Advertisement

ನಾಮಪತ್ರ ಸಲ್ಲಿಕೆ ವೇಳೆ ಕೈ-ಕಮಲ ಶಕ್ತಿ ಪ್ರದರ್ಶನ

11:38 PM Apr 29, 2019 | Lakshmi GovindaRaju |

ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಸೋಮವಾರ ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಹಾಗೂ ಬಿಜೆಪಿ ಅಭ್ಯರ್ಥಿ ಎಸ್‌.ಐ.ಚಿಕ್ಕನಗೌಡರ ತಮ್ಮ, ತಮ್ಮ ಪಕ್ಷದ ನಾಯಕರೊಂದಿಗೆ ಉಮೇದುವಾರಿಕೆ ಸಲ್ಲಿಸಿದರು.

Advertisement

“ಕೈ’ ಮುಖಂಡರ ಸಾಥ್‌: ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರ ನಾಮಮತ್ರ ಸಲ್ಲಿಸುವ ಮೆರವಣಿಗೆ ಪಟ್ಟಣದ ಗಾಳಿ ಮಾರೆಮ್ಮಾ ದೇವಸ್ಥಾನದಿಂದ ಆರಂಭವಾಯಿತು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯರ್ತರು, ಶಿವಳ್ಳಿ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿದ್ದರು.

ಸಿದ್ದರಾಮಯ್ಯ, ದಿನೇಶ ಗುಂಡೂರಾವ್‌, ಮಾಜಿ ಸಚಿವರಾದ ಎಚ್‌.ಕೆ.ಪಾಟೀಲ, ವಿನಯ ಕುಲಕರ್ಣಿ, ಉಮಾಶ್ರೀ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್‌.ಎಚ್‌.ಕೋನರಡ್ಡಿ, ಮಾಜಿ ಶಾಸಕ ಎಂ.ಎಸ್‌.ಅಕ್ಕಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ| ಪುಷ್ಪಾ ಅಮರನಾಥ ಸೇರಿ ಹಲವು ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಇದಕ್ಕೂ ಮೊದಲು ಬೆಳಗ್ಗೆ 11 ಗಂಟೆ ವೇಳೆಗೆ ಚುನಾವಣಾ ಕಚೇರಿಗೆ ಸ್ಥಳೀಯ ಮುಖಂಡರು ಹಾಗೂ ಪುತ್ರ ಅಮರಶಿವನೊಂದಿಗೆ ಆಗಮಿಸಿದ ಕುಸುಮಾವತಿ ಶಿವಳ್ಳಿ, ನಾಮಪತ್ರ ಸಲ್ಲಿಸಿದ್ದರು.

ಕಣ್ಣೀರಿಟ್ಟ ಕುಸುಮಾ ಶಿವಳ್ಳಿ: ಮೆರವಣಿಗೆಯಲ್ಲಿ ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ ಅವರು ತಮ್ಮ ಪತಿ ಸಿ.ಎಸ್‌.ಶಿವಳ್ಳಿ ಅವರನ್ನು ನೆನೆದು ಕಣ್ಣೀರಿಟ್ಟರು.

Advertisement

ಶಕ್ತಿ ತೋರಿಸಿದ ಬಿಜೆಪಿ: ಪ್ರವಾಸಿ ಮಂದಿರ ಬಳಿಯ ಮರಾಠ ಭವನದಿಂದ 1.30ರ ಸುಮಾರಿಗೆ ಬಿಜೆಪಿ ಮೆರವಣಿಗೆ ಆರಂಭವಾಯಿತು. ರಸ್ತೆಯುದ್ದಕ್ಕೂ ಕೇಸರಿ ಬಾವುಟಗಳು, ನಾಯಕರ ಕಟೌಟ್‌ಗಳು ರಾರಾಜಿಸುತ್ತಿದ್ದವು. ಮೆರವಣಿಗೆಯುದ್ದಕ್ಕೂ ಮೋದಿ ಪರ ಘೋಷಣೆಗಳು ಮೊಳಗಿದವು.

ಜಗದೀಶ ಶೆಟ್ಟರ, ಸಂಸದ ಪ್ರಹ್ಲಾದ ಜೋಶಿ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಬಿಜೆಪಿ ಮುಖಂಡ ಎಂ.ಆರ್‌.ಪಾಟೀಲ ಮೆರವಣಿಗೆಯಲ್ಲಿ ಪಾಲ್ಗೊಂಡು ಸಾಥ್‌ ನೀಡಿದರು. ಮೆರವಣಿಗೆಗೆ ಮುಂಚೆ ಅಭ್ಯರ್ಥಿ ಚಿಕ್ಕನಗೌಡರ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಒಂದು ನಾಮಪತ್ರ ಸಲ್ಲಿಸಿದ್ದರು.

ಓಡಿ ಬಂದ ಬಿಜೆಪಿ ಅಭ್ಯರ್ಥಿ: ಎಸ್‌.ಐ.ಚಿಕ್ಕನಗೌಡರ ನಾಮಪತ್ರ ಸಲ್ಲಿಸಲು ಲಘುಬಗೆಯಿಂದ ಓಡಿ ಬಂದರು. “ಬಿ’ ಫಾರ್ಮ್ ಸಹಿತ ನಾಮಪತ್ರ ಸಲ್ಲಿಸಲು ಇನ್ನು ಕೇವಲ 9 ನಿಮಿಷ ಬಾಕಿ ಇರುವಾಗ ಚುನಾವಣಾ ಕಚೇರಿ ಆವರಣ ಪ್ರವೇಶಿಸಿದರು. ಒಂದು ತಾಸಿನಲ್ಲಿ ಮೆರವಣಿಗೆ ಚುನಾವಣಾ ಕಚೇರಿ ತಲುಪಲಿದೆ ಎನ್ನುವ ನಿರೀಕ್ಷೆ ಮುಖಂಡರದ್ದಾಗಿತ್ತು. ಆದರೆ, ಮೆರವಣಿಗೆ ವಿಳಂಬವಾಗಿದ್ದರಿಂದ ಇನ್ನೂ ಚುನಾವಣಾ ಕಚೇರಿ ಮುಂದಿರುವಾಗಲೇ ತೆರೆದ ವಾಹನದಿಂದಿಳಿದು ನಾಮಪತ್ರ ಸಲ್ಲಿಸಲು ಅವರು ಓಡಿ ಬರಬೇಕಾಯಿತು.

ಕಾಂಗ್ರೆಸ್‌ ಕಾರ್ಯಕರ್ತರಿಗೆ ನಮಸ್ಕರಿಸಿದ ಬಿಜೆಪಿ ಮುಖಂಡರು: ಚುನಾವಣಾ ಕಚೇರಿಗೆ ಆಗಮಿಸಿದ ಬಿಜೆಪಿ ಮುಖಂಡರನ್ನು ಕಂಡ ಕಾಂಗ್ರೆಸ್‌ ಕಾರ್ಯಕರ್ತರು ಶಿವಳ್ಳಿ ಹೆಸರಲ್ಲಿ ಘೋಷಣೆ ಕೂಗಿದರು. ಆಗ ಜಗದೀಶ ಶೆಟ್ಟರ, ಪ್ರಹ್ಲಾದ ಜೋಶಿ, ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡರ ಅವರು ಕಾಂಗ್ರೆಸ್‌ ಕಾರ್ಯಕರ್ತರತ್ತ ಕೈ ಬೀಸಿ ನಮಸ್ಕರಿಸಿದರು. ಇದನ್ನು ಗಮನಿಸಿದ ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್‌ನವರು ಎಂದು ಹೇಳುತ್ತಿದ್ದಂತೆ ಪರಸ್ಪರ ಮುಖ ನೋಡಿಕೊಂಡು ಮುಗುಳ್ನಗೆ ನಕ್ಕು ಒಳ ನಡೆದರು.

ಬಿಜೆಪಿಯಲ್ಲಿ ಯಾವುದೇ ಅಸಮಾಧಾನಗಳಿಲ್ಲ. ಎಂ.ಆರ್‌.ಪಾಟೀಲ್‌ ಇಲ್ಲದೆ ಚಿಕ್ಕನಗೌಡ ಇಲ್ಲ. ಅವರ ಬೆಂಬಲದಿಂದಲೇ ನನ್ನ ಗೆಲುವು ಸಾಧ್ಯ. ಈ ಚುನಾವಣೆಯಲ್ಲಿ ನನ್ನ ಗೆಲವು ನಿಶ್ಚಿತ. ನಮ್ಮ ಸರಕಾರದ ಸಾಧನೆಗಳು, ನನ್ನ ಅವಧಿಯಲ್ಲಿ ಕ್ಷೇತ್ರದಲ್ಲಾದ ಅಭಿವೃದ್ಧಿ ಯೋಜನೆಗಳು ನನಗೆ ಗೆಲುವು ತಂದು ಕೊಡಲಿವೆ.
-ಎಸ್‌.ಐ.ಚಿಕ್ಕನಗೌಡರ, ಬಿಜೆಪಿ ಅಭ್ಯರ್ಥಿ.

ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಒಮ್ಮತದ ಅಭಿಪ್ರಾಯದ ಮೇರೆಗೆ ನಾನು ಚುನಾವಣೆಗೆ ಸ್ಪರ್ಧಿಸಿದ್ದೇನೆ. ಸಿದ್ದರಾಮಯ್ಯ ಸಾಹೇಬರು ಈ ಚುನಾವಣೆ ಮಾಡುತ್ತಿದ್ದಾರೆ. ನನ್ನ ಪತಿ ಶಿವಳ್ಳಿ ಅವರು ಕ್ಷೇತ್ರದ ಜನರೊಂದಿಗೆ ಹೊಂದಿದ್ದ ಅವಿನಾಭಾವ ಸಂಬಂಧ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ.
-ಕುಸುಮಾವತಿ ಶಿವಳ್ಳಿ, ಮೈತ್ರಿ ಅಭ್ಯರ್ಥಿ.

Advertisement

Udayavani is now on Telegram. Click here to join our channel and stay updated with the latest news.

Next