ಹೊಸದಿಲ್ಲಿ : ‘ಕಾಂಗ್ರೆಸ್ ಆಡಳಿತೆಯ ವೇಳೆ ಹದಿನೈದು ಸರ್ಜಿಕಲ್ ಸ್ಟ್ರೈಕ್‌ಗಳನ್ನು ನಡೆಸಲಾಗಿತ್ತು; ಆದರೂ ಕಾಂಗ್ರೆಸ್ ಆ ಬಗ್ಗೆ ಟಾಂ ಟಾಂ ಹೊಡೆದಿಲ್ಲ’ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ಹೇಳಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಆಡಳಿತೆಯ ವೇಳೆ ನಡೆಸಿರುವ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಎಲ್ಲೆಡೆ ಕೊಚ್ಚಿಕೊಳ್ಳುತ್ತಿದ್ದಾರೆ; ಆ ವಿಷಯದಲ್ಲಿ ಪ್ರಧಾನಿ ಮೋದಿ ಅವರು ನಿಜಕ್ಕೂ ಒಬ್ಬ ನಟ’ ಎಂದು ಗೆಹಲೋಟ್ ಲೇವಡಿ ಮಾಡಿದರು.
‘ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ ಅವರು ದೇಶಕ್ಕೆ ಅಮೋಘ ಕಾಣಿಕೆ ನೀಡಿದ್ದಾರೆ. ಆದರೆ ಮೋದಿ ಸರಕಾರ ಅವ್ಯಾವುದಕ್ಕೂ ಮಹತ್ವ ನೀಡುತ್ತಿಲ್ಲ; ಮೇಲಾಗಿ ಮೋದಿ ಅವರು ಗಾಂಧಿ ಕುಟುಂಬಕ್ಕೆ ಕಳಂಕ ಹಚ್ಚುವ ಕೆಲಸ ಮಾಡುತ್ತಿದ್ದಾರೆ’ ಎಂದು ಗೆಹಲೋಟ್ ಆರೋಪಿಸಿದರು.
‘ದೇಶದ ಜನರು ಮುಗ್ಧರಿದ್ದಾರೆ; ಪ್ರಧಾನಿ ಮೋದಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾರೆ ಎಂದವರು ಭಾವಿಸುತ್ತಾರೆ. ಆದರೆ ಮೋದಿ ಆಡಳಿತೆಗೂ ಮೊದಲು ಕಾಂಗ್ರೆಸ್ ಆಡಳಿತೆಯಲ್ಲಿ ಹದಿನೈದು ಸರ್ಜಿಕಲ್ ಸ್ಟ್ರೈಕ್ ಗಳು ನಡೆದಿವೆ. ಆದರೂ ಕಾಂಗ್ರೆಸ್ ಸರಕಾರ ಎಂದೂ ಕೂಡ ತಾನು ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದೇನೆ ಎಂದು ಕೊಚ್ಚಿಕೊಂಡಿರಲಿಲ್ಲ’ ಎಂದು ಗೆಹಲೋಟ್ ಹೇಳಿದರು.
‘ದೇಶದ ಭದ್ರತೆಗಾಗಿ ನಡೆಸುವ ಸರ್ಜಿಕಲ್ ಸ್ಟೈಕ್ ನಂತಹ ವಿದ್ಯಮಾನಗಳನ್ನು ಎಲ್ಲೆಡೆ ಕೊಚ್ಚಿ ಕೊಳ್ಳುವುದು ಅಧಿಕಾರರೂಢ ಸರಕಾರಕ್ಕೆ ತಕ್ಕುದಲ್ಲ’ ಎಂದು ಗೆಹಲೋಟ್ ಹೇಳಿದರು.