ಮೇಕೆದಾಟು ಕುಡಿಯುವ ನೀರು ಯೋಜನೆ ಸಂಬಂಧ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಒಂದು ಕಡೆ ಹೈಕೋರ್ಟ್ ಚಾಟಿ, ಮತ್ತೂಂದು ಕಡೆ ಹೆಚ್ಚುತ್ತಿರುವ ಕೊರೊನಾದಿಂದಾಗಿ ಕಾಂಗ್ರೆಸ್ ನಾಯಕರು ಸದ್ಯಕ್ಕೆ ಪಾದಯಾತ್ರೆ ಸ್ಥಗಿತ ಮಾಡುತ್ತಿರುವುದಾಗಿ ಹೇಳಿ ತಮ್ಮ ತಮ್ಮ ಊರುಗಳಿಗೆ ವಾಪಸ್ ಆಗಿದ್ದಾರೆ.
ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಹಮ್ಮಿಕೊಳ್ಳಲಾಗಿದ್ದ ಈ ಪಾದಯಾತ್ರೆ ಅತ್ಯವಶ್ಯವಾಗಿಯೇ ಇತ್ತು. ಮೇಕೆದಾಟುವಿನಲ್ಲಿ ಅಣೆಕಟ್ಟೊಂದನ್ನು ಕಟ್ಟಿ ವಿದ್ಯುತ್ ಉತ್ಪಾದನೆ ಮತ್ತು ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ. ಇದರ ಈ ಆಶಯಗಳನ್ನು ಯಾರೂ ಬೇಡ ಎನ್ನಲು ಸಾಧ್ಯವೇ ಇಲ್ಲ. ಆದರೆ ತಮಿಳುನಾಡಿನ ವಿರೋಧ ಮತ್ತು ಇತರ ರಾಜಕೀಯ ಲಾಭ ಹಾಗೂ ನಷ್ಟಗಳ ಕಾರಣದಿಂದಾಗಿ ಈ ಯೋಜನೆಯನ್ನು ಇದುವರೆಗೆ ಜಾರಿ ಮಾಡಲಾಗಿಲ್ಲ. ಕೇಂದ್ರದ ಮಟ್ಟದಲ್ಲಿ ಬರುವ ಸರಕಾರಗಳೂ ಈ ಬಗ್ಗೆ ಕಠಿನ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ತಮಿಳುನಾಡಿನ ಪ್ರಾದೇಶಿಕ ರಾಜಕಾರಣ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.
ಸದ್ಯ ಪಾದಯಾತ್ರೆಯಂಥ ಪ್ರತಿಭಟನೆಗಳನ್ನು ಯಾರೂ ಬೇಡ ಎನ್ನಲು ಸಾಧ್ಯವೇ ಇಲ್ಲ. ಆದರೆ ಇಲ್ಲಿ ಪ್ರಮುಖವಾಗಿ ಗಮನಿಸಬೇಕಾಗಿರುವುದು ಪಾದಯಾತ್ರೆ ಹಮ್ಮಿಕೊಂಡಿರುವ ವೇಳೆ. ಈಗ ದೇಶಾದ್ಯಂತ ಕೊರೊನಾ ಕೇಸ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜ. 1ರಿಂದ ಈಚೆಗೆ ಕೇಸುಗಳ ಸಂಖ್ಯೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಇದಕ್ಕೆ ಒಮಿಕ್ರಾನ್ ಕಾರಣ ಎನ್ನುವುದು ತಜ್ಞರ ಮಾತು. ಹೀಗಾಗಿ ಸೂಪರ್ ಸ್ಪ್ರೆಡ್ಡರ್ ರೀತಿ ವರ್ತಿಸುವ ಪಾದಯಾತ್ರೆಯಂಥ ಜನಸೇರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದಿರುವುದು ಒಳಿತು. ಈಗ ಹಿಂದೆಗೆದುಕೊಳ್ಳುವುದಕ್ಕಿಂತ ಆರಂಭ ಮಾಡುವ ಮುನ್ನವೇ ಕೊರೊನಾವನ್ನು ಗಮನದಲ್ಲಿ ಇರಿಸಿಕೊಂಡು ಮುಂದೊಂದು ದಿನ ಪಾದಯಾತ್ರೆ ಹಮ್ಮಿಕೊಳ್ಳಬಹುದಿತ್ತು. ಏಕೆಂದರೆ, ಈಗಾಗಲೇ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಲಿ ಅವರಂಥ ಹಲವಾರು ಪ್ರಮುಖ ನಾಯಕರಿಗೇ ಕೊರೊನಾ ದೃಢಪಟ್ಟಿದೆ. ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಇತರ ಪ್ರಮುಖ ನಾಯಕರೆಲ್ಲರೂ ಇವರ ಸಂಪರ್ಕಿತರೇ ಆಗಿದ್ದಾರೆ. ಈಗ ಕೊರೊನಾ ಹರಡುವ ಸಾಧ್ಯತೆ ಹೆಚ್ಚಾಗಿದೆ ಎಂಬುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿಸಿ ಪಾದಯಾತ್ರೆ ಸœಗಿತ ಮಾಡಲು ಹೇಳಿರುವುದು ಸರಿಯಾದ ಕ್ರಮವೇ ಆಗಿದೆ.
ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗ ಪಾದಯಾತ್ರೆಯ ಬೇಡಿಕೆಯನ್ನು ಈಡೇರಿಸುವುದಾಗಿ ಪತ್ರಮುಖೇನ ಕಾಂಗ್ರೆಸ್ ನಾಯಕರಿಗೆ ಭರವಸೆ ನೀಡಿದ್ದಾರೆ. ಈ ಕೆಲಸವನ್ನು ಪಾದಯಾತ್ರೆ ಆರಂಭಿಸುವ ಮುನ್ನವೇ ಮಾಡಿದ್ದರೆ ಒಳ್ಳೆಯದಿತ್ತು. ಆಗ ಕಾಂಗ್ರೆಸ್ ನಾಯಕರನ್ನು ಕರೆಸಿ, ಮಾತುಕತೆ ಮಾಡಿ ಈ ಯೋಜನೆಗಾಗಿ ಒಟ್ಟಾಗಿಯೇ ಹೋರಾಟ ಮಾಡೋಣ ಎಂದು ಮನವೊಲಿಕೆ ಮಾಡಬಹುದಿತ್ತು. ಈ ಮೂಲಕ ಕೊರೊನಾ ಹಬ್ಬುವಿಕೆಯನ್ನು ತಡೆಯಬಹುದಿತ್ತು.