Advertisement

ಕಾಂಗ್ರೆಸ್‌-ಬಿಜೆಪಿ “ಕೃಷ್ಣಾನುದಾನ’ಜಟಾಪಟಿ

12:42 PM Mar 16, 2022 | Team Udayavani |

ವಿಧಾನಸಭೆ: ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡುವ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ ನಾಯಕರ ನಡುವೆ ವಿಧಾನಸಭೆಯಲ್ಲಿ ಆರೋಪ ಪ್ರತ್ಯಾರೋಪ ನಡೆಯಿತು.

Advertisement

ಕಾಂಗ್ರೆಸ್‌ ಶಾಸಕ ಎಂ.ಬಿ.ಪಾಟೀಲ್‌ ಬಜೆಟ್‌ ಮೇಲಿನ ಭಾಷಣದಲ್ಲಿ ಪಾಲ್ಗೊಂಡು ಮಾತನಾಡಿ, ಬಿಜೆಪಿ ಸರ್ಕಾರ ಸುಜಲಾಂ ಸುಫ‌ಲಾಂ ಎಂದು ಪ್ರಣಾಳಿಕೆಯಲ್ಲಿ 1.50 ಲಕ್ಷ ಕೋಟಿ ರೂ. ರಾಜ್ಯದ ನೀರಾವರಿ ಯೋಜನೆಗಳಿಗೆ ಖರ್ಚು ಮಾಡುವುದಾಗಿ ಹೇಳಿದ್ದರು. ಇದುವರೆಗೂ ಈ ವರ್ಷದ ಬಜೆಟ್‌ ಘೋಷಣೆಯೂ ಸೇರಿದಂತೆ 68 ಸಾವಿರ ಕೋಟಿ ಮಾತ್ರ ಖರ್ಚು ಮಾಡಿದ್ದಾರೆ. ಇನ್ನೂ 90 ಸಾವಿರ ಕೋಟಿ ಬಾಕಿ ಇದೆ. ಈ ವರ್ಷದ ಬಜೆಟ್‌ನಲ್ಲಿ ಬೃಹತ್‌ ನೀರಾವರಿಗೆ 14,200 ಕೋಟಿ ರೂ. ನೀಡಲಾಗಿದೆ. 10 ಸಾವಿರ ಕೋಟಿ ರೂ. ಪೆಂಡಿಂಗ್‌ ಬಿಲ್‌ ಇದೆ. ಮಾರ್ಚ್‌ವರೆಗೂ ಇನ್ನೂ ನಾಲ್ಕೆçದು ಸಾವಿರ ಕೋಟಿ ರೂ. ಬಿಲ್‌ ಗೆ ಹಣ ನೀಡಬೇಕಾಬಹುದು. ಅದರಲ್ಲಿ ಈ ವರ್ಷ ಖರ್ಚು ಮಾಡಲು ಎಷ್ಟು ಉಳಿಯುತ್ತದೊ ಗೊತ್ತಿಲ್ಲ ಎಂದರು

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಬಜೆಟ್‌ನಲ್ಲಿ ಏನಾಗಬೇಕು ಎಂದು ಸಲಹೆ ನೀಡಬೇಕು. ಅದನ್ನು ಬಿಟ್ಟು ಹಣ ಕೊಟ್ಟಿಲ್ಲ ಎಂದು ಆರೋಪ ಮಾಡುವುದು ಸರಿಯಲ್ಲ. ಕೊರೊನಾ, ಪ್ರವಾಹ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಬಸವಣ್ಣನವರು ತನ್ನ ಬಣ್ಣಿಸಬೇಡ ಎಂದು ಹೇಳಿದ್ದಾರೆ. ಅದನ್ನು ಪಾಲಿಸಿ ಎಂದರು.

ಈ ವೇಳೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಕಾಂಗ್ರೆಸ್‌ ಅಧಿಕಾರದ ಅವಧಿಯಲ್ಲಿ ಪ್ರತಿ ವರ್ಷ ಕೃಷ್ಣಾ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ರೂ. ನೀಡುವುದಾಗಿ “ಕಾಂಗ್ರೆಸ್‌ ನಡಿಗೆ ಕೃಷ್ಣೆಯ ಕಡೆಗೆ’ ಪಾದಯಾತ್ರೆ ಮಾಡಿದ್ದರು, ಆದರೆ, ಐದು ವರ್ಷದ ಅವಧಿಯಲ್ಲಿ ಕೇವಲ 7200 ಕೋಟಿ ರೂ. ಗಳನ್ನು ಮಾತ್ರ ಖರ್ಚು ಮಾಡಿದರು. ಕೃಷ್ಣಾ ಮೇಲ್ದಂಡೆ ಯೋಜನೆಗೆ ಯಾರ ಕಾಲದಲ್ಲಿ ಎಷ್ಟು ಹಣ ಖರ್ಚು ಮಾಡಿದ್ದರು ಎನ್ನುವ ಎಲ್ಲ ಪಟ್ಟಿಯೂ ನನ್ನ ಬಳಿ ಇದೆ. 1964ರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಶಂಕುಸ್ಥಾಪನೆ ಮಾಡಿದರು. ಆಗ ಮಹಾರಾಷ್ಟ್ರದವರು ಕೋಯ್ನಾ ಆಣೆಕಟ್ಟೆ ಕಟ್ಟಲು 2 ಕೋಟಿ ರೂ. ರಾಜ್ಯ ಸರ್ಕಾರದಿಂದ ಕೇಳಿದ್ದರು. ಆಗ ಕೇಂದ್ರದಲ್ಲಿ, ಮುಂಬೈನಲ್ಲಿ ಹಾಗೂ ಮೈಸೂರಿನಲ್ಲಿ ಕಾಂಗ್ರೆಸ್‌ನ ತ್ರಿಬಲ್‌ ಎಂಜಿನ ಸರ್ಕಾರ ಇತ್ತು. ಅವರು 2 ಕೋಟಿ ರೂ. ಕೊಡದಿರುವದಕ್ಕೆ ನಮಗೆ ಇದುವರೆಗೂ ನೀರು ಸಿಗದಂತಹ ಪರಿಸ್ಥಿತಿಯಾಗಿದೆ ಎಂದರು.

ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ್‌, ಆಗ ಬಿ.ಡಿ. ಜತ್ತಿಯವರು ನಮ್ಮ ರಾಜ್ಯದ ಮುಖ್ಯಮಂತ್ರಿಗಳಿದ್ದರು. ಆದರೆ, ಆ ಸಂದರ್ಭದಲ್ಲಿ ಈ ಅಣೆಕಟ್ಟೆ ಕಟ್ಟಲು 32 ಕೋಟಿ ರೂ. ಗೆ ಮಹಾರಾಷ್ಟ್ರದವರು ಬೇಡಿಕೆ ಇಟ್ಟಿದ್ದರು ಎಂದು ಬಿಜೆಪಿಯ ಹಿರಿಯ ಮುಖಂಡರೇ ಹೇಳುತ್ತಾರೆ. ಆ ಕಾಲದಲ್ಲಿ ರಾಜ್ಯದ ಬಜೆಟ್‌ 32 ಸಾವಿರ ಕೋಟಿ ಇತ್ತು. ಆಗ ಅಷ್ಟೊಂದು ಹಣ ಕೊಡುವ ಸ್ಥಿತಿಯಲ್ಲಿ ಇರಲಿಲ್ಲ. ಆದರೆ, ಕಾರಜೋಳ ಅವರು 2 ಕೋಟಿ ಎಂದು ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

Advertisement

ಅದಕ್ಕೆ ಪ್ರತಿಕ್ರಿಯಿಸಿದ ಕಾರಜೋಳ, ನಾನು ಯಾರ ಹೆಸರನ್ನೂ ಹೇಳಿಲ್ಲ. ಆಗಿನ ಕಾಲದವರು ಈಗ ಯಾರೂ ಇಲ್ಲ. ಯಾರ ಹೆಸರೂ ನಾನು ಪ್ರಸ್ತಾಪಿಸಿಲ್ಲ. ಆಗ ಸಿಎಂ ಆಗಿದ್ದವರು ಯಾರೂ ಈಗ ಜೀವಂತವಾಗಿಲ್ಲ. ಅದ್ಕೆ ನಾನು ಯಾರ ಹೆಸರನ್ನೂ ಹೇಳುವುದಿಲ್ಲ. ಆದರೆ, ಕಾಂಗ್ರೆಸ್‌ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆ ಮಾಡಿ ಕಾಂಗ್ರೆಸ್‌ನವರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದು ಆರೋಪಿಸಿದರು.

ಆಗ ಮಧ್ಯ ಪ್ರವೇಶಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ನಾವು ರಾಜ್ಯದ ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ 10 ಸಾವಿರ ಕೋಟಿ ನೀಡುವುದಾಗಿ ಹೇಳಿದ್ದೆವು. ಅದರಂತೆ ಹಣ ಖರ್ಚು ಮಾಡಿದ್ದೇವೆ. ಯಾರಾದರೂ ಬುದ್ಧಿ ಇರುವವರು ಕೇವಲ ಕೃಷ್ಣಾ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ಇಡುತ್ತೇವೆ ಎಂದು ಹೇಳುತ್ತಾರಾ ಎಂದು ಅಸಮಾಧಾನ ಹೊರ ಹಾಕಿದರು. ಆ ಸಂದರ್ಭದಲ್ಲಿ ಸಚಿವ ಗೋವಿಂದ ಕಾರಜೋಳ, ಕಾಂಗ್ರೆಸ್‌ ಆ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಪುಸ್ತಕದ ಪ್ರತಿ ಪ್ರದರ್ಶಿಸಿ, ಕಾಂಗ್ರೆಸ್‌ನವರೇ ನೀಡಿದ ಭರವಸೆ ಎಂದು ತೋರಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರ ನಡುವೆ ಮಾತಿನ ಚಕಮಕಿ ನಡೆಯಿತು. ಮಧ್ಯ ಪ್ರವೇಶಿಸಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಎಂ.ಬಿ. ಪಾಟೀಲ ಅವರಿಗೆ ಭಾಷಣ ಮುಕ್ತಾಯ ಮಾಡುವಂತೆ ಸೂಚಿಸಿದರು.

 ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆ ಅನುಷ್ಣಾನಕ್ಕೆ ಕ್ರಮ

ವಿಧಾನಸಭೆ: ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಒಂಬತ್ತು ಉಪ ಯೋಜನೆಗಳ ಅನುಷ್ಠಾನ, ಪುನರ್‌ ವಸತಿ-ಪುನರ್‌ ನಿರ್ಮಾಣಕ್ಕೆ 1,862.86 ಕೋಟಿ ರೂ. ಮೀಸಲಿಡಲಾಗಿದೆ ಎಂದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ. ಪ್ರಶ್ನೋತ್ತರ ವೇಳೆ ಜೆಡಿಎಸ್‌ನ ದೇವಾನಂದ್‌ ಚವ್ಹಾಣ್‌ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, 2021-22ನೇ ಸಾಲಿನಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಒದಗಿಸಲಾದ ಅನುದಾನದಲ್ಲಿ 1,862.86 ಕೋಟಿ ರೂ. ಅನುದಾನ ಮೀಸಲಿಟ್ಟು ಪ್ರಸ್ತುತ ಯೋಜನಾ ಕಾಮಗಾರಿಗಳು ಪ್ರಗತಿಯಲ್ಲಿವೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ 51.148.94 ಕೋಟಿ ರೂ. ಪರಿಷ್ಕೃತ ಅಂದಾಜು ಮೊತ್ತದ ಯೋಜನಾ ವರದಿ ಈಗಾಗಲೇ ಕೇಂದ್ರ ಜಲ ಆಯೋಗದಿಂದ ಅಗತ್ಯ ಪೂರ್ವಭಾವಿ ಪರಿಶೀಲನೆ ಮಾಡುವಂತೆ ಕೋರಿ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಜತೆಗೆ ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಕೋರಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next