Advertisement

ದೇವನಗರಿಯಲ್ಲಿ ಕಾಂಗ್ರೆಸ್‌-ಬಿಜೆಪಿ ಪ್ರತಿಭಟನೆ

12:39 PM Mar 10, 2017 | Team Udayavani |

ದಾವಣಗೆರೆ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳಾ, ಕಾರ್ಮಿಕ, ರೈತ  ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರು ಗುರುವಾರ ಮಹಾನಗರ ಪಾಲಿಕೆ ಆವರಣದಲ್ಲಿ  ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. 

Advertisement

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ ದಿನೇಶ್‌ ಕೆ. ಶೆಟ್ಟಿ, ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ 2  ವರ್ಷದಲ್ಲಿ ಆಹಾರ ಧಾನ್ಯಗಳ ಬೆಲೆ ಹೆಚ್ಚಿಸಿದೆ. ಪ್ರತಿ ವಸ್ತುವಿನ ಬೆಲೆ 50 ರೂಪಾಯಿ ದಾಟಿದೆ. 2016ರಲ್ಲಿ 431 ರೂಪಾಯಿ ಇದ್ದಂತಹ ಅಡುಗೆ ಅನಿಲ ಸಿಲಿಂಡರ್‌ ಬೆಲೆ ಈಗ 731 ರೂ. ಆಗಿದೆ. 

ಹತ್ತಾರು ಬಾರಿ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಸುವಂತೆ ನಾಟಕ ಮಾಡಿ, 15 ಬಾರಿ ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರ ಜನ, ಮಹಿಳಾ, ಕಾರ್ಮಿಕ, ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.  ಮೋದಿ ಅಧಿಕಾರಕ್ಕೆ ಬರುವ ಮುನ್ನಅಚ್ಚೆದಿನ್‌… ಎಂಬ ಮಾತುಗಳಾಡಿದ್ದರು. ಈವರೆಗೂ ಅಚ್ಚೆದಿನ್‌ ಎಲ್ಲಿಯೂ ಕಂಡು ಬಂದಿಲ್ಲ.

ಬರೀ ಪೊಳ್ಳು ಭರವಸೆಯೊಂದಿಗೆ ಸರ್ಕಾರ ಕಾಲ ತಳ್ಳುತ್ತಿದೆ. ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದಲ್ಲಿ ಸಿಲಿಂಡರ್‌ ಬೆಲೆ ಬರೀ 25 ರೂಪಾಯಿ ಹೆಚ್ಚಾದಾಗ ಅಲ್ಲೋಲ ಕಲ್ಲೋಲ ಆಗಿದೆ ಎನ್ನುವಂತೆ ಬಿಜೆಪಿಯವರು ಮಾತನಾಡುತ್ತಿದ್ದರು. ಈಗ 300 ರೂಪಾಯಿ ಏರಿಕೆಯಾಗಿದ್ದರೂ ಬಾಯಿ ಬಿಡುತ್ತಿಲ್ಲ.

ಕೂಡಲೇ ಅಡುಗೆ ಅನಿಲ ಸಿಲಿಂಡರ್‌ ಧಾರಣೆ ಇಳಿಸಬೇಕು. ಇಲ್ಲದಿದ್ದಲ್ಲಿ, ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಬಿಜೆಪಿಯವರು, ಕಾಂಗ್ರೆಸ್‌ ಮುಖಂಡರ  ಮನೆ ಮೇಲೆಯಷ್ಟೇ ದಾಳಿ ಮಾಡಿಸುವ ಮೂಲಕ ಹೋರಾಟ ಹತ್ತಿಕ್ಕುವ ಯತ್ನ ನಡೆಸುತ್ತಿದ್ದಾರೆ.

Advertisement

ಚೆಕ್‌ ಮುಖಾಂತರ ಲಂಚ ಪಡೆದು, ಜೈಲಿಗೆ ಹೋಗಿ ಬಂದಿರುವ ಯಡಿಯೂರಪ್ಪ ನವರ ಜೊತೆಗೆ ಕುಳಿತುಕೊಂಡು ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಾರೆ. ಗುಜರಾತ್‌ನಲ್ಲಿ ನಡೆದ ಹತ್ಯಾಕಾಂಡದ ಪಾತ್ರ ಇದೆ ಎಂಬ ಆರೋಪ ಹೊತ್ತಿದ್ದ ಅಮಿತ್‌ ಷಾ ವಿರುದ್ಧದ ಎಲ್ಲಾ ಕೇಸ್‌ ಖುಲಾಸೆ ಆಗುತ್ತಿವೆ.

ಇದು ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಗೆ ಸಾಕ್ಷಿ ಎಂದು ದೂರಿದರು. ಮೇಯರ್‌ ರೇಖಾ ನಾಗರಾಜ್‌ ಮಾತನಾಡಿ, ಕಪ್ಪುಹಣ ಬಯಲಿಗೆ ತರುವ ಭರವಸೆಯೊಂದಿಗೆ ನೋಟ್‌ ಬ್ಯಾನ್‌ ಮಾಡಲಾಯಿತು. ಆದರೆ, ಈವರೆಗೆ ಎಷ್ಟು ಕಪ್ಪುಹಣ ಬಯಲಿಗೆ ಬಂದಿದೆ ಎಂಬಲೆಕ್ಕವನ್ನೇ ಕೊಡುತ್ತಿಲ್ಲ. ಬೆಳಕಿಗೂ ಬರಲೇ ಇಲ್ಲ.

ಪ್ರತಿ ನಿತ್ಯ ಬಳಸುವಂತಹ ಅನಿಲ ಸಿಲಿಂಡರ್‌ ದರ ತಕ್ಷಣ ಇಳಿಸಬೇಕೆಂದು ಒತ್ತಾಯಿಸಿದರು. ಮಹಿಳಾ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷೆ ಅಶ್ವಿ‌ನಿ ಪ್ರಶಾಂತ್‌ ಮಾತನಾಡಿ, ನೋಟು ಅಮಾನ್ಯ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು 50 ದಿನ ಕಾಲಾವಕಾಶ ಕೊಡಿ ಬದಲಾವಣೆ ಮಾಡುವುದಾಗಿ ತಿಳಿಸಿದ್ದರು.

ಈ ಕ್ಷಣಕ್ಕೂ ಯಾವುದೇ ಬದಲಾವಣೆ ಆಗಿಲ್ಲ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿವೆ. ಕೂಡಲೇ ಸಿಲಿಂಡರ್‌ ಬೆಲೆ ಇಳಿಸಬೇಕು ಎಂದು ಒತ್ತಾಯಿಸಿದರು. ಡೆಪ್ಯುಟಿ ಮೇಯರ್‌ ಬಿ. ನಾಗರಾಜಪ್ಪ, ಸದಸ್ಯರಾದ ಎಂ. ಹಾಲೇಶ್‌, ಕೆ. ಚಮನ್‌ ಸಾಬ್‌, ಅಬ್ದುಲ್‌ ಲತೀಫ್‌, ಎಸ್‌. ಬಸಪ್ಪ, ಪಿ.ಎನ್‌. ಚಂದ್ರಶೇಖರ್‌, ಬಿ.ಬಿ. ಲಿಂಗರಾಜ್‌,

ಸುರೇಂದ್ರ ಮೊಯ್ಲಿ, ನಗರಪಾಲಿಕೆ ಮಾಜಿ ಸದಸ್ಯರಾದ ಕೆ.ಜಿ. ಶಿವಕುಮಾರ್‌, ಡಿ.ಎನ್‌. ಜಗದೀಶ್‌, ನಗರಸಭೆ ಮಾಜಿ ಉಪಾಧ್ಯಕ್ಷ ಎ. ನಾಗರಾಜ್‌, ವಿದ್ಯಾರ್ಥಿ ಕಾಂಗ್ರೆಸ್‌ನ ಮುಜಾಹಿದ್‌ ಪಾಷಾ, ಶ್ರೀಕಾಂತ್‌ ಬಗರೆ, ಅಲ್ಲಾವಲ್ಲಿ ಗಾಜಿಖಾನ್‌, ಚೈತನ್ಯ, ವೀಣಾ ಮಂಜುನಾಥ್‌, ದಾಕ್ಷಾಯಣಮ್ಮ, ಪಿ. ರಾಜ್‌ಕುಮಾರ್‌, ಸೋಮಲಾಪುರ ಹನುಮಂತಪ್ಪ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next