ಬೆಂಗಳೂರು: ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ. ಕೃಷ್ಣಪ್ಪ ಅವರ ಪ್ರಚಾರ ಭರಾಟೆ ಜೋರಾಗಿದ್ದು, ಭಾನುವಾರ ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಚಾರದ ಅಖಾಡಕ್ಕೆ ಧುಮುಕಿದ್ದರು. ಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿದ ಡಿ.ಕೆ. ಶಿವ ಕುಮಾರ್ ಅವರು ಎಂ. ಕೃಷ್ಣಪ್ಪ ಅವರ ಪರ ಮತ ಯಾಚಿಸಿದರು.
ಕಾಮಾಕ್ಷಿಪಾಳ್ಯ, ಚಂದ್ರ ಲೇಔಟ್, ಬ್ಯಾಟರಾಯನಪುರ, ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ಮತ್ತಿ ತರ ಕಡೆ ರೋಡ್ ಶೋ ನಡೆಸಿದ ಕೆಪಿಸಿಸಿ ಅಧ್ಯಕ್ಷರು ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.
ಕೋವಿಡ್ ಸೇರಿದಂತೆ ಅನೇಕ ಸಂದರ್ಭ ಗಳಲ್ಲಿ ನಿಮ್ಮ ಕಷ್ಟಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಹಾಗೂ ಅವರ ಪುತ್ರ ಪ್ರಿಯಕೃಷ್ಣ ಸ್ಪಂದಿಸಿದ್ದಾರೆ. ಈಗ ಆ ಋಣ ತೀರಿಸುವ ಕಾಲ ಬಂದಿದೆ. ಕೃಷ್ಣಪ್ಪ ಅವರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾಕ್ಕೇರಲು ನೆರವು ನೀಡಬೇಕು ಎಂದು ಕೋರಿದರು.
ಡಿಕೆಶಿ ಪರ ಜಯಘೋಷ: ತಾರಾ ಮೆರುಗು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಹಾಗೂ ಬೆಂಬಲಿಗರು ಡಿಕೆ ಬಾಸ್, ಡಿಕೆ ಮಹರಾಜ್ ಎಂದು ಘೋಷಣೆ ಕೂಗಿದರು.ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಅವರ ಪರ ಪ್ರಚಾರದಲ್ಲಿ ಭಾಗಿಯಾಗಿದ್ದ ಖ್ಯಾತ ಹಾಸ್ಯ ನಟ ಸಾಧು ಕೋಕಿಲ ಅವರು ಪ್ರಚಾರಕ್ಕೆ ತಾರಾ ಮೆರಗು ತಂದು ಕೊಟ್ಟರು.
ಕಾಂಗ್ರೆಸ್ ಪರ ಅಲೆ: ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಅಲೆ ಇದ್ದು, ನಾಡಿನ ಜನತೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವಾಗಿ ನಿಲ್ಲಲಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿ ಕಾರಕ್ಕೆ ಬರುವುದು ನಿಶ್ಚಿತ. ಬಿಜೆಪಿಯ ಘಟಾನುಘಟಿ ನಾಯಕರಾದ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಮತ್ತಿತರರು ಕಾಂಗ್ರೆಸ್ ಸೇರಿದ್ದು ಇದಕ್ಕೆ ಸಾಕ್ಷಿ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.