Advertisement

ಕಾಂಗ್ರೆಸ್‌ ಪದಾಧಿಕಾರಿಗಳ ಪಟ್ಟಿಗೆ ಇನ್ನಷ್ಟು  ಸೇರ್ಪಡೆ?

03:15 AM Jul 17, 2017 | Team Udayavani |

ಬೆಂಗಳೂರು: ಇತ್ತೀಚೆಗೆ ಕೆಪಿಸಿಸಿ ಪುನಾರಚನೆ ಮಾಡಿ ಪ್ರಕಟಿಸಿರುವ ಪದಾಧಿಕಾರಿಗಳ ಪಟ್ಟಿ ಕುರಿತಂತೆ ಪಕ್ಷದ ಶಾಸಕರು ಮತ್ತು ಮುಖಂಡರಲ್ಲಿ ಮೂಡಿರುವ ಅಸಮಾಧಾನ ಸೋಮವಾರ ನಡೆಯಲಿರುವ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ.

Advertisement

ಇದರ ಬೆನ್ನಲ್ಲೇ ಅಸಮಾಧಾನ ಶಮನಗೊಳಿಸುವ ನಿಟ್ಟಿನಲ್ಲಿ 171 ಮಂದಿಯಿರುವ ಗಜಗಾತ್ರದ ಪದಾಧಿಕಾರಿಗಳ ಪಟ್ಟಿ ಮತ್ತಷ್ಟು ಬೆಳೆಯುವ ಲಕ್ಷಣ ಗೋಚರಿಸಿದೆ. ಶಾಸಕಾಂಗ ಪಕ್ಷದ ಸಭೆ ಬಳಿಕ ಪದಾಧಿಕಾರಿಗಳ ಪಟ್ಟಿಗೆ ಇನ್ನಷ್ಟು ಹೆಸರುಗಳನ್ನು ಸೇರಿಸುವ ಬಗ್ಗೆ ವರಿಷ್ಠರಿಗೆ ಮನವಿ ಸಲ್ಲಿಕೆಯಾಗಲಿದೆ. ಇದರೊಂದಿಗೆ ಪದಾಧಿಕಾರಿಗಳ ಸಂಖ್ಯೆ 200ರ ಗಡಿ ದಾಟುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಮೂಲಗಳು ತಿಳಿಸಿವೆ.

ಅಸಮಾಧಾನ ಶಮನಗೊಳಿಸುವ ಸಂಬಂಧ ಮತ್ತಷ್ಟು ಮುಖಂಡರಿಗೆ ಪದಾಧಿಕಾರಿಗಳ ಪಟ್ಟಿಯಲ್ಲಿ ಅವಕಾಶ ಕಲ್ಪಿಸಿಕೊಡುವ ಕುರಿತು ಈಗಾಗಲೇ ದೂರವಾಣಿಯಲ್ಲಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಹಾಗೂ ಉಸ್ತುವಾರಿ ವೇಣುಗೋಪಾಲ್‌ ಚರ್ಚಿಸಿದ್ದಾರೆಂದು ಹೇಳಲಾಗಿದೆ.

ಪದಾಧಿಕಾರಿಗಳ ಪಟ್ಟಿಯಲ್ಲಿ ಶಾಸಕರಿಗೆ ಹೆಚ್ಚಿನ ಅವಕಾಶ ನೀಡದೇ ಇರುವುದು, ಹಲವು ಪ್ರಮುಖ ನಾಯಕರ ಬೆಂಬಲಿಗರನ್ನು ಕಡೆಗಣಿಸಿರುವ ಬಗ್ಗೆ ಪಕ್ಷದಲ್ಲಿ ಅಸಮಾಧಾನ ಹೊಗೆಯಾಡುವಂತೆ ಮಾಡಿದೆ. ಕೆಪಿಸಿಸಿ ಅಧ್ಯಕ್ಷ ಪರಮೇ ಶ್ವರ್‌ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣು ಗೋಪಾಲ್‌ ವಿರುದ್ಧ ಹಿರಿಯ ನಾಯಕರೇ
ಅದರಲ್ಲೂ ಮುಖ್ಯವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌. ಪಾಟೀಲ್‌, ಇಂಧನ ಸಚಿವ ಹಾಗೂ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ನೇರವಾಗಿ ಅಸಮಾಧಾನ ಹೊರ ಹಾಕಿದ್ದಾರೆಂದು ತಿಳಿದು ಬಂದಿದೆ.

ಪರಮೇಶ್ವರ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರಿಗೆ ಪದಾಧಿಕಾರಿಗಳ ಪಟ್ಟಿಯಲ್ಲಿ ಹೆಚ್ಚು ಅವಕಾಶ ಕಲ್ಪಿಸಲಾಗಿದೆ. ಇನ್ನೊಂದೆಡೆ ಹಾಲಿ ಶಾಸಕರೆಲ್ಲರಿಗೂ ಟಿಕೆಟ್‌ ಸಿಗುವುದಿಲ್ಲ ಎಂಬ ಸಂದೇಶವನ್ನು ಈಗಾಗಲೇ ನೀಡಿ
ಶಾಸಕರನ್ನು ಕಡೆಗಣಿಸಿರುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ಇದಲ್ಲದೆ ಪಕ್ಷದ 171 ಪದಾಧಿಕಾರಿಗಳ ಪೈಕಿ ಸುಮಾರು 100 ಮಂದಿ ಬೆಂಗಳೂರಿನವರೇ ಆಗಿರುವುದು ಕೂಡ ಇತರೆ ಜಿಲ್ಲೆಗಳ ಕಾಂಗ್ರೆಸ್‌ ಮುಖಂಡರನ್ನು
ಕೆರಳಿಸಿದೆ. ಹೀಗಾಗಿ ಪದಾಧಿಕಾರಿಗಳ ಪಟ್ಟಿ ಬದಲಾಯಿಸಿ ಪ್ರಾದೇಶಿಕವಾರು ಆದ್ಯತೆ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ.

Advertisement

ಈ ಎಲ್ಲಾ ವಿಚಾರಗಳ ಬಗ್ಗೆ ಸೋಮವಾರ ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಕರೆಯಲಾಗಿರುವ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆಯಾಗಲಿದ್ದು, ಶಾಸಕರು ತಮ್ಮ ಅತೃಪ್ತಿಯನ್ನು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಲಕ ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಹಾಗೂ ವರಿಷ್ಠರಿಗೆ ತಲುಪಿಸಲಿದ್ದಾರೆ. ಇದರ ಆಧಾರದ ಮೇಲೆ ಹೈಕಮಾಂಡ್‌ ಪದಾಧಿಕಾರಿಗಳ ಪಟ್ಟಿಯಲ್ಲಿ ಬದಲಾವಣೆ ಮಾಡುವ ಬದಲು ಮತ್ತಷ್ಟು ವಿಸ್ತರಿಸಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next