ರಾಯಚೂರು: ಕಾಂಗ್ರೆಸ್ ನಾಯಕರು ಎಂಥ ಯಾತ್ರೆ ಮಾಡಿದರೂ ಪ್ರಯೋಜನವಿಲ್ಲ, ಕಾಂಗ್ರೆಸ್‌ನ ಬಸ್ ಯಾತ್ರೆ ಸುಳ್ಳಿನ ಎಕ್ಸ್‌ಪ್ರೆಸ್ ಎಂದು ಸಾರಿಗೆ ಸಚಿವ ಶ್ರೀರಾಮುಲು ಲೇವಡಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಆದರೆ, ಅವರ ಮಾತುಗಳನ್ನು ಜನ ಕೇಳುವುದೇ ಇಲ್ಲ. ಬಸ್ ಯಾತ್ರೆ ಮಾತ್ರವಲ್ಲ ಗ್ರಹಗಳನ್ನು ಹಿಡಿದುಕೊಂಡು ಹೋದರೂ ಜನ ಕಾಂಗ್ರೆಸ್ ತಿರಸ್ಕರಿಸುತ್ತಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಎಂಎಲ್ಸಿ ಎಚ್.ವಿಶ್ವನಾಥ ಕೂಡ ಕಾರಣ. ಅವರು ಚುನಾವಣೆಯಲ್ಲಿ ಸೋತರೂ ಬಿಜೆಪಿ ಎಂಎಲ್ಸಿಯನ್ನಾಗಿ ಮಾಡಿದೆ. ಯಾವುದೋ ಕಾರಣಕ್ಕೆ ಅವರ ಮನಸ್ಸಿಗೆ ನೋವಾಗಿರಬಹುದು. ಮುಖ್ಯಮಂತ್ರಿ ಸೇರಿ ಪಕ್ಷದ ಹಿರಿಯ ನಾಯಕರು ಅವರ ಮನವೊಲಿಸಲು ಯತ್ನಿಸುವುದಾಗಿ ತಿಳಿಸಿದರು.
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ನಾನು ಭೇಟಿಯೇ ಮಾಡಿಲ್ಲ. ಅವರ ಜನ್ಮದಿನಕ್ಕೆ ಒಳ್ಳೆಯದಾಗಲಿ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಬಿಜೆಪಿಗೆ ಹಿನ್ನಡೆ ಆಗುವುದಿಲ್ಲ. ಆರು ಸಲ ಗೆದ್ದಿರುವ ನನಗೆ ಜಾತಿ ಹೆಸರಲ್ಲಿ ರಾಜಕೀಯ ಮಾಡುವ ಅನಿವಾರ್ಯತೆ ಇಲ್ಲ. ಮುಂದಿನ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಇನ್ನೂ ತೀರ್ಮಾನಿಸಿಲ್ಲ.
ಮಾಜಿ ಸಿಎಂ ಸಿದ್ದರಾಮಯ್ಯರಂತೆ ನಾನು ಜನಪ್ರಿಯ ನಾಯಕನಲ್ಲ. ಅವರು ಎಲ್ಲಿ ಬೇಕಾದರೂ ನಿಂತು ಗೆಲ್ಲುತ್ತಾರೆ. ರಾಜ್ಯಕ್ಕೆ ಹೊಸದಾಗಿ 1,800 ಸಾರಿಗೆ ಸಂಸ್ಥೆಯ ಬಸ್‌ಗಳನ್ನು ತರಿಸುತ್ತಿದ್ದು ಈಗಾಗಲೇ ಟೆಂಡರ್ ಪ್ರಕ್ರಿಯೆ ಕೂಡ ಮುಗಿದಿದೆ. ಹೊಸ ಬಸ್‌ಗಳನ್ನು ಕಲ್ಯಾಣ ಕರ್ನಾಟಕಕ್ಕೆ 1,200 ಬಸ್‌ಗಳನ್ನು ನೀಡಲಾಗುವುದು ಎಂದರು.