ವಿಜಯಪುರ: ಜಿಪಂ ಅಧ್ಯಕ್ಷರ ಚುನಾವಣೆಯಲ್ಲಿ ಪಕ್ಷ ನಿಷ್ಠೆ ಇಲ್ಲದೇ ಪಕ್ಷಾಂತರ ಮಾಡಿದ ತಮ್ಮ ಪಕ್ಷದ ಸದಸ್ಯರ ವಿರುದ್ಧ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪೊಲೀಸರ ಲಾಠಿ ರುಚಿ ನೋಡಿದ ಘಟನೆ ನಡೆಯಿತು.
ಮತದಾನದ ಸಂದರ್ಭದಲ್ಲಿ ಸಭೆಗೆ ತೆರಳುತ್ತಿದ್ದ ವೇಳೆ ಕಾಂಗ್ರೆಸ್ ಪಕ್ಷದೊಂದಿಗೆ ಬಂದ ಬಿಜೆಪಿ ಸದಸ್ಯರು ಹಾಗೂ ಬಿಜೆಪಿ ನಾಯಕರೊಂದಿಗ ಕಾಂಗ್ರೆಸ್ ಸದಸ್ಯರು ಬಸ್‌ನಲ್ಲಿ ಬರುವಾಗ ಜಿಪಂ ಪ್ರವೇಶ ಮಹಾದ್ವಾರದಲ್ಲಿ ಜಮಾಯಿಸಿದ್ದ ಆಯಾ ಪಕ್ಷಗಳ ಕಾರ್ಯಕರ್ತರು ಗದ್ದಲ ಎಬ್ಬಿಸಿ, ಧಿಕ್ಕಾರ ಕೂಗುತ್ತಿದ್ದರು. ಒಂದು ಹಂತದಲ್ಲಿ ಉದ್ರಿಕ್ತ ಉಭಯ ಪಕ್ಷಗಳ ಕಾಯರ್ತಕರ್ತರು ಎಸ್ಪಿ ಅನುಪಮ್ ಅಗರವಾಲ್ ಅವರಿಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಲಾಠಿಚಾರ್ಜ್ ಮಾಡಿ ಪರಿಸ್ಥಿತಿ ತಹಬದಿಗೆ ತಂದರು.
ಬಿಗುವಿನಿಂದ ಕೂಡಿದ್ದ ಪರಿಸ್ಥಿತಿ ಸುಧಾರಿಸಲ ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಇದರಿಂದ ಇನ್ನಷ್ಟು ಕುಪಿತರಾದ ಕಾರ್ಯಕರ್ತರಲ್ಲಿ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ಆರಂಭಿಸಿದರು. ಇದರಿಂದಾಗಿ ಕರ್ತವ್ಯ ನಿರತ ಐಆರ್‌ಬಿ ಪೇದೆ ಹಾಗೂ ಮುದ್ರಣ ಮಾಧ್ಯಮದ ಛಾಯಾಗ್ರಾಹಕ ಸೇರಿದಂತೆ ಹಲವರಿಗೆ ಸಣ್ಣಪುಟ್ಟ ಗಾಯಗಳಾದವು. ಜಿಪಂ ಪಕ್ಷಾಂತರ ಪರ್ವದ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಜಿಪಂ ಸಭಾಂಗಣಕ್ಕೆ ಸುಮಾರು 500 ಮೀ. ಅಂತರದಲ್ಲಿರುವ ಪ್ರವೇಶ ಮಹಾದ್ವಾರದಲ್ಲೇ ಸದಸ್ಯರು ಹಾಗೂ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ಹೊರತಾಗಿ ಇತರರ ಪ್ರವೇಶ ಸಂಪೂರ್ಣ ನಿರ್ಬಂಧಿಸಲಾಗಿತ್ತು.
ಬಿಜೆಪಿ ಅಭ್ಯರ್ಥಿ ಭೀಮಾಶಂಕರ ಅವರೊಂದಿಗೆ ಆಗಮಿಸುತ್ತಿದ್ದ ಜಿಪಂ ಸದಸ್ಯರಿದ್ದ ವಾಹನವನ್ನು ತಪಾಸಣೆ ನಡೆಸಿ ಒಳಬಿಡಲಾಗಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಸುಜಾತಾ ಕಳ್ಳಿಮನಿ ಬೆಂಬಲಿತ ಸದಸ್ಯರು ಇರುವ ಬಸ್ ಪರಿಶೀಲನೆ ಮಾಡದೇ ಬಿಡಲಾಗುತ್ತಿದೆ ಎಂದು ಪ್ರವೇಶ ಮಹಾದ್ವಾರದಲ್ಲೇ ಬಿಜೆಪಿ ಕಾರ್ಯಕರ್ತರು ಗಲಾಟೆ ಆರಂಭಿಸಿದರು.
ಅಲ್ಲದೇ ಕಾಂಗ್ರೆಸ್ ಸದಸ್ಯರನ್ನು ಹೊತ್ತು ಬಂದಿದ್ದ ಬಸ್ ತಡೆಯಲು ಮುಂದಾದರು ಈ ಹಂತದಲ್ಲಿ ಪರಿಸ್ಥಿತಿ ಬಿಗುನಿಂದ ಕೂಡಲಾರಂಭಿಸಿತು. ಈ ಹಂತದಲ್ಲಿ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಅನಿವಾರ್ಯವಾಗಿ ಲಘು ಲಾಠಿ ಪ್ರಹಾರ ನಡೆಸಿ, ಜನರನ್ನು ಚದುರಿಸುವ ಮೂಲಕ ಉದ್ರಿಕ್ತ ಪರಿಸ್ಥಿತಿ ನಿರ್ಮಾಣ ತಡೆದರು. ಬಿಜೆಪಿಯಿಂದ ಆಯ್ಕೆಯಾಗಿ, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ ನಾಲ್ವರು ಸದಸ್ಯರ ವಿರುದ್ಧ ಜಿಪಂ ಪ್ರವೇಶದ್ವಾರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸದಸ್ಯರ ಭಾವಚಿತ್ರ ಪ್ರದರ್ಶಿಸಿ “ಪಕ್ಷ ದ್ರೋಹಿಗಳು…ಪಕ್ಷ ದ್ರೋಹಿಗಳು…’ ಎಂಬ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ಮಾಜಿ ಶಾಸಕ ರಮೇಶ ಭೂಸನೂರ, ಬಿಜೆಪಿ ಮುಖಂಡರಾದ ವಿಜಯಕುಮಾರ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಇತರರು ತಮ್ಮ ಕಾರ್ಯಕರ್ತರ ನಡೆಗೆ ಬೆಂಬಲವಾಗಿ ನಿಂತಿದ್ದರು.