Advertisement

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ: ವಿಶ್ವಾಸ

02:16 PM Dec 06, 2017 | |

ಹಿರೇಕೆರೂರು: ಬಿಜೆಪಿ, ಜೆಡಿಎಸ್‌ನವರು ಎಷ್ಟೇ ತಿಪ್ಪರಲಾಗಾ ಹಾಕಿದರೂ ಮುಂದಿನ ಅವಧಿಗೆ ರಾಜ್ಯದಲ್ಲಿ ನಾವೇ (ಕಾಂಗ್ರೆಸ್‌) ಅಧಿಕಾರಕ್ಕೆ ಬರುತ್ತೇವೆ. ನಮ್ಮಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ. ಕಾಂಗ್ರೆಸ್‌ಪರ ಅಲೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಪಟ್ಟಣದಲ್ಲಿ ಮಂಗಳವಾರ ತಾಲೂಕು ಕಾಂಗ್ರೆಸ್‌ ಸಮಿತಿ ಆಯೋಜಿಸಿದ್ದ ಅಭಿನಂದನಾ ಸಮಾವೇಶದಲ್ಲಿ ಅವರು ಮಾತನಾಡಿದರು. ನಾವು ಹಗರಣ ಮುಕ್ತ ಸರ್ಕಾರ ಕೊಟ್ಟಿದ್ದೇವೆ. ನಮ್ಮ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಯಾವ ಮಂತ್ರಿಯೂ ಹಗರಣದಲ್ಲಿ ಸಿಲುಕಿಕೊಂಡಿಲ್ಲ. ಯಾವುದಾದರೂ ಇದ್ದರೆ ದಾಖಲೆಗಳ ಮೂಲಕ ಹೇಳಲಿ. ಅವರಿಗೆ ತಾಕತಿದ್ದರೆ ಈ
ಬಗ್ಗೆ ಚರ್ಚಿಸಲು ಒಂದೇ ವೇದಿಕೆಗೆ ಬರುವಂತೆ ಆಹ್ವಾನ ನೀಡಿದರೂ ಉತ್ತರ ಕೊಡುತ್ತಿಲ್ಲ ಎಂದರು.

ಯಡಿಯೂರಪ್ಪ ಅವರು ಸೈಕಲ್‌ ಕೊಟ್ಟಿದ್ದೇನೆ, ಸೀರೆ ಕೊಟ್ಟಿದ್ದೇನೆ ಎಂದಷ್ಟೇ ಹೇಳುತ್ತಾರೆ. ಲೂಟಿ ಹೊಡೆದದ್ದು, ಜೈಲಿಗೆ ಹೋದದ್ದು ಹೇಳುವುದಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಸಹ ಜೈಲಿಗೆ ಹೋಗಿ ಬಂದಿದ್ದಾರೆ. ಈಗ ನಮ್ಮ ಮೇಲೆ ಸುಳ್ಳು 
ಆರೋಪ ಮಾಡುತ್ತಿದ್ದು, ಇವರಿಗೆ ನೈತಿಕತೆ ಇಲ್ಲ. ಅಧಿಕಾರದಲ್ಲಿ ದಲಿತರ ಮನೆಗೆ ಹೋಗದ ಬಿಜೆಪಿಯವರಿಗೆ ಈಗ ದಲಿತರು ನೆನಪಾಗಿದ್ದು, ಅಲ್ಲಿ ಹೊಟೇಲ್‌ನಿಂದ ತಿಂಡಿ ತರಿಸಿ ತಿಂದು ಡೊಂಘಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.  ಬಿಜೆಪಿಯವರು ಧರ್ಮ-ಧರ್ಮಗಳ ನಡುವೆ, ಜಾತಿ, ಜಾತಿಗಳ ನಡುವೆ ಸಂಘರ್ಷ ಹಚ್ಚಿ ರಾಜಕೀಯ ಲಾಭ ಪಡೆದುಕೊಳ್ಳಲು ಹುನ್ನಾರ ನಡೆಸಿದ್ದಾರೆ. ಸಂಸದ ಪ್ರತಾಪ ಸಿಂಹ ಅವರಿಗೆ ಇನ್ನೂ ರಾಜಕೀಯ ಪೌಢಿಮೆ ಬಂದಿಲ್ಲ. ಕೇಂದ್ರ ಸಚಿವ ಅನಂತಕುಮಾರ ಅವರಿಗೆ ಮಂತ್ರಿಯಾಗುವ ಯೋಗ್ಯತೆಯೇ ಇಲ್ಲ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ 
ಸಹ ನನ್ನ ವಿರುದ್ಧ ಏಕವಚನದಲ್ಲಿ ಟೀಕಿಸುತ್ತಾರೆ. ಇವರಿಗೆಲ್ಲಿದೆ ಸಂಸ್ಕೃತಿ ಎಂದರು. 

ಬಿಜೆಪಿ ಆರಂಭಿಸಿರುವ ರ್ಯಾಲಿ ಅದು ಪರಿವರ್ತನಾ ರ್ಯಾಲಿಯಲ್ಲ, ಪಶ್ಚಾತಾಪದ ರ್ಯಾಲಿ. ಬಿಜೆಪಿಯಲ್ಲಿನ ಕೋಮುವಾದಿಗಳು ಜಾತ್ಯತೀತರಾಗಿ ಪರಿವರ್ತನೆಯಾಗಬೇಕು. ಜಾತಿಯ ವಿಷಬೀಜ ಬಿತ್ತಿ, ಜಾತಿ, ಧರ್ಮದ ನಡುವೆ ಬೆಂಕಿ ಹಚ್ಚುವ ಕೋಮುವಾದಿಗಳ ಪರಿವರ್ತನೆ ಆಗಬೇಕು ಎಂದರು. ಬಿಜೆಪಿಯವರು ಯಾವಾಗಲೂ ಕಾಂಗ್ರೆಸ್‌ ಮುಕ್ತ ರಾಜ್ಯ ಮಾಡುತ್ತೇವೆ ಎಂದು ಹೇಳುತ್ತಲೇ ಇರುತ್ತಾರೆ. ಆದರೆ ನಾವು ಅವರಂತೆ ಬಿಜೆಪಿ ಮುಕ್ತ ಮಾಡುತ್ತೇವೆ ಎಂದು ಹೇಳಲ್ಲ. ಬದಲಾಗಿ ರಾಜ್ಯವನ್ನು ಹಸಿವು ಮುಕ್ತ, ಗುಡಿಸಲು ಮುಕ್ತ, ಬಯಲು ಶೌಚಮುಕ್ತ ರಾಜ್ಯವನ್ನಾಗಿ ಮಾಡುತ್ತೇವೆಂದು ಹೇಳುತ್ತೇವೆ ಎಂದರು. 

ಮಿಶನ್‌ 150 ಠುಸ್‌: ಯಡಿಯೂರಪ್ಪ ಮಿಶನ್‌-150 ಎಂದು ಹೇಳುತ್ತಿದ್ದರು. ಈಗ ಟುಸ್‌ ಪಟಾಕಿಯಾಗಿದೆ. ಏಕೆಂದರೆ ಅದು ಈಗ ಮಿಶನ್‌-50ಗೆ ಬಂದಿದೆ.

Advertisement

ತುಟಿ ಬಿಚ್ಚಲಿಲ್ಲ: ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಉಗ್ರಪ್ಪ ಅವರು ವಿಧಾನ ಪರಿಷತ್‌ನಲ್ಲಿ ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಿದ್ದರು. ಆಗ ಯಡಿಯೂರಪ್ಪನವರು ರೈತರ ಸಾಲ ಮನ್ನಾ ಮಾಡಲು ಆಗಲ್ಲ. ರಾಜ್ಯ ಸರ್ಕಾರದ ಬಳಿ ನೋಟು ಮುದ್ರಣ ಮಾಡುವ ಯಂತ್ರ ಇಲ್ಲ ಎಂದು ಹೇಳಿದ್ದನ್ನು ಜನ ಮರೆತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ರೈತರ ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ಗ್ರಾಮೀಣ ಬ್ಯಾಂಕ್‌ ಸಾಲ ಮನ್ನಾ ಮಾಡುವಂತೆ ಕೋರಿ ಸರ್ವ ಪಕ್ಷಗಳ ನಿಯೋಗವನ್ನು ಪ್ರಧಾನಿ ಮೋದಿಯವರ ಬಳಿ ಕರೆದೊಯ್ದಿದ್ದೆ. ನಾನು ಪ್ರಧಾನಿಯವರ ಬಳಿ ರೈತರ ಸಾಲ ಮನ್ನಾ ಮಾಡುವಂತೆ ಕೈ ಜೋಡಿಸಿ ಪ್ರಾರ್ಥನೆ ಮಾಡಿದರೂ ಈ ಗಿರಾಕಿಗಳು ಯಾರೂ (ಯಡಿಯೂರಪ್ಪ, ಶೆಟ್ಟರ್‌ ಸೇರಿದಂತೆ ಬಿಜೆಪಿ ನಾಯಕರು) ತುಟಿಪಿಟಕ್‌ ಎನ್ನಲಿಲ್ಲ. ಮಹದಾಯಿ ವಿಚಾರದಲ್ಲೂ
ನಿಯೋಗ ಒಯ್ದಾಗಲೂ ಬಿಜೆಪಿ ನಾಯಕರು ತುಟಿ ಬಿಚ್ಚಲಿಲ್ಲ. ಹೀಗಾಗಿ ಬಿಜೆಪಿಯವರಿಗೆ ತಾವು ರೈತರಪರ ಎಂದು ಹೇಳಲು ನೈತಿಕತೆ ಇಲ್ಲ ಎಂದರು.

ಬಿ.ಸಿ. ಬಣಕಾರ್‌ಗೆ ಗೆಲ್ಲಿಸಿ!
ಕಳೆದ ಚುನಾವಣೆಯಲ್ಲಿ ಗೆಲ್ಲುವ ಪಕ್ಷದ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಿ.ಸಿ. ಪಾಟೀಲ ಹೆಸರೂ ಇತ್ತು. ಅವರು ಸೋತಿದ್ದೇ ಆಶ್ಚರ್ಯ. ಅವರು  ಅಧಿಕಾರ ಇರದಿದ್ದರೂ ನನ್ನ ಬಳಿ ಬಂದು ಜನರ ಸಮಸ್ಯೆ, ಬೇಡಿಕೆ ಈಡೇರಿಸಿಕೊಂಡು ಹೋಗಿದ್ದಾರೆ. ಇಲ್ಲಿಯ ಶಾಸಕ ಬಣಕಾರ ಯಾವತ್ತೂ ನನ್ನ ಬಳಿ ಜನರ ಬೇಡಿಕೆ ಇಟ್ಟುಕೊಂಡು ಬಂದಿಲ್ಲ ಎಂದ ಸಿಎಂ ಸಿದ್ದರಾಮಯ್ಯ, ಮುಂದಿನ ಚುನಾವಣೆಯಲ್ಲಿ ಬಿ.ಸಿ. ಪಾಟೀಲ ಅವರನ್ನು ಗೆಲ್ಲಿಸಿ ಎನ್ನುವ ಬದಲಿಗೆ “ಬಿ.ಸಿ. ಬಣಕಾರ ಅವರನ್ನು ಗೆಲ್ಲಿಸಿ’ ಎಂದರು. ಜನರು ಕೇಕೇ ಹಾಕಿದಾಗ ಸರಿಪಡಿಸಿಕೊಂಡು “ಬಿ.ಸಿ. ಪಾಟೀಲ ಅವರನ್ನು ಗೆಲ್ಲಿಸಿ’ ಎಂದು ಮತದಾರರಲ್ಲಿ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next