ಬೆಂಗಳೂರು: ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಮುಗಿದ ಬೆನ್ನಲ್ಲೇ ಬಾಕಿ ಇರುವ 15 ಕ್ಷೇತ್ರಗಳಿಗೆ “ಕೈ’ ತನ್ನ ಅಭ್ಯರ್ಥಿಗಳನ್ನು ಘೋಷಿಸಲಿದ್ದು, ಸೋಮವಾರ ಬಹುತೇಕ ನಾಲ್ಕನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದರೊಂದಿಗೆ ಹಾಲಿ-ಮಾಜಿ ಮುಖ್ಯಮಂತ್ರಿಗಳ ಕ್ಷೇತ್ರಗಳು ಸೇರಿ ಹಲವು ಪ್ರತಿಷ್ಠಿತ ಕಣಗಳಲ್ಲಿ ಆ ಪಕ್ಷದ ಅಭ್ಯರ್ಥಿ ಯಾರು ಎಂಬ ಕುತೂಹಲಕ್ಕೆ ತೆರೆಬೀಳಲಿದೆ.
ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಂತಹ ಕ್ಷೇತ್ರಗಳಲ್ಲಿ ಕಾದುನೋಡುವ ತಂತ್ರ ಅನುಸರಿಸುತ್ತಿತ್ತು. ಅಂತಹ ಕ್ಷೇತ್ರಗಳ ಪೈಕಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪ್ರತಿನಿಧಿಸುವ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾವಿ, ಹಾಲಿ ಕಾಂಗ್ರೆಸ್ ಶಾಸಕರೇ ಇರುವ ನಾಲ್ಕು ಕ್ಷೇತ್ರಗಳೂ ಸೇರಿವೆ. ಇದರಿಂದ ನಾಲ್ಕನೇ ಪಟ್ಟಿ ತುದಿಗಾಲಲ್ಲಿ ನಿಲ್ಲಿಸಿದೆ.
ರಾಹುಲ್ ಗಾಂಧಿ “ಜೈ ಭಾರತ ಸಮಾವೇಶ’ದ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದ್ದು, ಆ ಕಾರ್ಯಕ್ರಮಕ್ಕೂ ರಾಹುಲ್ ಗಾಂಧಿ ಸಾಕ್ಷಿಯಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಎರಡು ದಿನಗಳ ಅವರ ಪ್ರವಾಸದ ವೇಳೆ ರಾಜ್ಯ ನಾಯಕರು ಬಾಕಿ ಇರುವ 15 ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮತ್ತೂಂದು ಸುತ್ತಿನ ಮಾತುಕತೆ ನಡೆಸಿ ಪಟ್ಟಿ ಬಿಡುಗಡೆ ಮಾಡಲಿದ್ದಾರೆ ಎನ್ನಲಾಗಿದೆ.
ನಿರೀಕ್ಷೆಯಂತೆ ಒಂದು ವೇಳೆ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾದರೆ, ಹುಬ್ಬಳ್ಳಿ- ಧಾರವಾಡ ಸೆಂಟ್ರಲ್‌ಗೆ ಕಾಂಗ್ರೆಸ್‌ನಿಂದ ಅವರು ಕಣಕ್ಕಿಳಿಯಲಿದ್ದಾರೆ. ಉಳಿದಂತೆ ಶಿಗ್ಗಾವಿಯಲ್ಲಿ ಅಲ್ಪಸಂಖ್ಯಾತ ಹೊಸ ಮುಖವನ್ನು ಪರಿಚಯಿಸುವ ಚಿಂತನೆ ನಡೆದಿದೆ. ಈ ನಡುವೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಹೆಸರೂ ಕೇಳಿಬರುತ್ತಿದೆ. ಅದೇ ರೀತಿ, ಉಳಿದೆಡೆ ಎರಡು ಮತ್ತು ಎರಡಕ್ಕಿಂತ ಹೆಚ್ಚು ಹೆಸರುಗಳು ಕೇಳಿಬರುತ್ತಿದ್ದು, ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.