Advertisement

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

12:26 AM Apr 25, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಮತದಾನಕ್ಕೆ 2 ದಿನ ಬಾಕಿ ಇರುವಾಗಲೇ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಬೆಂಗಳೂರು ಗ್ರಾಮಾಂತರ ಲೋಕಸಭಾದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ. ಸುರೇಶ್‌ ಆಪ್ತರು ಎನ್ನಲಾದ 6 ಮಂದಿ ಕಾಂಗ್ರೆಸ್‌ ಮುಖಂಡರ ನಿವಾಸದ ಮೇಲೆ ದಾಳಿ ನಡೆಸಿ ಶಾಕ್‌ ನೀಡಿದ್ದಾರೆ. ಜತೆಗೆ ಬೆಂಗಳೂರಿನ 7 ಕಡೆ ಚಿನ್ನಾಭರಣ ವ್ಯಾಪಾರಿಗಳ ಮನೆ ಮೇಲೂ ದಾಳಿ ಮಾಡಿದ್ದಾರೆ.

Advertisement

ಬುಧವಾರ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಡಿ.ಕೆ. ಸುರೇಶ್‌ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹಾಗೂ ಅಂಜನಾಪುರ ವಾರ್ಡ್‌ನ 6 ಮಂದಿ ಕಾಂಗ್ರೆಸ್‌ ಮುಖಂಡರ ಭದ್ರಕೋಟೆಗೆ ಐಟಿ ಅಧಿಕಾರಿಗಳು ಲಗ್ಗೆ ಇಟ್ಟಿದ್ದಾರೆ. ಅವರ ಮನೆಯಲ್ಲಿದ್ದ ಇಂಚಿಂಚೂ ಜಾಗವನ್ನು ಜಾಲಾಡಿದ್ದಾರೆ. ಆ ವೇಳೆ ಅಪಾರ ಪ್ರಮಾಣದ ದುಡ್ಡು, ಚಿನ್ನಾಭರಣ, ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ ಪತ್ರ, ಐಷಾರಾಮಿ ಕಾರುಗಳು ಸೇರಿದಂತೆ ವಿವಿಧ ವಸ್ತುಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ತಡರಾತ್ರಿಯವರೆಗೂ ಪರಿಶೀಲನೆ ನಡೆದಿದ್ದು, ಗುರುವಾರವೂ ದಾಳಿ ಮುಂದುವರೆಯುವ ಸಾಧ್ಯತೆಗಳಿವೆ.

ದಾಳಿಗೊಳಗಾದ ಮುಖಂಡರ ವಿವರ
ಪಾಲಿಕೆಯ ಮಾಜಿ ಸದಸ್ಯ ಎಸ್‌.ಗಂಗಾಧರ್‌ ಅವರ ಕೋಣನಕುಂಟೆ ಕ್ರಾಸ್‌ ನಿವಾಸ, ಡಿ.ಕೆ. ಸುರೇಶ್‌ ಆಪ್ತ ಸಹಾಯಕ ಸುಜಯ್‌ ಅವರ ರಾಯಲ್‌ ಪಾರ್ಕ್‌ ನಿವಾಸ, ಗೊಟ್ಟಿಗೆರೆ ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷ ಕೆ.ಬಿ.ಎಲ…. ಶ್ರೀಧರ್‌ರ ನ್ಯೂ ಬ್ಯಾಂಕ್‌ ಕಾಲನಿಯಲ್ಲಿರುವ ಮನೆ, ಅಂಜನಾಪುರ ವಾರ್ಡ್‌ ಅಧ್ಯಕ್ಷ ಬಾಬು ಅವರ ಅಂಜನಾಪುರದಲ್ಲಿರುವ ಬಂಗಲೆ, ಸ್ಥಳೀಯ ಕಾಂಗ್ರೆಸ್‌ ಕಾರ್ಯಕರ್ತ ಚಂದ್ರು ಅಲಿಯಾಸ್‌ ಟಕಾರಿ ಚಂದ್ರು ಅವರ ಕೋಣನಕೊಂಟೆ ಕ್ರಾಸ್‌ನ ಪಿಎನ್‌ಬಿ ಲೇಔಟ್‌ನಲ್ಲಿರುವ ನಿವಾಸ ಹಾಗೂ ಕೆಬಿಎಲ… ಶ್ರೀಧರ್‌ ಆಪ್ತ ಸಹಾಯಕ ಹರೀಶ್‌ ಪುಟ್ಟಪ್ಪಗೆ ಸೇರಿದ ಕೋಟನಕೊಂಟೆ ಕ್ರಾಸ್‌ನಲ್ಲಿರುವ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಜಪ್ತಿ ಮಾಡಿದ್ದಾರೆ.

ಡಿಕೆಸು ಆಪ್ತರ ಮೇಲೆ ದಾಳಿ ಏಕೆ?
ದಾಳಿಗೊಳಗಾದ ಕಾಂಗ್ರೆಸ್‌ ಮುಖಂಡರು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಾಖಲೆ ಇಲ್ಲದ ಕೋಟ್ಯಂತರ ದುಡ್ಡನ್ನು ಸಂಗ್ರಹಿಸಿಟ್ಟಿರುವ ಆರೋಪ ಕೇಳಿ ಬಂದಿತ್ತು. ಈ ವಿಚಾರ ಐಟಿ ಅಧಿಕಾರಿಗಳ ಕಿವಿಗೂ ಬಿದ್ದಿತ್ತು. ಹೀಗಾಗಿ ದಾಳಿ ನಡೆದಿದೆ ಎನ್ನಲಾಗಿದೆ. ಇದಲ್ಲದೇ ಆದಾಯಕ್ಕಿಂತ ಅಧಿಕ ಅಘೋಷಿತ ಆಸ್ತಿ ಹೊಂದಿರುವ ಹಿನ್ನೆಲೆಯಲ್ಲಿ 6 ಮಂದಿ ಮುಖಂಡರ ಮೇಲೆ ದಾಳಿ ನಡೆಸಲಾಗಿದೆ ಎಂದು ಐಟಿಯ ಉನ್ನತ ಮೂಲಗಳು ತಿಳಿಸಿವೆ. ದಾಳಿಗೊಳಗಾದ 6 ಮುಖಂಡರ ವ್ಯವಹಾರದ ಬಗ್ಗೆ ಐಟಿ ಅಧಿಕಾರಿಗಳು ಕಳೆದ ಕೆಲವು ದಿನಗಳಿಂದ ಹದ್ದಿನ ಕಣ್ಣಿಟ್ಟಿದ್ದರು. ತನಿಖೆ ವೇಳೆ ಅಘೋಷಿತ ಆಸ್ತಿ ಹೊಂದಿರುವ ಬಗ್ಗೆ ಕೆಲವು ಸುಳಿವು ಸಿಕ್ಕಿತ್ತು.

ಕೆಜಿಗಟ್ಟಲೆ ಚಿನ್ನ, ಕಂತೆ ಕಂತೆ ನೋಟು ಪತ್ತೆ
ಬೆಂಗಳೂರಿನ 7 ಕಡೆಗಳಲ್ಲಿ ಉದ್ಯಮಿಗಳು, ಚಿನ್ನಾಭರಣ ಮಳಿಗೆ ಮಾಲಕರ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದಾಗ ಕೆಜಿಗಟ್ಟಲೆ ಚಿನ್ನ, ಕಂತೆ-ಕಂತೆ ನೋಟುಗಳು ಪತ್ತೆಯಾಗಿವೆ. ಅಂದಾಜು 16 ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ನಗದು ಜಪ್ತಿ ಮಾಡಿದ್ದಾರೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಮಂಗಳವಾರ ಹಾಗೂ ಬುಧವಾರ ಬೆಂಗಳೂರಿನ ದಕ್ಷಿಣ ಕ್ಷೇತ್ರದಲ್ಲಿರುವ ಕೆಲ ಉದ್ಯಮಿಗಳು, ಚಿನ್ನಾಭರಣ ಮಳಿಗೆ ಮಾಲಕರಿಗೆ ಸೇರಿದ 7 ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next