Advertisement

ಕಾಂಗ್ರೆಸ್‌-BJP ನಡುವೆ ಬೀದಿ ಕಾಳಗ “ಗ್ಯಾರಂಟಿ’

11:12 PM Jun 16, 2023 | Team Udayavani |

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಅಕ್ಕಿ ನೀಡುವ ವಿಚಾರವಾಗಿ ಎರಡು ದಿನಗಳಿಂದ ಕಾಂಗ್ರೆಸ್‌- ಬಿಜೆಪಿ ನಡುವೆ ಆಗುತ್ತಿರುವ ಬಾಯಿ ಮಾತಿನ ಕಾಳಗ ಈಗ “ಬೀದಿ ಕಾಳಗ”ದ ರೂಪ ಪಡೆದುಕೊಳ್ಳುತ್ತಿದೆ. ಕೇಂದ್ರ ಸರಕಾರ ದ್ವೇಷದ ರಾಜ ಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸುತ್ತಿದ್ದರೆ, ಕಾಂಗ್ರೆಸ್‌ ಸರಕಾರ ಜನರಿಗೆ ದೋಖಾ ಮಾಡು ತ್ತಿದೆ ಎನ್ನುವುದು ಬಿಜೆಪಿ ಆರೋಪ.

Advertisement

ಕೊಟ್ಟ ಮಾತಿನಂತೆ ಜುಲೈ ತಿಂಗ ಳಲ್ಲಿ 10 ಕೆ.ಜಿ. ಅಕ್ಕಿ ಕೊಡದಿದ್ದರೆ ಸರಕಾ ರದ ವಿರುದ್ಧ ಬಿಜೆಪಿ ಬೀದಿ ಹೋರಾಟ ಮಾಡಲಿದೆ ಎಂದು ಮಾಜಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇದಕ್ಕೆ ಪ್ರತ್ಯುತ್ತರ ಎಂಬಂತೆ ಅಕ್ಕಿ ಖರೀದಿ ಅವಕಾಶವನ್ನು ನಿರಾಕರಿಸುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿರುವ ಕೇಂದ್ರ ಸರಕಾರದ ವಿರುದ್ಧ ಜೂ.20ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬೀದಿಗಿಳಿದು ಪ್ರತಿಭಟನೆ ಮಾಡು¤ತೇವೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಪ್ರಕಟಿಸಿದ್ದಾರೆ.

ಪಡಿತರ ಕಾರ್ಡುದಾರ ಪ್ರತಿ ವ್ಯಕ್ತಿಗೆ ತಲಾ 10 ಕೆ.ಜಿ. ಅಕ್ಕಿ ನೀಡುವ ಗ್ಯಾರಂಟಿ ಯಾವಾಗ ಖಾತರಿಗೊಳ್ಳುತ್ತೋ ಗೊತ್ತಿಲ್ಲ. ಆದರೆ ಅಕ್ಕಿ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್‌-ಬಿಜೆಪಿ ನಡುವಿನ ಕಾಳಗ ಮುಂದುವರಿಯುವುದಂತೂ “ಗ್ಯಾರಂಟಿ”. ಆಡಳಿತಾರೂಢ ಕಾಂಗ್ರೆಸ್‌ ಪಕ್ಷ ಕೇಂದ್ರ ಸರಕಾರದತ್ತ ಬೊಟ್ಟು ಮಾಡುತ್ತಿದ್ದರೆ, ಕಾಂಗ್ರೆಸ್‌ನವರು ತಮ್ಮ ಕೈಲಾಗದಿದ್ದಕ್ಕೆ ಈಗ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಬಿಜೆಪಿ ತಿರುಗೇಟು ನೀಡುತ್ತಿದೆ. ಇದೇ ವಿಚಾರವಾಗಿ ಕಾಂಗ್ರೆಸ್‌-ಬಿಜೆಪಿ ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳ ಸರಣಿ ಮುಂದುವರಿದಿದೆ.

ಅಕ್ಕಿ ವಿಚಾರದಲ್ಲಿ ತಾಂತ್ರಿಕ ಮತ್ತು ಆಡಳಿತಾತ್ಮಕ ವಿಷಯಗಳೊಂದಿಗೆ ರಾಜಕೀಯ ಸೇರಿಕೊಂಡಿದೆ. ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ಯಡಿ ರಾಜ್ಯಗಳಿಗೆ ಅಕ್ಕಿ ಮಾರಾಟ ಸ್ಥಗಿತಗೊಳಿಸಿ ಪತ್ರ ಬರೆಯುವ ಮೂಲಕ ಕೇಂದ್ರ ಸರಕಾರ ಷಡ್ಯಂತ್ರ ಮಾಡಿದೆ ಎಂದು ಕಾಂಗ್ರೆಸ್‌ ಹೇಳಿದೆ. ಈ ಬಗ್ಗೆ ಮೊದಲೇ ಕೇಂದ್ರ ಸರಕಾರಕ್ಕೆ ಯಾಕೆ ಪತ್ರ ಬರೆದಿಲ್ಲ. ಒಂದು ತಿಂಗಳು ಪ್ರಚಾರ ಗಿಟ್ಟಿಸಿಕೊಂಡು ಈಗ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಯಾಕೆ ಎಂದು ಬಿಜೆಪಿ ಪ್ರಶ್ನಿಸುತ್ತಿದೆ.
ಈ ನಡುವೆ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸಿ ಅನ್ನಭಾಗ್ಯ ಯೋಜನೆ ಯಡಿ 10 ಕೆ.ಜಿ. ಅಕ್ಕಿ ಕೊಡುತ್ತೇವೆ ಎಂದು ಕಾಂಗ್ರೆಸ್‌ ಭರವಸೆ ನೀಡು ತ್ತಿದ್ದರೆ, ಕೊಡದಿದ್ದರೆ ನಾವು ಸುಮ್ಮನಿ ರುವುದಿಲ್ಲ ಎಂದು ಬಿಜೆಪಿ ಹೇಳಿದೆ.

“ಗ್ಯಾರಂಟಿ’ ಘೋಷಣೆಯಂತೆ ಜುಲೈನಲ್ಲಿ 10 ಕೆ.ಜಿ. ನೀಡದಿದ್ದರೆ, ನಾವು ಸರಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ನಿಮ್ಮ ಯೋಜನೆ ಜಾರಿ ಮಾಡಲು ನೀವು ಗಂಭೀರವಾಗಿದ್ದರೆ, ನೀವು ಕೇಂದ್ರ ಸರಕಾರದ ಜತೆ ನೇರವಾಗಿ ಮಾತನಾಡಬೇಕಿತ್ತು. ಅದನ್ನು ಬಿಟ್ಟು ಕೇವಲ ಒಂದು ತಿಂಗಳು ಪ್ರಚಾರ ಮಾಡಿಕೊಳ್ಳುತ್ತಾ ಕಾಲ ಹರಣ ಮಾಡಿದ್ದೀರಿ. ಕೇಂದ್ರ ಸರಕಾರ ಮುಂದಿನ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡುತ್ತದೆ ಎಂಬ ಪರಿಜ್ಞಾನವೇ ಸರಕಾರಕ್ಕಿಲ್ಲ ಎಂದು ಬಿಜೆಪಿಯು ಸರಕಾರದ ವಿರುದ್ಧ ವಾಗ್ಧಾಳಿ ನಡೆಸುತ್ತಿದ್ದಾರೆ.

Advertisement

ಚುನಾವಣೆಯಲ್ಲಿ ಬಿಜೆಪಿ ಸೋತರೆ ಕೇಂದ್ರದ ಅನುದಾನ ಸ್ಥಗಿತ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದರು. ಈಗ ಕರ್ನಾಟಕಕ್ಕೆ ಅಕ್ಕಿ ಖರೀದಿಗೆ ಅವಕಾಶ ತಪ್ಪಿಸಿ ತಮ್ಮ ಮಾತು ಉಳಿಸಿಕೊಂಡಿದ್ದಾರೆ. ಇದು ಬಿಜೆಪಿ ದ್ವೇಷದ ರಾಜಕಾರಣ ಮತ್ತು ಬಡವರ ವಿರೋಧಿ ನೀತಿಗೆ ಸಾಕ್ಷಿ. ಕೇಂದ್ರ ಸರಕಾರ ಕೊಡದಿದ್ದರೂ ರಾಜ್ಯ ಸರಕಾರ ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿ ಕೊಡಲಿದೆ ಎಂದು ಕಾಂಗ್ರೆಸ್‌ ಹೇಳುತ್ತಿದೆ.

“ಗೃಹಲಕ್ಷ್ಮೀ”ಗೆ ಪ್ರತ್ಯೇಕ ಆ್ಯಪ್‌
ಗೃಹಲಕ್ಷ್ಮೀ ಯೋಜನೆ ಜಾರಿಗೆ ಸಿದ್ಧತೆಗಳು ನಡೆದಿದ್ದು, ತುಸು ತಾಂತ್ರಿಕ ಸಮಸ್ಯೆ ಇರುವುದರಿಂದ ಅರ್ಜಿ ಸ್ವೀಕಾರ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ. ಯೋಜನೆಗಾಗಿ ಪ್ರತ್ಯೇಕ ಆ್ಯಪ್‌ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು. ಸೇವಾ ಸಿಂಧು ಪೋರ್ಟಲ್‌ನಲ್ಲಿ ನಿತ್ಯ 200ಕ್ಕಿಂತ ಹೆಚ್ಚು ಅರ್ಜಿ ಪಡೆಯಲು ಆಗುವುದಿಲ್ಲ. ಪ್ರತಿ ಪಂಚಾಯತ್‌ನಲ್ಲಿ ಒಂದು ಗ್ರಾಮ ಒನ್‌ ಮಾತ್ರ ಇದೆ. ಈ ಪ್ರದೇಶದಲ್ಲಿ ಎರಡೂವರೆ ಸಾವಿರ ಕುಟುಂಬಗಳಿವೆ. ಹೀಗಾಗಿ ಅಲ್ಲಿ ಮಹಿಳೆಯರನ್ನು ಸರದಿ ಸಾಲಿನಲ್ಲಿ ನಿಲ್ಲಿಸಿ ಭ್ರಷ್ಟಾಚಾರಕ್ಕೆ ಅವಕಾಶ ನೀಡಬಾರದು ಎಂಬುದು ಸರಕಾರದ ಉದ್ದೇಶ. ಫ‌ಲಾನುಭವಿಗಳು ತಮ್ಮ ಅರ್ಜಿ ತಾವೇ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತದೆ ಎಂದರು.

“ಗ್ಯಾರಂಟಿ”ಗೆ ಅರ್ಜಿ ಸಲ್ಲಿಸಲು ಕಾಲಮಿತಿ ನಿಗದಿ ಮಾಡಿಲ್ಲ: ಡಿಕೆಶಿ
ಗ್ಯಾರಂಟಿ ಯೋಜನೆಗೆ ಅರ್ಜಿ ಸಲ್ಲಿಸಲು ಕಾಲಮಿತಿ ನಿಗದಿ ಮಾಡಿಲ್ಲ. ಯಾವುದೇ ಗೊಂದಲವಿಲ್ಲದೆ ನಿಗದಿಪಡಿಸಿದ ದಾಖಲಾತಿಯೊಂದಿಗೆ ಫ‌ಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ. ರಾಜ್ಯದಲ್ಲಿರುವ ಎಲ್ಲ ವರ್ಗಕ್ಕೂ ಅನುಕೂಲವಾಗುವ ರೀತಿಯಲ್ಲಿ ಕಾಂಗ್ರೆಸ್‌ ಪಕ್ಷ ಚುನಾವಣೆಯಲ್ಲಿ ನುಡಿದಂತೆ ನಡೆದುಕೊಂಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು. ತಾಲೂಕಿನ ಹಂದನಕೆರೆ ಸಬ್ಬೇನಹಳ್ಳಿಯ ಸಿದ್ದರಬೆಟ್ಟದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ನೀಡುವ ಅಗತ್ಯವಿಲ್ಲ. ಮಧ್ಯವರ್ತಿಗಳಿಗೆ ಅವಕಾಶ ನೀಡದೆ ನೇರವಾಗಿ ಫ‌ಲಾನುಭವಿಗಳೇ ಅರ್ಜಿ ಸಲ್ಲಿಸಬಹುದಾಗಿದೆ. ಅಧಿಕಾರಿಗಳು ಲಂಚ ಕೇಳಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next