಿಕೊಂಡು ನಿಷೇಧಾಜ್ಞೆ, ಕರ್ಫ್ಯೂ ಜಾರಿಗೊಳಿಸಿದ್ದಾರೆ.

ಇತಿಹಾಸಕಾರ ರಾಮಚಂದ್ರ ಗುಹಾ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲೂ ಪೊಲೀಸರು ಅವಕಾಶ ಕೊಡದೇ ಅವರನ್ನು ಅಮಾನವೀಯವಾಗಿ ಬಂಧಿಸಿದ್ದಾರೆ. ಈಗಿನ ಪರಿಸ್ಥಿತಿ ನೋಡಿದರೆ ಹಿಟ್ಲರ್‌ ಮಾದರಿಯ ಆಡಳಿತ ನೆನಪಿಗೆ ಬರುತ್ತದೆ ಎಂದರು. ಮಂಗಳೂರಿನಲ್ಲಿ ಪೊಲೀಸರು ಶಾಂತಿಯುತ ಪ್ರತಿಭಟನಾಕಾರರ ಮೇಲೆ ಗುಂಡುಹಾರಿಸಿದ್ದಾರೆ. ಪ್ರತಿಭಟನೆ ದೊಡ್ಡ ಅಪರಾಧವೇನಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಕೆಲಸವೇ ಆದರೂ ಅಮಾಯಕರನ್ನು ಹತ್ಯೆಗೈದಿದ್ದು ನ್ಯಾಯವಲ್ಲ ಎಂದರು.

Advertisement

ರಾಜ್ಯದಲ್ಲಿ ಭಯದ ವಾತಾವರಣ: ಮಂಗಳೂರಿನಲ್ಲಿ ಪೊಲೀಸರೇ ಹಿಂಸಾಚಾರಕ್ಕೆ ಕುಮ್ಮಕ್ಕು ಕೊಟ್ಟಿದ್ದಾರೆ ಎನ್ನುವ ಅನುಮಾನ ಬರುತ್ತದೆ. ಗುಂಡೇಟಿನ ಕುರಿತು ಪೊಲೀಸರು ಮಾತನಾಡುವ ವಿಡಿಯೋ ವೈರಲ್‌ ಆಗಿದೆ. ಇದೆಲ್ಲವನ್ನು ನೋಡಿದರೆ ಅವರು ಪ್ರತಿಭಟನಾಕಾರರನ್ನು ಕೊಲ್ಲಲು ಬಂದಿದ್ದರೇನೋ ಎಂದು ಅನಿಸುತ್ತದೆ. ಪೊಲೀಸರು ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡೋ ಪ್ರಯತ್ನ ಮಾಡುತ್ತಿದ್ದಾರೆ. ಯಡಿಯೂರಪ್ಪ ಲಾಠಿ ಪ್ರಯೋಗಿಸಬೇಡಿ ಎಂದಿದ್ದೇನೆ ಎನ್ನುತ್ತಾರೆ. ಆದರೆ ಪೊಲೀಸರು ಲಾಠಿ ಉಪಯೋಗಿಸುತ್ತಾರೆ. ಇದೆಲ್ಲ ನೋಡಿದರೆ ಯಡಿಯೂರಪ್ಪ ಸುಳ್ಳು ಹೇಳುತ್ತಿದ್ದಾರೆ ಎಂಬ ಅನುಮಾನ ಮೂಡುತ್ತದೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next