ಲಕ್ನೋ: ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ದೇಶಕ್ಕೊಂದು ಸಮಸ್ಯೆ ಹಾಗೂ ಈ ಪಕ್ಷ ವಂಶಾಡಳಿತ ಮತ್ತು ಭ್ರಷ್ಟಾಚಾರಕ್ಕೆ ಮೂಲವಾಗಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಯ್ ಬರೇಲಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಭಾರತ; 24ಗಂಟೆಗಳಲ್ಲಿ 22,775 ಕೋವಿಡ್ ಪ್ರಕರಣ ಪತ್ತೆ, ಒಮಿಕ್ರಾನ್ ಸಂಖ್ಯೆ 1,431ಕ್ಕೆ ಏರಿಕೆ
2022ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ಜನ್ ವಿಶ್ವಾಸ್ ಯಾತ್ರೆಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸೈಕಲ್ ಚಿಹ್ನೆ ಇರುವ ವಾಹನದೊಳಗೆ ಗೂಂಡಾಗಳು ಕುಳಿತಿರುತ್ತಾರೆ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಸಮಾಜವಾದಿ ಪಕ್ಷದ ವಿರುದ್ಧ ಟೀಕಾಪ್ರಹಾರ ನಡೆಸಿದರು.
ರಾಯ್ ಬರೇಲಿಯಲ್ಲಿ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ರಾಯ್ ಬರೇಲಿಯಲ್ಲಿ ಕಾಂಗ್ರೆಸ್ ಕಣ್ಮರೆಯಾಗುತ್ತಿದೆ. ಅಲ್ಲದೇ ಕಾಂಗ್ರೆಸ್ ದೇಶಕ್ಕೆ ಸಮಸ್ಯೆಯಾಗಿದೆ. ರಾಯ್ ಬರೇಲಿ ಯಾವತ್ತೂ ವಿದೇಶಿ ಆಡಳಿತವನ್ನು ಒಪ್ಪಿಕೊಳ್ಳಲ್ಲ ಎಂದರು.
ಕಾಂಗ್ರೆಸ್ ಪಕ್ಷ ದೇಶದಲ್ಲಿ ಭಯೋತ್ಪಾದನೆ, ವಂಶಾಡಳಿತ ಮತ್ತು ಭ್ರಷ್ಟಾಚಾರಕ್ಕೆ ಮೂಲವಾಗಿದೆ. ಕಾಂಗ್ರೆಸ್ ಜಾತಿವಾದವನ್ನು ಹರಡುತ್ತಿದೆ ಎಂದು ಯೋಗಿ ಆರೋಪಿಸಿದರು. ಉತ್ತರಪ್ರದೇಶಕ್ಕೆ ಸಮಾಜವಾದಿ ಪಕ್ಷ ಮತ್ತು ಬಹುಜನ್ ಸಮಾಜ್ ಪಕ್ಷ ಕೂಡಾ ಸಮಸ್ಯೆಯಾಗಿದೆ.
ನಮ್ಮ ಸರ್ಕಾರ ಜನಪರ ಆಡಳಿತ ನೀಡುತ್ತಿದೆ. ನಾವು ಜನರ ನಂಬಿಕೆಯನ್ನು ಗೌರವಿಸುತ್ತೇವೆ. ಆದರೆ ಕಾಂಗ್ರೆಸ್, ಸಮಾಜವಾದಿ ಹಾಗೂ ಬಹುಜನ್ ಸಮಾಜ ಪಕ್ಷ ಇದನ್ನು ಮಾಡುತ್ತದೆಯೇ ಎಂದು ಪ್ರಶ್ನಿಸಿದ ಯೋಗಿ, ರಾಮ, ಕೃಷ್ಣ ಕೇವಲ ಕಾಲ್ಪನಿಕ ಎನ್ನುವವರು ದೇವಾಲಯವನ್ನು ನಿರ್ಮಿಸುತ್ತಾರೆಯೇ ಎಂದು ಪ್ರಶ್ನಿಸಿದರು.