Advertisement

‘ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ’

10:59 AM Dec 17, 2017 | Team Udayavani |

ಮಹಾನಗರ: ಸ್ವಾತಂತ್ರ್ಯ ದೊರಕಿಸಿಕೊಟ್ಟು ದೇಶಕ್ಕೆ ಭದ್ರ ಬುನಾದಿ ಹಾಕಿದ ನೆಹರೂ-ಗಾಂಧಿ ಕುಟುಂಬದಿಂದ ಹುಟ್ಟಿ ಬಂದಿರುವ ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ನ ಚುಕ್ಕಾಣಿ ಹಿಡಿದಿರುವುದು ಹೆಮ್ಮೆಯ ವಿಚಾರ. ಮುಂದೆ ಇವರ ನೇತೃತ್ವದಲ್ಲಿ ದೇಶದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ರಾಹುಲ್‌ ಗಾಂಧಿ ಅವರು ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಶನಿವಾರ ನಗರದ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್‌ ಕಚೇರಿ ಮುಂಭಾಗ ನಡೆದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.

Advertisement

ಪ್ರಸ್ತುತ ಕಾಂಗ್ರೆಸ್‌ ಪಕ್ಷವು ಯುವಕರಿಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಎಐಸಿಸಿಯ ಅಧ್ಯಕ್ಷಗಿರಿಯನ್ನು ರಾಹುಲ್‌ರಂತಹ ಯುವನಾಯಕನಿಗೆ ನೀಡಿದೆ. ಇವರು ಪ್ರಧಾನಿಗಿಂತಲೂ ದೊಡ್ಡ ಹುದ್ದೆಯನ್ನು ಪಡೆಯುವುದಕ್ಕೂ ಅರ್ಹರಾಗಿದ್ದಾರೆ. ಆದರೆ ಪ್ರಸ್ತುತ ಅಪಪ್ರಚಾರದ ಮೂಲಕ ಕಾಂಗ್ರೆಸ್ಸನ್ನು ಟೀಕೆ ಮಾಡಲಾಗುತ್ತಿದೆ ಎಂದರು.

ಪಕ್ಷದಲ್ಲಿ ಹೊಸ ಚೈತನ್ಯ
ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಮಾತನಾಡಿ, ತಮಗೆ ಪ್ರಧಾನಿಯಾಗುವ ಅವಕಾಶವಿದ್ದರೂ ಸೋನಿಯಾ ಗಾಂಧಿ ಅವರು ತ್ಯಾಗ ಮಾಡುವ ಮೂಲಕ ಒಬ್ಬ ಸಮರ್ಥ ಆರ್ಥಿಕ ತಜ್ಞನಿಗೆ ಅಧಿಕಾರ ನೀಡಿದ್ದರು. ಇದೀಗ ಒಬ್ಬ ಸಮರ್ಥ ನಾಯಕ ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ನ ಚುಕ್ಕಾಣಿ ಹಿಡಿಯುವ ಮೂಲಕ ಪಕ್ಷದಲ್ಲಿ ಹೊಸ ಚೈತನ್ಯ ಮೂಡಿದೆ ಎಂದರು.

ಶಾಸಕರಾದ ಅಭಯಚಂದ್ರ ಜೈನ್‌, ಜೆ.ಆರ್‌. ಲೋಬೋ, ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ, ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಮಿಥುನ್‌ ರೈ ಮಾತನಾಡಿದರು. ಪಕ್ಷದ ಪದಾಧಿಕಾರಿಗಳಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಡಿ.ಎಸ್‌. ಮಮತಾ ಗಟ್ಟಿ, ಎಂ. ಶಶಿಧರ ಹೆಗ್ಡೆ, ವಿಶ್ವಾಸ್‌ಕುಮಾರ್‌ ದಾಸ್‌, ಸಲೀಂ, ಸದಾಶಿವ ಉಳ್ಳಾಲ್‌, ಟಿ.ಕೆ. ಸುಧೀರ್‌, ಸಂತೋಷ್‌ ಶೆಟ್ಟಿ, ದೀಪಕ್‌ ಪೂಜಾರಿ, ಪ್ರವೀಣ್‌ಚಂದ್ರ ಆಳ್ವ, ಹರಿನಾಥ್‌, ಸಂಜೀವ ಮೊಲಿ, ಅಬ್ದುಲ್‌ ರವೂಫ್‌, ಅಶೋಕ್‌ ಡಿ.ಕೆ., ಅಪ್ಪಿ, ಸಬಿತಾ ಮಿಸ್ಕಿತ್‌, ಮನುರಾಜ್‌, ನಝೀರ್‌ ಬಜಾಲ್‌ ಮೊದಲಾದವರು ಉಪಸ್ಥಿತರಿದ್ದರು. 

ಬೆಲೆ ಗಗನಕ್ಕೆ
ದೇಶದ ಪ್ರಧಾನಿಯವರು ರೈಲ್ವೇ ಸ್ಟೇಷನ್‌ನಲ್ಲಿ ಚಹಾ ಮಾರುತ್ತಿದ್ದರು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅವರು ಹೇಳುವ ಕಾಲದಲ್ಲಿ ಅಲ್ಲಿ ರೈಲ್ವೇ ಸ್ಟೇಷನ್‌ ಇರಲೇ ಇಲ್ಲ. ಈ ರೀತಿ ಅಪಪ್ರಚಾರದ ಮೂಲಕವೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆಧಾರ್‌ ಕಾರ್ಡ್‌ ತಂದಾಗ ಬಿಜೆಪಿಯವರು ಕಾಂಗ್ರೆಸನ್ನು ಟೀಕೆ ಮಾಡಿದರು. ಆದರೆ ಈಗ ಅವರೇ ಆಧಾರ್‌ ಕಡ್ಡಾಯ ಮಾಡಿದ್ದಾರೆ. ಪ್ರಸ್ತುತ ದಿನಗಳಲ್ಲಿ ಪೆಟ್ರೋಲ್‌-ಡೀಸೆಲ್‌, ಅಡುಗೆ ಅನಿಲ ಬೆಲೆ ಗಗನಕ್ಕೇರಿದರೂ ಯಾರೂ ಮಾತನಾಡುತ್ತಿಲ್ಲ ಎಂದು ಸಚಿವ ರೈ ಆರೋಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next