ದಾವಣಗೆರೆ: ಮಹಾನಗರ ಪಾಲಿಕೆಯ 28 ಮತ್ತು 37ನೇ ವಾರ್ಡ್‌ಗಳಿಗೆ ನಡೆಯುತ್ತಿರುವ ಉಪಚುನಾವಣೆ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್‌ಗೆ ಪ್ರತಿಷ್ಠೆಯ ವಿಷಯವಾಗಿದೆ. ಏಕೆಂದರೆ ಸಂಖ್ಯಾಬಲದಲ್ಲೂ ನಿರ್ಣಾಯಕ ಪಾತ್ರ ವಹಿಸಲಿದೆ.
2019ರ ನ.12ರಂದು ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 28 ಮತ್ತು 37ನೇ ವಾರ್ಡ್ ನಿಂದ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಗೆದ್ದಿದ್ದ ಜೆ.ಎನ್. ಶ್ರೀನಿವಾಸ್ ಮತ್ತು ಶ್ವೇತಾ ಶ್ರೀನಿವಾಸ್ ಬದಲಾದ ರಾಜಕೀಯ ವಾತಾವರಣದಲ್ಲಿ ಬಿಜೆಪಿ ಸೇರಿದ್ದಾರೆ. ಕಮಲ ಪಾಳೆಯಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಉಪಚುನಾವಣೆ ಎದುರಿಸುತ್ತಿರುವುದು ದಂಪತಿಗೆ ಮಾತ್ರವಲ್ಲ, ಬಿಜೆಪಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ತನ್ನ ಇಬ್ಬರು ಸದಸ್ಯರನ್ನು ಸೆಳೆದುಕೊಂಡ ಬಿಜೆಪಿಗೆ ಉಪಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಹವಣಿಕೆಯಲ್ಲಿರುವ ಕಾಂಗ್ರೆಸ್ ಪಾಲಿಗೂ ಚುನಾವಣಾ ಫಲಿತಾಂಶ ಅತ್ಯಂತ ಮಹತ್ವದ್ದಾಗಿದೆ.
‘ಸೀನಣ್ಣ’ ಎಂದೇ ಕರೆಯಲ್ಪಡುವ ಅಂತಾರಾಷ್ಟ್ರೀಯ ಕ್ರೀಡಾಪಟು ಜೆ.ಎನ್. ಶ್ರೀನಿವಾಸ್ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಬಿಜೆಪಿಯ ನಿಟುವಳ್ಳಿಯ ಆರ್. ಲಕ್ಷ್ಮಣ್ ವಿರುದ್ಧ 1416 ಮತಗಳ ಅಂತರದ ಜಯ ಸಾಧಿಸಿದ್ದರು. ಉಪಚುನಾವಣೆಯಲ್ಲೂ ಗೆಲುವಿನ ನಾಗಾಲೋಟ ಮುಂದುವರೆಸುವ ವಿಶ್ವಾಸದಲ್ಲೇ ಶ್ರೀನಿವಾಸ್ ಸೋಮವಾರ ಭರ್ಜರಿ ಮೆರವಣಿಗೆಯ ಮೂಲಕ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯ ಪಾಳೆಯ ಹೊಕ್ಕಿರುವ ಶ್ರೀನಿವಾಸ್ ಗೆಲುವು ಮೇಲ್ನೋಟಕ್ಕೆ ಸುಲಭ ಎಂದು ಕಂಡರೂ ಒಳರಾಜಕೀಯದ ಮರ್ಮದ ಬಗ್ಗೆ ಈಗಲೇ ಹೇಳಲಿಕ್ಕಾಗದು. ವಾರ್ಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತ ಮತದಾರರು ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲರು. ಕಾಂಗ್ರೆಸ್ ಅಭ್ಯರ್ಥಿ ಹುಲ್ಮನೆ ಗಣೇಶ್ ಪಕ್ಕದ ವಾರ್ಡ್‌ನವರೇ ಆಗಿದ್ದಾರೆ. ಅವರ ಪತ್ನಿ ಸವಿತಾ ಗಣೇಶ್ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿದ್ದಾಗ ಜೆ.ಎನ್. ಶ್ರೀನಿವಾಸ್ ಗೆಲುವಿಗೆ ಉರುಳಿಸುವ ದಾಳ, ಬಳಸುವ ಪಟ್ಟುಗಳನ್ನು ತೀರಾ ಹತ್ತಿರದಿಂದ ಬಲ್ಲಂತಹ ಕಾಂಗ್ರೆಸ್‌ನವರು ಉಪಚುನಾವಣೆಯಲ್ಲಿ ಆ ಎಲ್ಲ ತಂತ್ರಗಳಿಗೂ ಕಡಿವಾಣ ಹಾಕಿದಲ್ಲಿ ಕಮಲ ಅರಳುವುದು ತುಸು ಕಷ್ಟ ಆಗಬಹುದು. ಆದರೂ ತಮ್ಮದೇ ಆದ ಖ್ಯಾತಿ ಹೊಂದಿರುವ ಜೆ.ಎನ್. ಶ್ರೀನಿವಾಸ್ ಅನಾಯಾಸವಾಗಿ ಗೆಲುವು ಸಾಧಿಸಬಹುದು ಎಂಬ ಮಾತುಗಳು ವಾರ್ಡ್ ನಲ್ಲಿ ಕೇಳಿ ಬರುತ್ತಿವೆ.
ತಮ್ಮ ಪತಿಯೊಂದಿಗೆ 37ನೇ ವಾರ್ಡ್‌ನಿಂದ (ಕೆಇಬಿ ಕಾಲೋನಿ)ಸ್ಪರ್ಧಿಸಿದ್ದ ಶ್ವೇತಾ ಶ್ರೀನಿವಾಸ್, ಬಿಜೆಪಿಯ ಸವಿತಾ ರವಿಕುಮಾರ್ ವಿರುದ್ಧ 1286 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು. ತಮ್ಮ ಪತಿಯ ಗಾಢ ಪ್ರಭಾವದಿಂದ ಗೆಲುವು ಸಾಧಿಸಿದ್ದ ಶ್ವೇತಾ ಶ್ರೀನಿವಾಸ್ ಈ ಬಾರಿಯೂ ಅದೇ ಉಮೇದಿನಲ್ಲಿದ್ದಾರೆ. ಹಿಂದಿನ ಕಾಂಗ್ರೆಸ್, ಈಗಿನ ಬಿಜೆಪಿಯ ಪ್ರಭಾವವೂ ಗೆಲುವಿಗೆ ದಾರಿಯಾಗಬಹುದು ಎಂಬ ಲೆಕ್ಕಾಚಾರವೂ ಇದೆ. ಕಾಂಗ್ರೆಸ್‌ನಿಂದ ದಾವಣಗೆರೆಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಎಂದೇ ಖ್ಯಾತಿವೆತ್ತಿರುವ ಸಿದ್ಧಗಂಗಾ ವಿದ್ಯಾಸಂಸ್ಥೆ ಯಲ್ಲಿ ಹಲವಾರು ವರ್ಷಗಳಿಂದ ಶಿಕ್ಷಕಿಯಾಗಿರುವ ರೇಖಾರಾಣಿ ಕಣಕ್ಕಿಳಿದಿದ್ದಾರೆ. ಸಂಸ್ಥೆಯ ಖ್ಯಾತಿ, ವಿದ್ಯಾವಂತೆ ಎಂಬ ಅಂಶಗಳು ರೇಖಾರಾಣಿ ಅವರಿಗೆ ಪ್ಲಸ್ ಪಾಯಿಂಟ್ ಆಗಬಹುದು. ಎರಡೂ ಅಂಶಗಳು ವಕೌಟ್ ಆದಲ್ಲಿ ಕಾಂಗ್ರೆಸ್ ಕೆಇಬಿ ಕಾಲೋನಿ ವಾರ್ಡ್ ಹಿಡಿತದಲ್ಲಿಟ್ಟುಕೊಳ್ಳಲಿದೆ ಎನ್ನಲಾಗುತ್ತಿದೆ. ಮೇ 20ರಂದು ನಡೆಯುವ ಚುನಾವಣೆಯಲ್ಲಿ ಮತದಾರರ ಪ್ರಭು ನೀಡುವ ತೀರ್ಮಾನವೇ ಅಂತಿಮ. ಹಾಗಾಗಿ ಅಲ್ಲಿಯವರೆಗೆ ಸೋಲು-ಗೆಲುವಿನ ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಲೇ ಇರುತ್ತವೆ.
ಗೆದ್ದರೆ ಬಿಜೆಪಿಗೆ ಬೂಸ್ಟರ್
ಜೆ.ಎನ್. ಶ್ರೀನಿವಾಸ್ ದಂಪತಿ ಗೆಲುವು ಬಿಜೆಪಿಗೆ ಪ್ರಮುಖ ಅಂಶವಾಗಲಿದೆ. ಮುಂದಿನ ವಿಧಾನಸಭಾ ಚುನಾವಣೆ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಕಾಂಗ್ರೆಸ್ ವಾರ್ಡ್‌ಗಳೇ ಎಂದೇ ಬಿಂಬಿತವಾಗಿರುವ ಎರಡೂ ವಾರ್ಡ್ ಗಳಲ್ಲಿನ ಗೆಲುವು ಬಿಜೆಪಿಗೆ ದೊಡ್ಡ ಬೂಸ್ಟರ್ ಆಗಲಿದೆ. ಹಾಗಾಗಿಯೇ ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ್ ಉಪ ಚುನಾವಣೆಯಾಗಿದ್ದರೂ ಗೆಲುವಿನ ರಣತಂತ್ರ ಹೆಣೆಯುತ್ತಿದ್ದಾರೆ.
ದಂಪತಿ ಸೋಲಿಗೆ ‘ಕೈ’ ಪಣ
ಮೊದಲ ಮೇಯರ್ ಚುನಾವಣೆಯಲ್ಲೇ ಗೈರಾಗುವ ಮೂಲಕ ಪೆಟ್ಟು ನೀಡಿದ್ದ ಜೆ.ಎನ್. ಶ್ರೀನಿವಾಸ್ ದಂಪತಿ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗದೆ ಕಾಂಗ್ರೆಸ್ ಸುಮ್ಮನಾಗಿತ್ತು. ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ಶ್ರೀನಿವಾಸ್ ಅವಕಾಶ ಕೇಳಿದಾಗಲೂ ಸ್ಥಳೀಯ ಹೈಕಮಾಂಡ್ ಅವರನ್ನು ಸಾಗ ಹಾಕಿತ್ತು. ಕೊನೆಗೂ ಶ್ರೀನಿವಾಸ್ ದಂಪತಿ ಕೈ ಕೊಟ್ಟಿರುವುದು ಕಾಂಗ್ರೆಸ್ ನಾಯಕರಿಗೆ ಅರಗಿಸಿಕೊಳ್ಳಲಾಗದ ವಿಷಯ. ಹಾಗಾಗಿಯೇ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ಶ್ರೀನಿವಾಸ್ ದಂಪತಿ ಮತ್ತು ಬಿಜೆಪಿಗೆ ಪಾಠ ಡಿಕಲಿಸಬೇಕು ಎಂಬ ಪಕ್ಕಾ ಲೆಕ್ಕಾಚಾರದೊಂದಿಗೆ ಅಳೆದು ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಎರಡೂ ವಾರ್ಡ್ ಗಳು ಕೈ ತಪ್ಪದಂತೆ ಗೆಲುವಿನ ತಂತ್ರ ರೂಪಿಸಿದೆ.
-ರಾ. ರವಿಬಾಬು