ಚಿತ್ರದುರ್ಗ: ದೇಶದ ಮತದಾರರನ್ನು ಭಿಕ್ಷುಕರ ಸಾಲಿನಲ್ಲಿ ನಿಲ್ಲಿಸುವ ಷಡ್ಯಂತ್ರವನ್ನು ಕಾಂಗ್ರೆಸ್ ಮಾಡುತ್ತಿದೆ. ಈ ಚುನಾವಣೆಯನ್ನು ಸಿದ್ದಾಂತದ ಆಧಾರದಲ್ಲಿ ಗೆಲ್ಲದೆ, ಗ್ಯಾರೆಂಟಿಗಳ ಆಧಾರದಲ್ಲಿ ಗೆದ್ದಿದ್ದಾರೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.
ಚಿತ್ರದುರ್ಗದಲ್ಲಿ ಶುಕ್ರವಾರ ಸಿದ್ದಿಗಾರರ ಜೊತೆಗೆ ಮಾತನಾಡಿದ ಅವರು, ಚುನಾವಣೆ ಪಾರದರ್ಶಕವಾಗಿ ಆದಾಗ ಸಂವಿಧಾನ ಮತ್ತು ಬದ್ಧತೆ ತೋರಿಸಿದಂತಾಗುತ್ತದೆ ಎಂದರು.
ಮತದಾರರನ್ನು ಬಿಕ್ಷುಕರ ಸಾಲಿನಲ್ಲಿ ನಿಲ್ಲಿಸುತ್ತೇವೆ, ಗ್ಯಾರೆಂಟಿ ಕೊಟ್ಟು ಚುನಾವಣೆ ಎದುರಿಸುತ್ತೇವೆ ಎನ್ನುವ ಸ್ವಭಾವದ ಮೂಲಕ, ಕಾಂಗ್ರೆಸ್ ಭವಿಷ್ಯದ ದಿನಗಳಲ್ಲಿ ಮತದಾರರನ್ನು ಭಿಕ್ಷಾಟನೆ ಕೂಪಕ್ಕೆ ತಳ್ಳುವ ವ್ಯವಸ್ಥೆ ಮಾಡುತ್ತಿದೆ ಎಂದರು.
ಚುನಾವಣೆಗಳನ್ನು ಪ್ರಜಾಪ್ರಭುತ್ವದ ಹಬ್ಬ ಎಂದು ಅನೇಕ ಪ್ರಜಾಪ್ರಭುತ್ವ ಅವಲಂಬಿತ ರಾಷ್ಟ್ರಗಳು ಚರ್ಚೆ ಮಾಡುತ್ತವೆ. ಆದರೆ, 100 ವರ್ಷಗಳ ಕಾಂಗ್ರೆಸ್ ಸಿದ್ದಾಂತ ಗಾಳಿಗೆ ತೂರಿ, ಆಮಿಷ ತೋರಿಸಿ ಪ್ರಜಾಪ್ರಭುತ್ವಕ್ಕೆ ಮಸಿ ಬಳಿಯುವ ಕೆಲಸ ಕರ್ನಾಟಕದಲ್ಲಿ ಆಗಿದೆ ಎಂದು ಹೇಳಿದರು.
ಸಿದ್ದಾಂತದಿಂದ ಚುನಾವಣೆ ಗೆದ್ದಿದ್ದೇವೆ ಎಂದು ಹೇಳುವ ನೈತಿಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಕಳೆದ 15 ದಿನಗಳಿಂದ ರಾಜ್ಯವನ್ನು ಹೇಗೆ ಮುನ್ನಡೆಸಬೇಕು ಎನ್ನುವ ಚರ್ಚೆಗಿಂತ ಗ್ಯಾರೆಂಟಿ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಮೂಲ ಸೌಕರ್ಯ, ರೈತರ ಸಮಸ್ಯೆ ಬಿಟ್ಟು ಇಂಥಹ ಚರ್ಚೆಗಳನ್ನು ಬಿಟ್ಟು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.
15 ಲಕ್ಷ ಹಾಕುತ್ತೇನೆಂದು ಮೋದಿ ಹೇಳಿದ್ದರೆ ರಾಜಕೀಯ ನಿವೃತ್ತಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಎಲ್ಲಾದರೂ ಹೇಳಿದ್ದ ಬಗ್ಗೆ ಸಾಕ್ಷಿ ಕೊಟ್ಟರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಚಿವ ಎ.ನಾರಾಯಣಸ್ವಾಮಿ ಸವಾಲೆಸೆದರು.
ಆದರೆ, ರಾಜ್ಯದಲ್ಲಿ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಗ್ಯಾರೆಂಟಿ ಬಗ್ಗೆ ಮಾತನಾಡಿದ್ದಕ್ಕೆ ಸಾಕ್ಷಿ ಇದೆ. ಮನೆ ಮನೆಗೆ ಸಹಿ ಮಾಡಿ ಗ್ಯಾರೆಂಟಿ ಕೊಟ್ಟಿದ್ದಾರೆ. ಈ ಬಗ್ಗೆ ಜನ ಕೇಳುತ್ತಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.