ಲಂಡನ್: ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ ನಂತರ ಅಲ್ಲಿನ ಪರಿಸ್ಥಿತಿ ಬಗ್ಗೆ ಯು.ಕೆ.ನಲ್ಲಿನ ವಿರೋಧ ಪಕ್ಷವಾದ ಲೇಬರ್ ಪಾರ್ಟಿಯ ಸಂಸದ ಜೆರೆಮಿ ಕಾರ್ಬಿನ್‌ರೊಂದಿಗೆ ಕಾಂಗ್ರೆಸ್ ನಿಯೋಗವೊಂದು ಗುಟ್ಟಾಗಿ ತೆರಳಿ ಮಾತುಕತೆ ನಡೆಸಿರುವುದು ವಿವಾದ ಸೃಷ್ಟಿಸಿದೆ.
ವಿಶೇಷ ಸ್ಥಾನಮಾನ ರದ್ದು ವಿರುದ್ಧ ಸಂಸದ ಜೆರೆಮಿ ಕಾರ್ಬಿನ್ ಬ್ರಿಟನ್ ಸಂಸತ್ತಿನಲ್ಲಿ ಭಾರತ ಸರಕಾರದ ವಿರುದ್ಧ ಗೊತ್ತುವಳಿ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ, ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್‌ನ ಕಮಲ್ ಧಾಲಿವಾಲ್ ಅವರುಳ್ಳ ನಿಯೋಗ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ.
ಕಾಂಗ್ರೆಸ್ ನಡೆಯನ್ನು ಆಕ್ಷೇಪಿಸಿರುವ ಬಿಜೆಪಿ, “ವಿದೇಶದಲ್ಲಿರುವ ರಾಜಕೀಯ ವ್ಯಕ್ತಿಗಳನ್ನು ಗುಪ್ತವಾಗಿ ಭೇಟಿಯಾಗಿ ಭಾರತದ ಆಂತರಿಕ ವಿಚಾರಗಳ ಬಗ್ಗೆ ಚರ್ಚಿಸುವುದು ನಾಚಿಕೆಗೇಡಿನ ವಿಚಾರ. ದೇಶದ ಜನತೆ ಇಂಥ ನಡೆಗಳಿಗೆ ತಕ್ಕ ಶಾಸ್ತಿ ಮಾಡುತ್ತಾರೆ’ ಎಂದು ಕಿಡಿಕಾರಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್, “ಬಿಜೆಪಿಯ ಇಂಥ ಹೇಳಿಕೆಗಳಿಂದ ವಾಸ್ತವ ಬದಲಾಗುವುದಿಲ್ಲ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕೇಂದ್ರ, ಅದರಲ್ಲಿ ವಿಫಲವಾಗಿದೆ. ಆ ವೈಫಲ್ಯತೆಯ ಜಗತ್ತಿಗೆ ತೋರುವವರನ್ನು ತಡೆಯುವ ಪ್ರಯತ್ನವನ್ನೂ ಮಾಡುತ್ತಿದೆ’ ಎಂದಿದೆ. ಅತ್ತ, ಲೇಬರ್ ಪಕ್ಷದಲ್ಲೂ ಈ ವಿಚಾರ ಅಸಮಾಧಾನದ ಅಲೆ ಎಬ್ಬಿಸಿದೆ. ಪಕ್ಷದಲ್ಲಿರುವ ಭಾರತ ಮೂಲದ ಸಂಸದರು, ಕಾಶ್ಮೀರ ಸಮಸ್ಯೆ ಭಾರತದ ಆಂತರಿಕ ವಿಚಾರವಾಗಿದ್ದು, ಅದರಲ್ಲಿ ಲೇಬರ್ ಪಕ್ಷವು ಮೂಗು ತೂರಿಸುವುದು ಸರಿಯಲ್ಲ ಎಂದಿದ್ದಾರೆ. ಕೆಲವರು ಗೊತ್ತುವಳಿ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.