ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಮಹತ್ವದ ರಾಜಕೀಯ ವಿದ್ಯಮಾನವೊಂದರಲ್ಲಿ ಕಾಂಗ್ರೆಸ್ ಪಕ್ಷ ಗೆದ್ದ ಎತ್ತಿನ ಬಾಲ ಹಿಡಿದಿದ್ದು, ಕೇಂದ್ರ ಚುನಾವಣಾ ಆಯೋಗ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬಣಕ್ಕೆ ಚಿಹ್ನೆ, ಅಧಿಕೃತ ಸಮಾಜವಾದಿ ಪಕ್ಷದ ಸ್ಥಾನಮಾನವನ್ನು ನೀಡಿದ ಬೆನ್ನಲ್ಲೇ ಮಹಾಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದು, ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಶೀಲಾ ದೀಕ್ಷಿತ್ ಅವರನ್ನು ಹಿಂದಕ್ಕೆ ಸರಿಯುವಂತೆ ಹೇಳಿದೆ.
ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್ ಅವರು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷ ಜೊತೆಯಾಗಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪಕ್ಷದ ಅಧಿಕೃತ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಶೀಲಾ ದೀಕ್ಷಿತ್ ಅವರು ಕಣದಿಂದ ಹಿಂದಕ್ಕೆ ಸರಿಯುವುದಾಗಿ ತಿಳಿಸಿದ್ದಾರೆ. ಅಜಿತ್ ಸಿಂಗ್ ಅವರ ಆರ್‌ಎಲ್ ಡಿ ಕೂಡ ಮಹಾ ಮೈತ್ರಿ ಕೂಟವನ್ನು ಸೇರಿಕೊಳ್ಳಲಿದೆ ಎಂದು ವರದಿಯಾಗಿದೆ. ಸೀಟು ಹಂಚಿಕೆ ಮತ್ತಿತರ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಅಜಾದ್ ತಿಳಿಸಿದ್ದಾರೆ.
2012 ರ ಚುನಾವಣೆಯಲ್ಲಿ 403 ಸದಸ್ಯ ವಿಧಾನಸಭೆಯಲ್ಲಿ ಎಸ್‌ಪಿ ಅಖಿಲೇಶ್ ನೇತೃತ್ವದಲ್ಲಿ 224 ಸ್ಥಾನಗಳನ್ನು ಜಯಿಸಿ ಸ್ಪಷ್ಟ ಬಹುಮತ ಗಳಿಸಿತ್ತು. ಬಿಎಸ್‌ಪಿ 80, ಬಿಜೆಪಿ 47, ಕಾಂಗ್ರೆಸ್ 28 ,ಆರ್‌ಎಲ್‌ಡಿ 9 ಸ್ಥಾನಗಳನ್ನು ಜಯಿಸಿತ್ತು.