ಹೈದರಾಬಾದ್: ವಿಧಾನಸಭಾ ಚುನಾವಣೆಯ ಕಾವು ಏರಿರುವ ತೆಲಂಗಾಣದಲ್ಲಿ ರಾಜಕೀಯ ಹೈಡ್ರಾಮಾಗಳು ನಡೆಯುತ್ತಿದ್ದು ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಅವರ ವಿರುದ್ಧ ಕಣಕ್ಕಿಳಿದಿರುವ ಕಾಂಗ್ರೆಸ್ ಅಭ್ಯರ್ಥಿ ವಾಂಟೇರು ಪ್ರತಾಪ್ ರೆಡ್ಡಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಗಾಜ್‌ವೆಲ್ ಕ್ಷೇತ್ರದಿಂದ ಕಣಕ್ಕಿಳಿದಿರುವ ಪ್ರತಾಪ್ ರೆಡ್ಡಿ ಅವರ ನಿವಾಸದ ಲ್ಲಿ ಹಣ ಮತ್ತು ಹೆಂಡ ಹಂಚಲಾಗುತ್ತಿದೆ ಎನ್ನುವ ಆರೋಪದ ಮೇಲೆ ಸೋಮವಾರ ರಾತ್ರಿ ಪೊಲೀಸರು ದಾಳಿ ನಡೆಸಿದ್ದರು.
ಆ ಬಳಿಕ ಪೆಟ್‌ಬಶೀರಾಬಾದ್ ಠಾಣೆಗೆ ಬೆಂಬಲಿಗರೊಂದಿಗೆ ತೆರಳಿದ ಪ್ರತಾಪ್ ರೆಡ್ಡಿ ಅವರು ಅನಿರ್ಧಿಷ್ಟಾವಧಿ ಧರಣಿ ಕುಳಿತಿದ್ದರು. ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಪೊಲೀಸರು ಅವರನ್ನು ಸ್ಥಳದಿಂದ ತೆರಳಲು ಹೇಳಿದಾಗ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ ಹೈಡ್ರಾಮಾ ಮಾಡಿದ್ದಾರೆ.
ಪ್ರತಾಪ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಕ್ಷೇತ್ರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು ವ್ಯಾಪಕ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ತೆಲಂಗಾಣದಲ್ಲಿ ಡಿಸೆಂಬರ್ 7 ರಂದು 119 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು , ಡಿಸೆಂಬರ್ 11 ರಂದು ಮತ ಏಣಿಕೆ ನಡೆಯಲಿದೆ.