Advertisement

ಜಾತಿಗಣತಿ ಕೈ ಪ್ರತ್ಯಸ್ತ್ರ: ಜನಸಂಖ್ಯೆ ಆಧರಿತ ಮೀಸಲು ಜಾರಿಗೊಳಿಸಿ

12:50 AM Apr 17, 2023 | Team Udayavani |

ಕೋಲಾರ: ಯುಪಿಎ ಸರಕಾರ ನಡೆಸಿದ ಜಾತಿವಾರು ಜನಗಣತಿಯನ್ನು ಪ್ರಧಾನಿ ಮೋದಿಯವರು ಬಹಿರಂಗಪಡಿಸಲಿ. ಶೇ. 50 ಮೀಸಲಾತಿ ಮಿತಿಯನ್ನು ತೆಗೆದು ಜನಸಂಖ್ಯೆ ಆಧಾರಿತ ಮೀಸಲಾತಿ ವ್ಯವಸ್ಥೆ ಜಾರಿಗೊಳಿಸಲಿ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆಗ್ರಹಿಸಿದರು.

Advertisement

ಚಿನ್ನದ ನಾಡು ಕೋಲಾರದಲ್ಲಿ ರವಿವಾರ “ಜೈ ಭಾರತ್‌ ಸಮಾವೇಶ’ಕ್ಕೆ ಚಾಲನೆ ನೀಡುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್‌ ಪರ ಚುನಾವಣ ರಣಕಹಳೆ ಮೊಳಗಿಸಿದ ರಾಹುಲ್‌, ಮೀಸಲಾತಿಯಲ್ಲಿ ಶೇ. 50ರ ಮಿತಿಯನ್ನು ತೆಗೆದುಹಾಕಿ, ಎಸ್‌ಸಿ, ಎಸ್‌ಟಿ ಕೋಟಾದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಅವಕಾಶ ನೀಡಿ ಎಂದು ಕೇಂದ್ರ ಸರಕಾರಕ್ಕೆ ಸವಾಲು ಹಾಕಿದರು.
ನಾನು ಹಿಂದುಳಿದವರಿಗೆ ಅವಮಾನ ಮಾಡಿದ್ದೇನೆಂದು ಬಿಜೆಪಿ ಆರೋಪಿಸುತ್ತಿದೆ. ದೇಶ ದಲ್ಲಿ ಯಾರ ಜನಸಂಖ್ಯೆ ಹೆಚ್ಚು ಇದೆ? ದಲಿತ, ಹಿಂದುಳಿ ದವರು ಕೇಂದ್ರ ಸಚಿವಾಲಯದ ಕಾರ್ಯ ದರ್ಶಿ ಗಳ ಹುದ್ದೆಗಳಲ್ಲಿ ಕೇವಲ ಶೇ. 7 ಭಾಗದಷ್ಟಿದ್ದಾರೆ. ಯುಪಿಎ ಸರಕಾರ ಜಾತಿವಾರು ಜನಗಣತಿ ಮಾಡಿತ್ತು. ಪೂರ್ತಿ ದೇಶದ ಜಾತಿವಾರು ಅಂಕಿಅಂಶ ಅದರಲ್ಲಿದೆ. ಒಬಿಸಿ ಕುರಿತು ಮಾತನಾಡುವ ನೀವು ಜನಗಣತಿ ವರದಿ ಬಹಿರಂಗಗೊಳಿಸಿ. ಜನಸಂಖ್ಯೆ ಗಣತಿ ಬಹಿರಂಗಗೊಳಿಸದಿದ್ದರೆ ಹಿಂದುಳಿ ದವರಿಗೆ ಮಾಡಿದ ಅವಮಾನ ಎಂದು ಪರಿ ಗಣಿಸ ಬೇಕಾಗುತ್ತದೆ. ಎಸ್‌ಸಿ, ಎಸ್‌ಟಿ ಕೋಟಾ  ದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಅವ ಕಾಶ ನೀಡಿ ಎಂದು ರಾಹುಲ್‌ ಆಗ್ರಹಿಸಿದರು.

ಮೊದಲ ಸಂಪುಟ ಸಭೆಯಲ್ಲೇ ಜಾರಿ
ಕರ್ನಾಟಕದ ಜನತೆಗೆ ಕಾಂಗ್ರೆಸ್‌ ನಾಲ್ಕು ಭರವಸೆಗಳನ್ನು ನೀಡಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದರೆ ಗೃಹಜ್ಯೋತಿಯಲ್ಲಿ 200 ಯೂನಿಟ್‌ ಉಚಿತ ವಿದ್ಯುತ್‌, ಗೃಹಲಕ್ಷ್ಮೀ ಯೋಜನೆಯಡಿ ಪ್ರತೀ ಮನೆಯ ಮಹಿಳೆಗೆ 2 ಸಾವಿರ ರೂ., ಅನ್ನಭಾಗ್ಯದ 10 ಕೆ.ಜಿ. ಅಕ್ಕಿ ಹಾಗೂ ಯುವನಿಧಿ ಯೋಜನೆಯಂತೆ ಪದವೀ ಧರರಿಗೆ ಪ್ರತೀ ತಿಂಗಳು 3 ಸಾವಿರ ರೂ. ಹಾಗೂ ಡಿಪ್ಲೊಮಾ ಪದವೀಧರರಿಗೆ 1,500 ರೂ. ನೀಡುವ ವಾಗ್ಧಾನವನ್ನು ಸರಕಾರದ ಮೊದಲ ಸಂಪುಟ ಸಭೆ ಯಲ್ಲೇ ಈಡೇರಿಸಬೇಕು ಎಂದು ತಾಕೀತು ಮಾಡಿದರು. ಈ ಗ್ಯಾರಂಟಿಗಳನ್ನು ಈಡೇರಿ ಸುವ ಮೂಲಕ ಕಾಂಗ್ರೆಸ್‌ ಪಕ್ಷವು ಕರ್ನಾಟಕ ಹಾಗೂ ದೇಶದ ಜನತೆಗೆ ಮಾತ್ರವಲ್ಲ, ಪ್ರಧಾನಮಂತ್ರಿಗೂ ಸಂದೇಶ ನೀಡಬೇಕಾಗಿದೆ, ಸಾವಿರಾರು ಕೋಟಿ ರೂಪಾಯಿಗಳನ್ನು ಆದಾನಿ ಕಂಪೆನಿಗಳಿಗೆ ನೀಡುತ್ತಿದ್ದೀರಿ. ನಾವು ಯುವಕರು, ಬಡವರು, ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳ ಮೂಲಕ ಕೊಡುತ್ತೇವೆ ಎಂಬು ದನ್ನು ಸಾಬೀತು ಮಾಡಬೇಕು ಎಂದು ರಾಹುಲ್‌ ಹೇಳಿದರು.

ಮೋದಿ-ಅದಾನಿ ಪ್ರಸ್ತಾವ
ತಮ್ಮ ಭಾಷಣದಲ್ಲಿ ಅನರ್ಹತೆ, ಮೋದಿ- ಅದಾನಿ ನಂಟಿನ ಕುರಿತಾಗಿಯೂ ರಾಹುಲ್‌ ಪ್ರಸ್ತಾವಿಸಿದರು. ಮೋದಿಯವರು ಆದಾನಿಗೆ ಸಹಾಯ ಮಾಡುತ್ತಾರೆ. ಕಾಂಗ್ರೆಸ್‌ ಸರಕಾರ ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಮಹಿಳೆಯರಿಗೆ ಸಹಾಯ ಮಾಡುತ್ತದೆ. ನಾವು ಬ್ಯಾಂಕ್‌ ಬಾಗಿಲನ್ನು ಇವರಿಗಾಗಿ ತೆರೆಯುತ್ತೇವೆ, ಮೋದಿ ಶ್ರೀಮಂತರಿಗಷ್ಟೇ ಬ್ಯಾಂಕನ್ನು ಸೀಮಿತ ಗೊಳಿಸಿದ್ದಾರೆ ಎಂದರು.

ಸಂಸದ ಸ್ಥಾನದಿಂದ ಅನರ್ಹಗೊಳಿಸಿ ನನ್ನನ್ನು ಹೆದರಿಸಲಾಗದು, ಬಾಯಿ ಮುಚ್ಚಿಸಲಾಗದು. ಪ್ರಧಾನಿ ಮೋದಿ ಮತ್ತು ಉದ್ಯಮಿ ಆದಾನಿ ನಡುವಿನ ಸಂಬಂಧ ಏನೆಂಬ ಪ್ರಶ್ನೆಯನ್ನು ಹಾಕುತ್ತ ಉತ್ತರ ಸಿಗುವವರೆಗೂ ದೇಶಾದ್ಯಂತ ಹೋರಾಟ ಮಾಡುತ್ತೇನೆ. ಭ್ರಷ್ಟ ಬಿಜೆಪಿ ಸರಕಾರವನ್ನು ಕಿತ್ತೆಸೆದು 150 ಸೀಟುಗಳೊಂದಿಗೆ ಬಹುಮತದ ಕಾಂಗ್ರೆಸ್‌ ಸರಕಾರವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು ಎಂದು ರಾಹುಲ್‌ ಹೇಳಿದರು.

Advertisement

ಕಾಂಗ್ರೆಸ್ಸನ್ನು ಗೆಲ್ಲಿಸಿ
ಕರ್ನಾಟಕ ಕಾಂಗ್ರೆಸ್‌ ಸರಕಾರ ರೈತರ, ಕಾರ್ಮಿಕರ, ಸಣ್ಣ ಉದ್ದಿಮೆದಾರರ, ಮಹಿಳೆಯರ ಸರಕಾರವಾಗಲಿದೆ. ಕಾಂಗ್ರೆಸ್‌ ಸಂಘಟಿತವಾಗಿ ಹೋರಾಟ ಮಾಡುತ್ತಿದೆ, ಪೂರ್ಣ ಬಹುಮತದ ಸರಕಾರವನ್ನು ಆಯ್ಕೆ ಮಾಡಿ. ಬಿಜೆಪಿ ಸರ್ವ ಪ್ರಯತ್ನ ಮಾಡಿ 40 ಪರ್ಸೆಂಟ್‌ ಕಮಿಶನ್‌ ಹಣದಲ್ಲಿ ಮುಂಬರುವ ಕಾಂಗ್ರೆಸ್‌ ಸರಕಾರವನ್ನು ಬೀಳಿಸಲು ಪ್ರಯತ್ನಿಸುತ್ತದೆ. ಆದ್ದರಿಂದ ಕಾಂಗ್ರೆಸ್‌ಗೆ 150 ಸೀಟುಗಳಲ್ಲಿ ಗೆಲುವು ದೊರಕಿಸಿಕೊಡಿ, ಬಿಜೆಪಿಗೆ ಭ್ರಷ್ಟಾಚಾರ ಮಾಡಲು ಅವಕಾಶ ನೀಡಬೇಡಿ ಎಂದು ರಾಹುಲ್‌ ಕರೆ ನೀಡಿದರು. ಜತೆಗೆ ಜನರ ಮಧ್ಯೆ ಹೋಗಿ “150 ಸೀಟು ಗೆಲ್ಲಲು ಪ್ರಯತ್ನಿಸಿ’ ಎಂದು ಮುಖಂಡರಿಗೆ ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next