ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ದಿಲ್ಲಿಗೆ ತೆರಳಿದ್ದು, ಕಾಂಗ್ರೆಸ್ ಹೈಕಮಾಂಡ್ ಭೇಟಿ ಜತೆಗೆ ಪ್ರಧಾನಿ ಮೋದಿ ಭೇಟಿಗೆ ಸಮಯ ನಿಗದಿ ಆಗಿದೆ. ಇಬ್ಬರೂ ಎರಡು ದಿನ ದಿಲ್ಲಿಯಲ್ಲೇ ಇರಲಿದ್ದಾರೆ. ಜತೆಗೆ ಬಿಜೆಪಿ ರಾಜ್ಯ ನಾಯಕತ್ವದ ವಿರುದ್ಧ ಸಿಡಿದೆದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೂ ದಿಲ್ಲಿಗೆ ತೆರಳಿದ್ದು, ರಾಷ್ಟ್ರೀಯ ವರಿಷ್ಠರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಇದರ ಮಧ್ಯೆ ಬಿಜೆಪಿ ವರಿಷ್ಠರು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೂ ದಿಲ್ಲಿಗೆ ಬರುವಂತೆ ಬುಲಾವ್ ನೀಡಿದ್ದು, ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳು ಗರಿಗೆದರಿವೆ.
ಬೆಂಗಳೂರು: ನಿಗದಿ ಯಂತೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಬಲಿಗರೊಂದಿಗೆ ಸೋಮವಾರ ಸಂಜೆ ದಿಲ್ಲಿಗೆ ತೆರಳಿದ್ದು, ರಾಜ ಕೀಯ ನಿರೀಕ್ಷೆಗಳು ಗರಿಗೆದರಿವೆ.
ರಾಜ್ಯಕ್ಕೆ ಎರಗಿರುವ “ಬರ’ದಿಂದ ತತ್ತರಿಸಿರುವ ರೈತರಿಗಾಗಿ ಪರಿಹಾರ, ಮಹಾದಾಯಿ, ಕೃಷ್ಣಾ ಸಹಿತ ಹಲವು ನೀರಾವರಿ ಯೋಜನೆಗಳಿಗೆ ಅಗತ್ಯ ಅನುಮೋದನೆಗಳು ಮತ್ತು ನೆರವಿಗೆ ಕೇಂದ್ರ ಸರಕಾರದ ಮನವೊಲಿಕೆ ಒಂದೆಡೆಯಾದರೆ, ಮತ್ತೂಂದೆಡೆ ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ, ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಪ್ರದೇಶ ಕಾಂಗ್ರೆಸ್ ಸಮಿತಿಯ ಪುನಾರಚನೆ ಒಳಗೊಂಡಂತೆ ಹಲವು ರಾಜಕೀಯ ಅಂಶಗಳಿಗೆ ಅಂಕಿತ ಮುದ್ರೆ ಹಾಕಿಸಿಕೊಳ್ಳಬೇಕಿದೆ. ಎರಡು ದಿನಗಳ ಈ ಪ್ರವಾಸದಲ್ಲಿ ಇಷ್ಟೂ ವಿಚಾರಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ನಾಯಕರು ನಿರ್ಧರಿಸಿದ್ದಾರೆ.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಭೇಟಿ ಮಾಡಿ, ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಅಂತಿಮಗೊಳಿಸುವಂತೆ ಮನವಿ ಮಾಡಲು ಉದ್ದೇಶಿಸ ಲಾಗಿದೆ. 25 ಶಾಸಕರು ಮತ್ತು ನಾಲ್ವರು ವಿಧಾನ ಪರಿಷತ್ತಿನ ಸದಸ್ಯರು ಅಂತಿಮಗೊಳಿಸಿದ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಯಾರಿಗೆ ಯಾವ ನಿಗಮ ಅಥವಾ ಮಂಡಳಿ ಎನ್ನುವುದು ಇತ್ಯರ್ಥ ಆಗಬೇಕಿದೆ ಎನ್ನಲಾ ಗಿದೆ. ನಿಗದಿತ ಅವಧಿಯಲ್ಲಿ ಹೈಕಮಾಂಡ್ ಭೇಟಿಗೆ ಅವಕಾಶ ಸಿಗದಿದ್ದರೆ, ಇನ್ನೂ ಒಂದು ದಿನ ಅಲ್ಲೇ ಇದ್ದು ಭೇಟಿ ಮಾಡಿಯೇ ಹಿಂದಿರುಗಲು ನಾಯಕರು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.