Advertisement

Election; ವಿಧಾನ ಪರಿಷತ್‌ ಗೆಲ್ಲಲು ಕಾಂಗ್ರೆಸ್‌ ಸರ್ವ ತಂತ್ರ

12:00 AM May 13, 2024 | Team Udayavani |

ಬೆಂಗಳೂರು: ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಆರೂ ಸ್ಥಾನಗಳನ್ನು ಗೆಲ್ಲಲು ಆಡಳಿತಾರೂಢ ಕಾಂಗ್ರೆಸ್‌ ನಿರ್ಧರಿಸಿದೆ. ಇದಕ್ಕಾಗಿ ಸರ್ವ ತಂತ್ರ ಪ್ರಯೋಗಿಸಲು ಮುಂದಾಗಿದೆ. ಜತೆಗೆ ಈ ಬಾರಿ ಪಕ್ಷವೇ ಮುಂದೆ ನಿಂತು ಚುನಾವಣೆ ನಡೆಸಲಿದೆ.

Advertisement

ಭಾರತ್‌ ಜೋಡೋ ಸಭಾಂಗಣದಲ್ಲಿ ರವಿವಾರ ಆಯೋಜಿಸಿದ್ದ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳ ಚುನಾವಣ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌, ನಮ್ಮ ಅಭ್ಯರ್ಥಿಗಳು ಗೆಲ್ಲಲು ಸರ್ವ ರೀತಿಯ ಸಹಕಾರ ನೀಡುವುದಾಗಿ ಘೋಷಿಸಿದರು.

ಸಭೆಯಲ್ಲಿ ಮೊದಲಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿ.ಕೆ.ಶಿವಕುಮಾರ್‌, ಮುಂಬರುವ ವಿಧಾನ ಪರಿಷತ್‌ ಚುನಾವಣೆಯನ್ನು ನಾವು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯನ್ನು ಎದುರಿಸಿದ ಮಾದರಿಯಲ್ಲಿ ಎದುರಿಸಿ ಆರಕ್ಕೆ 6 ಸ್ಥಾನಗಳನ್ನೂ ಗೆಲ್ಲಬೇಕು. ಈ ನಿಟ್ಟಿನಲ್ಲಿ ಪಕ್ಷವೇ ಚುನಾವಣೆ ನಡೆಸಲಿದೆ ಎಂದು ಘೋಷಿಸಿದರು.

ವಿಧಾನ ಪರಿಷತ್‌ನಲ್ಲಿ ನಾವು ಬಹುಮತ ಪಡೆಯಬೇಕು. ಇಲ್ಲದಿದ್ದಲ್ಲಿ ನಮ್ಮ ಮಸೂದೆಗಳಿಗೆ ಅಲ್ಲಿ ತಡೆಯಾಗುತ್ತದೆ. ಒಂದು ವೇಳೆ ನಾವು ಇಲ್ಲಿ ಆರು ಸ್ಥಾನಗಳನ್ನು ಗೆದ್ದರೆ ವಿಧಾನ ಪರಿಷತ್‌ನಲ್ಲಿ ಬಹುಮತಕ್ಕೆ ಸಮೀಪ ಬರುತ್ತೇವೆ. ಅಲ್ಲಿನ ಸಭಾಪತಿ, ಉಪಸಭಾಪತಿ ಹುದ್ದೆಗಳು ನಮಗೆ ಸಿಗುತ್ತವೆ. ಆದ್ದರಿಂದ ಚುನಾವಣೆ ಗೆಲ್ಲಲು ಅಭ್ಯರ್ಥಿಗಳಿಗೆ ಪಕ್ಷ ಸರ್ವ ರೀತಿಯ ನೆರವು ನೀಡಲಿದೆ ಎಂದು ಭರವಸೆ ನೀಡಿದರು.

ಪ್ರತಿ ವಿಭಾಗದ ಜವಾಬ್ದಾರಿಯನ್ನು ಒಬ್ಬೊಬ್ಬ ಕಾರ್ಯಾಧ್ಯಕ್ಷರಿಗೆ ನೀಡಲಾಗುವುದು. ಉಳಿದಂತೆ ಎಲ್ಲ ಮಂತ್ರಿಗಳು, ಶಾಸಕರು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಪಕ್ಷದ ಮುಂಚೂಣಿ ಸಂಘಟನೆಗಳ ಪದಾಧಿಕಾರಿಗಳು ಮತ್ತು ನಿಗಮ ಮಂಡಳಿಗಳ ಅಧ್ಯಕ್ಷರು ಹೀಗೆ ಎಲ್ಲರೂ ಸೇರಿ ಚುನಾವಣೆಯನ್ನು ಎದುರಿಸಬೇಕು ಎಂದು ಅವರು ತಾಕೀತು ಮಾಡಿದರು.

Advertisement

ಚುನಾವಣೆಯನ್ನು ನಡೆಸುವ ಜವಾಬ್ದಾರಿಯನ್ನು ಅಭ್ಯರ್ಥಿಗೆ ಮಾತ್ರ ಸೀಮಿತಗೊಳಿಸಿದರೆ ಸಾಧ್ಯವಿಲ್ಲ. ಇಡೀ ಪಕ್ಷವೇ ಅಭ್ಯರ್ಥಿಗಳ ಬೆನ್ನಿಗೆ ನಿಲ್ಲಬೇಕು. ಪಕ್ಷದ ಮುಖಂಡರು, ಕಾರ್ಯಕರ್ತರು ಎಲ್ಲರೂ ಚುನಾವಣೆಯಲ್ಲಿ ಸಕ್ರಿಯರಾಗಬೇಕು. ಲೋಕಸಭಾ ಚುನಾವಣೆಗೆ ದುಡಿದಿದ್ದೇವೆ, ಇನ್ನು ವಿಶ್ರಾಂತಿ ಪಡೆಯೋಣ ಎಂಬ ಮನೋಭಾವ ಬಿಟ್ಟು ಬಿಡಿ ಎಂದು ಶಿವಕುಮಾರ್‌ ಹೇಳಿದರು.

ಬಂಡಾಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಾಧ್ಯತೆ ಇರುವಲ್ಲಿ ಮುಂಚಿತವಾಗಿಯೇ ಬಂಡಾಯ ಶಮನ ಮಾಡಲು ಪ್ರಯತ್ನಿಸಬೇಕು. ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮಂತ್ರಿಗಳು, ಶಾಸ
ಕರು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ಪಾಲ್ಗೊಳ್ಳಬೇಕು. ಸಾಧ್ಯವಾದರೆ ಕ್ಯಾಬಿನೆಟ್‌ ಸಚಿವರು ಮತ್ತು ಎಲ್ಲ ಶಾಸಕರ ಸಭೆ ಕರೆದು ಚರ್ಚೆ ನಡೆಸುತ್ತೇನೆ ಎಂದು ಶಿವಕುಮಾರ್‌ ಹೇಳಿದರು.

ಸರಕಾರ, ಪಕ್ಷದಿಂದ ಅಗತ್ಯ ನೆರವು: ಸಿಎಂ
ಪಕ್ಷದ ಅಭ್ಯರ್ಥಿಗಳಿಗೆ ಸರಕಾರ ಮತ್ತು ಪಕ್ಷ ಅಗತ್ಯ ನೆರವು ನೀಡಲು ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಈ ಸಲ ಅಭ್ಯರ್ಥಿಗಳ ಹೆಸರನ್ನು ಮುಂಚಿತವಾಗಿಯೇ ಘೋಷಿಸಿ ಚುನಾವಣ ಪ್ರಚಾರಕ್ಕೆ ಸಾಕಷ್ಟು ಸಮಯ ನೀಡಿದ್ದೇವೆ. ಆದ್ದರಿಂದ ಆರಕ್ಕೆ 6 ಸ್ಥಾನಗಳನ್ನೂ ಗೆಲ್ಲಬೇಕು. ಪದವೀಧರರು ಮತ್ತು ಶಿಕ್ಷಕರು ಕಾಂಗ್ರೆಸ್‌ಗೆ ವೋಟ್‌ ಹಾಕೊಲ್ಲ ಎಂಬ ಅಭಿಪ್ರಾಯವನ್ನು ಬದಲಾಯಿಸಬೇಕು ಎಂದು ಹೇಳಿದರು.

ಮತದಾರರನ್ನು ವೈಯಕ್ತಿಕವಾಗಿ ತಲುಪಲು ಪ್ರಯತ್ನ ನಡೆಸಬೇಕು. ಪ್ರತಿ ಗ್ರಾಮದಲ್ಲಿರುವ ಮತದಾರರನ್ನು ಮನೆ ಮನೆಗೆ ಭೇಟಿ ನೀಡಿ ತಲುಪಬೇಕು. ಮತದಾರರ ಪಟ್ಟಿಯನ್ನು ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ನೀಡಿ ಅವರು ಕೂಡ ಮತದಾರರನ್ನು ಸಂಪರ್ಕಿಸಬೇಕು ಎಂದು ಹೇಳಿದರು.

ನಾವು ಆರು ಕ್ಷೇತ್ರಗಳಲ್ಲೂ ಗೆಲ್ಲಲು ಪೂರಕ ವಾತಾವರಣವಿದ್ದು, ಅದನ್ನು ಬಳಸಿಕೊಳ್ಳಬೇಕು. ವಿಧಾನ ಪರಿಷತ್‌ ಚುನಾವಣೆಯನ್ನು ಎದುರಿಸಿದ ಅನುಭವ ಇರುವವರೆ ಅಭ್ಯರ್ಥಿಗಳಾಗಿದ್ದಾರೆ. ಪುಟ್ಟಣ್ಣ, ಮರಿತಿಬ್ಬೇಗೌಡ ಅವರಿಗೆ ಗೆಲ್ಲುವ ಕಲೆಯಿದೆ. ಆದ್ದರಿಂದ ಅವರನ್ನು ಕಲಾವಂತರು ಎಂದು ಕರೆಯಬಹುದು ಎಂದು ಹೇಳಿದರು.

ಪಕ್ಷದ ಕಾರ್ಯಾಧ್ಯಕ್ಷರಾದ ಜಿ. ಸಿ. ಚಂದ್ರಶೇಖರ್‌, ತನ್ವೀರ್‌ ಸೇಠ್, ವಿನಯ್‌ ಕುಲಕರ್ಣಿ, ವಸಂತ ಕುಮಾರ್‌, ಸಚಿವರಾದ ರಾಮಲಿಂಗಾ ರೆಡ್ಡಿ, ಕೆ. ಎಚ್‌. ಮುನಿಯಪ್ಪ, ಕೆ.ಎನ್‌ ರಾಜಣ್ಣ, ಮಧು ಬಂಗಾರಪ್ಪ, ಪ್ರಿಯಾಂಕ್‌ ಖರ್ಗೆ, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹ್ಮದ್‌ ಸಹಿತ ಶಾಸಕರು ಹಾಗೂ ಅಭ್ಯರ್ಥಿಗಳು ಉಪಸ್ಥಿತರಿದ್ದರು.

ಅಭ್ಯರ್ಥಿಗಳ ಜತೆ ಸಭೆ
ಕಾರ್ಯಕ್ರಮ ಮುಕ್ತಾಯಗೊಂಡ ಬಳಿಕ ಡಿ.ಕೆ.ಶಿವಕುಮಾರ್‌ ಅವರು ಅಭ್ಯರ್ಥಿಗಳು ಮತ್ತು ಪಕ್ಷದ ಬ್ಲಾಕ್‌ ಅಧ್ಯಕ್ಕರ ಜತೆ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದರು. ಹಾಗೆಯೇ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಿಸಿದರು.

ಬಿಜೆಪಿ ಕೊಡುಗೆ ಶೂನ್ಯ
ಬಿಜೆಪಿ ಶಿಕ್ಷಕರಿಗೆ ಮತ್ತು ಪದವೀಧರರಿಗೆ ಏನು ಕೊಡುಗೆ ನೀಡಿದೆ. ಬಿಜೆಪಿಯ ಕೊಡುಗೆ ಶೂನ್ಯ ಎಂದು ಸಿದ್ದರಾಮಯ್ಯ ಹೇಳಿದರು. ರಾಜ್ಯದಲ್ಲಿ ಎನ್‌ಪಿಎಸ್‌ ಜಾರಿಯಾಗಿದ್ದು, ಬಿಜೆಪಿ ಮತ್ತು ಜೆಡಿಎಸ್‌ ಸರಕಾರವಿದ್ದಾಗ. ಒಪಿಎಸ್‌ ಬಗ್ಗೆ ನಾವು ಪಾಸಿಟಿವ್‌ ಆಗಿದ್ದರೂ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಯಾವುದೇ ಭರವಸೆ ನೀಡಲು ಸಾಧ್ಯವಿಲ್ಲ. ಎನ್‌ಪಿಎಸ್‌ ಬಗ್ಗೆ ಮುಖ್ಯ ಕಾರ್ಯದರ್ಶಿಗಳ ವರದಿ ಸಚಿವ ಸಂಪುಟದ ಮುಂದೆ ಹೋಗಿ ತೀರ್ಮಾನಗೊಳ್ಳಬೇಕಿದೆ ಎಂದು ಹೇಳಿದರು. ಅದೇ ರೀತಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಾವು ರದ್ದುಪಡಿಸಿ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತಿದ್ದೇವೆ ಎಂಬುದನ್ನು ಮತದಾರರಿಗೆ ತಿಳಿಸಿವಂತೆ ಹೇಳಿದರು.

ಜೆಡಿಎಸ್‌ ತೊರೆದಿದ್ದ ಮರಿತಿಬ್ಬೇಗೌಡ
ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ
ಬೆಂಗಳೂರು: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಿರೀಕ್ಷೆಯಂತೆ ಮರಿತಿಬ್ಬೇಗೌಡರ ಹೆಸರನ್ನು ಕಾಂಗ್ರೆಸ್‌ ಅಖೈರುಗೊಳಿಸಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮರಿತಿಬ್ಬೇಗೌಡರ ಉಮೇದುದಾರಿಕೆಯನ್ನು ಒಪ್ಪಿಕೊಂಡಿದ್ದಾರೆ ಎಂದು ರವಿವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ತಿಳಿಸಿದ್ದಾರೆ. ಮರಿತಿಬ್ಬೇಗೌಡ ಅವರು ಇತ್ತೀಚೆಗಷ್ಟೆ ತಮ್ಮ ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ, ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದರು. ಆಗಲೇ ಅವರಿಗೆ ಮುಂದಿನ ವಿಧಾನ ಪರಿಷತ್‌ ಚುನಾವಣೆಯಲ್ಲಿ ಟಿಕೆಟ್‌ ನೀಡುವ ಭರವಸೆ ನೀಡಲಾಗಿತ್ತು.

ಮಾಜಿ ಉಪ ಸಭಾಪತಿಯೂ ಆಗಿರುವ ಮರಿತಿಬ್ಬೇಗೌಡ ಸತತ ನಾಲ್ಕು ಬಾರಿ ಗೆದ್ದಿದ್ದಾರೆ. 2000ದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ, 2006ರಲ್ಲಿ ಪಕ್ಷೇತರರಾಗಿ,2012 ಮತ್ತು 2018ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು.

ನೈಋತ್ಯ ಪದವೀಧರರ ಕ್ಷೇತ್ರದಲ್ಲಿ
ಕಾಂಗ್ರೆಸ್‌ಗೆ ಬಂಡಾಯದ ಬಿಸಿ
ಶಿವಮೊಗ್ಗ: ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಂಡಾಯ ಬಿಸಿ ಎದುರಾಗಿದೆ. ಪಕ್ಷದ ಅಭ್ಯರ್ಥಿ ಆಯನೂರು ಮಂಜುನಾಥ ವಿರುದ್ಧ ಶಿವಮೊಗ್ಗದ ಕಾಂಗ್ರೆಸ್‌ ಮುಖಂಡ ಎಸ್‌.ಪಿ.ದಿನೇಶ್‌ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ನೈಋತ್ಯ ಪದವೀಧರ ಕ್ಷೇತ್ರದಿಂದ ನನಗೆ ಟಿಕೆಟ್‌ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಭರವಸೆ ನೀಡಿದ್ದರು. ಅಲ್ಲದೆ ಚುನಾವಣೆಗೆ ತಯಾರಿ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಹೀಗಾಗಿ 10 ತಿಂಗಳುಗಳಿಂದ ತಯಾರಿ ನಡೆಸಿದ್ದೇನೆ. ಆದರೆ ಈಗ ಟಿಕೆಟ್‌ ನಿರಾಕರಿಸಿದ್ದರಿಂದ ಬೇಸರಗೊಂಡು ಪಕ್ಷೇತರನಾಗಿ ಸ್ಪ ರ್ಧಿಸಲು ತೀರ್ಮಾನಿಸಿದ್ದೇನೆ. ಈವರೆಗೂ ಅಧಿಕೃತ ಅಭ್ಯರ್ಥಿ ಆಯನೂರು ಮಂಜುನಾಥ ನನ್ನನ್ನು ಸಂಪರ್ಕಿಸಿಲ್ಲ. ಮೇ 15ರಂದು ಮೈಸೂರಿನಲ್ಲಿ ನಾಮಪತ್ರ ಸಲ್ಲಿಸುತ್ತೇನೆ ಎಂದು ದಿನೇಶ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next