ಬೆಂಗಳೂರು: ಮತದಾರರ ಮಾಹಿತಿ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಕಾಂಗ್ರೆಸ್ ದೂರು ನೀಡಿದೆ. ಇದರ ಜತೆಗೆ ” ಆ ಗಂಡು ಸಚಿವರಿಗೆ ಚಿಲುಮೆ ಸಂಸ್ಥೆಯ ಜತೆಗಿರುವ ನಂಟೇನು?” ಎಂದು ಅಧಿಕೃತ ಟ್ವೀಟರ್ ಖಾತೆಯಲ್ಲಿ ಪ್ರಶ್ನಿಸುವ ಮೂಲಕ ಸಚಿವ ಅಶ್ವತ್ಥನಾರಾಯಣ ಅವರನ್ನು ಮತ್ತೆ ವಿವಾದಕ್ಕೆ ಕಾಂಗ್ರೆಸ್ ಎಳೆ ತಂದಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ ಬಳಿಕ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ.
ಚಿಲುಮೆ ಸಂಸ್ಥೆಗೆ 2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನಂದೀಶ್ ರೆಡ್ಡಿ ಕಡೆಯಿಂದ ಹಣ ಸಂದಾಯವಾಗಿದೆ ಹಾಗೂ ಸಂಸ್ಥೆಯ ಮುಖ್ಯಸ್ಥನೊಂದಿಗೆ ಅಶ್ವಥ್ ನಾರಾಯಣ ಅವರ ಸಂಪರ್ಕವಿದೆ. ಬಿಜೆಪಿಯ ನಾಯಕರೊಂದಿಗೆ ಚಿಲುಮೆ ಸಂಸ್ಥೆಗೆ ನೇರ ಸಂಪರ್ಕವಿರುವುದು ಜಗಜ್ಜಾಹೀರು. ಹೀಗಿರುವಾಗ ಅದೇ ಸಂಸ್ಥೆಯ “ಉಚಿತ ಸೇವೆ”ಗೆ ಸರ್ಕಾರ ಒಪ್ಪಿಗೆ ಕೊಟ್ಟಿದ್ದೇಕೆ? ಮತದಾರರ ಮಾಹಿತಿ ಕದ್ದ ಚಿಲುಮೆ ಸಂಸ್ಥೆಯ ಕೆಲಸಗಾರರನ್ನು ಬಂಧಿಸಿ ಕಣ್ಣೊರೆಸುತ್ತಾ ಕಿಂಗ್ ಪಿನ್‌ಗಳ ರಕ್ಷಣೆಗೆ ನೀತಿರುವವರು ಯಾರು? ಚಿಲುಮೆಗೆ ಯಾರ ಒಲುಮೆ? ಎಂದು ಪ್ರಶ್ನಿಸಿದೆ.
ಇದನ್ನೂ ಓದಿ:ಕಾಂಗ್ರೆಸ್‌ಗೆ ನಕಲಿ ಮತದಾರರ ಹೆಸರು ಡಿಲೀಟ್ ಆಗುವ ಭಯ: ಬೊಮ್ಮಾಯಿ
ಬರ್ತ್‌ಡೇ ಪಾರ್ಟಿಗೆ ಹೋಗಿದ್ದ ಕ್ಯಾಷ್‌ಲ್ಲೇ ಅಭಿವೃದ್ಧಿಯಾದ ಸಚಿವರೇ? ಜನಾಕ್ರೋಶದಿಂದ ಖಾಲಿ ಕುರ್ಚಿ ದರ್ಶನ ಪಡೆಯುತ್ತಿರುವ ಬಿಜೆಪಿ ಮತದಾರರನ್ನೇ ಖಾಲಿ ಮಾಡಿಸುವ ಹುನ್ನಾರ ನಡೆಸಿದೆ. ಚಿಲುಮೆ ಸಂಸ್ಥೆಯ ಅಸಲಿ ಚಟುವಟಿಕೆಗಳೇನು? ಅದರ ಹಿಂದಿರುವ ಬಂಡವಾಳ ಯಾರದ್ದು? ಅದರ ಹಿನ್ನೆಲೆ ಏನು? ಎಂದು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.
ಈ ಎಲ್ಲಾ ರಹಸ್ಯಗಳೊಂದಿಗೆ ಈಗ ಆ ಸಂಸ್ಥೆಯಲ್ಲಿ ದೊರಕಿದ ದಾಖಲೆಗಳು ಯಾವ ಸಚಿವರಿಗೆ ಸಂಬಂಧಿಸಿದ್ದು? ಆ ‘ಗಂಡು’ ಸಚಿವರಿಗೆ ಚಿಲುಮೆಯೊಂದಿಗಿರುವ ನಂಟು ಏನು? ಬಸವರಾಜ ಬೊಮ್ಮಾಯಿ ಅವರೇ, ನೀವೇ ಉತ್ತರಿಸುವಿರಾ? ನ್ಯಾಯಾಂಗ ತನಿಖೆಗೆ ವಹಿಸುವಿರಾ? ಎಂದು ಪ್ರಶ್ನಿಸಿದೆ.