ಜೈಪುರ್: ರಾಜಸ್ಥಾನದ ಆರು ಜಿಲ್ಲೆಗಳಲ್ಲಿನ 1564 ಪಂಚಾಯತ್ ಸಮಿತಿ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ 598 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದು, ವಿಪಕ್ಷ ಭಾರತೀಯ ಜನತಾ ಪಕ್ಷ 490 ವಾರ್ಡ್ ಗಳಲ್ಲಿ ಜಯ ಸಾಧಿಸಿದೆ.
ಇದನ್ನೂ ಓದಿ:ಕೋವಿಡ್ ನೆಗೆಟಿವ್ ಪ್ರಮಾಣ ಪತ್ರವಿಲ್ಲದೆ ಗೋವಾ ಪ್ರವೇಶಕ್ಕೆ ಬಾಂಬೆ ಹೈಕೋರ್ಟ್ ಅಸ್ತು..!
ಆರು ಜಿಲ್ಲೆಗಳಲ್ಲಿನ ಪಂಚಾಯತ್ ಸಮಿತಿಗೆ ಮೂರು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಶನಿವಾರ (ಸೆಪ್ಟೆಂಬರ್ 04) ಬೆಳಗ್ಗೆ ಮತಎಣಿಕೆ ಆರಂಭಗೊಂಡಿತ್ತು. ಮಧ್ಯಾಹ್ನ 3.30ರವರೆಗೆ 1,389 ಸ್ಥಾನಗಳ ಫಲಿತಾಂಶ ಘೋಷಣೆಯಾಗಿದೆ. ಏತನ್ಮಧ್ಯೆ ಜೋಧ್ ಪುರ್ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದೆ.
ಆರು ಜಿಲ್ಲೆಗಳಲ್ಲಿನ 78 ಪಂಚಾಯತ್ ಸಮಿತಿಯ 1,564 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಈವರೆಗೆ ಘೋಷಣೆಯಾದ ಫಲಿತಾಂಶದ ಪ್ರಕಾರ, ಕಾಂಗ್ರೆಸ್ 598 ಸ್ಥಾನಗಳಲ್ಲಿ, ಬಿಜೆಪಿ 490, ಆರ್ ಎಲ್ ಪಿ 39, ಬಿಎಸ್ಪಿ 10 ಹಾಗೂ ಎನ್ ಸಿಪಿ 02 ಸ್ಥಾನಗಳಲ್ಲಿ ಜಯ ಗಳಿಸಿದೆ. ಅಲ್ಲದೇ ಪಂಚಾಯತ್ ಸಮಿತಿ ಚುನಾವಣೆಯಲ್ಲಿ 250 ಮಂದಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ.
ಜಿಲ್ಲಾ ಪರಿಷತ್ ನ 200 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಈವರೆಗೆ ಕೇವಲ ಒಂದು ಸ್ಥಾನದ ಫಲಿತಾಂಶ ಮಾತ್ರ ಘೋಷಣೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.