ಚಿಕ್ಕಬಳ್ಳಾಪುರ: ಮೂರನೇ ಪಟ್ಟಿಯಲ್ಲಿ ಕೇವಲ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಪ್ರದೀಪ್ ಈಶ್ವರ್‌ಗೆ ಟಿಕೆಟ್ ಖಾತ್ರಿ ಮಾಡಿರುವ ಕಾಂಗ್ರೆಸ್ ನಾಯಕರು ರೇಷ್ಮೆ ನಗರ ಶಿಡ್ಲಘಟ್ಟ ಕ್ಷೇತ್ರಕ್ಕೆ ಮಾತ್ರ ಇನ್ನೂ ಟಿಕೆಟ್ ಘೋಷಣೆ ಮಾಡದೇ ಇರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.
ಈಗಾಗಲೇ ಶಿಡ್ಲಘಟ್ಟ ಕ್ಷೇತ್ರ ಹಾಲಿ ಶಾಸಕ ವಿ.ಮುನಿಯಪ್ಪ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿ ರಾಜಕೀಯ ನಿವೃತ್ತಿ ಘೋಷಿಸಿದೆ.
ಆದರೆ ಜಿಲ್ಲೆ 5 ಕ್ಷೇತ್ರಗಳ ಪೈಕಿ ಮೊದಲ ಪಟ್ಟಿಯಲ್ಲಿ ಚಿಂತಾಮಣಿ, ಗೌರಿಬಿದನೂರು, ಬಾಗೇಪಲ್ಲಿಗೆ ಟಿಕೆಟ್ ಘೋಷಿಸಿದ್ದ ನಾಯಕರು, 3ನೇ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಸಚಿವ ಸುಧಾಕರ್ ವಿರುದ್ದ ಪ್ರದೀಪ್ ಈಶ್ವರ್‌ರನ್ನು ಕಣಳಿಸುವುದಾಗಿ ಘೋಷಿಸಿದೆ. ಆದರೆ ಶಿಡ್ಲಘಟ್ಟ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಇನ್ನೂ ಕಂಗಟ್ಟು ಆಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ಇದರ ನಡುವೆ ಕೋಲಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುವ ಬಗ್ಗೆ ಸಾಕಷ್ಟು ಕೇಳಿ ಬಂದರೂ ಆ ಕ್ಷೇತ್ರಕ್ಕೆ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಈಗಾಗಿ ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವುದಿಲ್ಲ ಎಂದು ತೆರೆ ಎಳೆಯಲಾಗಿದೆ. ಆದರೆ ಶಿಡ್ಲಘಟ್ಟ ಕ್ಷೇತ್ರಕ್ಕೆ ಸಿದ್ದರಾಮಯ್ಯರನ್ನು ಶಾಸಕ ವಿ.ಮುನಿಯಪ್ಪ ಆಹ್ವಾನಿಸುತ್ತಾರಾ ಎನ್ನುವ ಚರ್ಚೆ ಈಗ ಮುನ್ನಲೆಗೆ ಬಂದಿದೆ. ಈಗಾಗಲೇ ಶಿಡ್ಲಘಟ್ಟ ಕ್ಷೇತ್ರಕ್ಕೆ ಸಮಾಜ ಸೇವಕರಾದ ರಾಜೀವ್‌ಗೌಡ, ಪುಟ್ಟು ಅಂಜಿನಪ್ಪ ನಡುವೆ ಪ್ರಬಲ ಪೈಪೋಟಿ ಇದೆ.
ಕೋಲಾರದಲ್ಲಿ ಸಿದ್ದರಾಮಯ್ಯ ಒಂದು ವೇಳೆ ಸ್ಪರ್ಧಿಸದೇ ಇದ್ದರೆ ಬ್ಯಾಲಹಳ್ಳಿ ಗೋವಿಂದಗೌಡಗೆ ಟಿಕೆಟ್ ನೀಡಬಹುದೆಂಬ ನಿರೀಕ್ಷೆ ಈಗ ಹುಸಿಯಾಗಿದ್ದು ಬ್ಯಾಲಹಳ್ಳಿ ಗೋವಿಂದಗೌಡ ಮತ್ತೆ ಶಿಡ್ಲಘಟ್ಟ ಕ್ಷೇತ್ರದ ಕಡೆ ಮುಖ ಮಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಏಕೆಂದರೆ ವಿ.ಮುನಿಯಪ್ಪ ರಾಜಕೀಯ ನಿವೃತ್ತಿ ಘೋಷಿಸಿದ ಬಳಿಕ ಮೊದಲ ಬಾರಿಗೆ ಬ್ಯಾಲಹಳ್ಳಿ ಗೋವಿಂದಗೌಡ ಪರ ಬ್ಯಾಟಿಂಗ್ ನಡೆಸಿ ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಎಂದು ವಿ.ಮುನಿಯಪ್ಪ ಘೋಷಿಸಿದ್ದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ : BJP ಡಾ.ಕೆ.ಸುಧಾಕರ್ ವಿರುದ್ದ Congress ಅಚ್ಚರಿಯ ಅಭ್ಯರ್ಥಿ