Advertisement

ಕಾಂಗ್ರೆಸ್‌-ಬಿಜೆಪಿಯ ಅಸಮಾಧಾನಿತರತ್ತ ಚಿತ್ತ

11:36 AM Mar 28, 2018 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕು ಎಂದು ಮಾಡು ಇಲ್ಲವೆ ಮಡಿ ಹೋರಾಟ ನಡೆಸುತ್ತಿರುವ ಜೆಡಿಎಸ್‌, ಎರಡನೇ ಹಂತದಲ್ಲಿ 50 ಅಭ್ಯರ್ಥಿಗಳ ಪಟ್ಟಿ ವಾರದೊಳಗೆ ಅಂತಿಗೊಳಿಸಲು ಮುಂದಾಗಿದೆ. ಜತೆಗೆ ಜೆಡಿಎಸ್‌ಗೆ ಬರುವುದಾಗಿ ಭರವಸೆ ನೀಡಿರುವ ಕಾಂಗ್ರೆಸ್‌ ಮತ್ತು ಬಿಜೆಪಿಯ ನಾಯಕರತ್ತ ಆಸೆಗಣ್ಣಿನಿಂದ ನೋಡುತ್ತಿದೆ.

Advertisement

ಎರಡೂ ಪಕ್ಷಗಳಲ್ಲಿ ಟಿಕೆಟ್‌ ವಂಚಿತರಾದವರು ತಮ್ಮತ್ತ ಬರಬಹುದು ಎಂಬ ನಿರೀಕ್ಷೆಯೂ ಇದೆ. ಮೊದಲ ಹಂತದಲ್ಲಿ ಘೋಷಣೆ ಮಾಡಿದ 126 ಅಭ್ಯರ್ಥಿಗಳ ಪೈಕಿ ಎ.ಎಸ್‌.ಪಾಟೀಲ್‌ ನಡಹಳ್ಳಿ ಕೈ ಕೊಟ್ಟು ಬಿಜೆಪಿಗೆ ಸೇರಿದ್ದು, ಇನ್ನೂ ನಾಲ್ವರು ಅಭ್ಯರ್ಥಿಗಳ ಹೆಸರು ಬದಲಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಎರಡನೇ ಹಂತದಲ್ಲಿ 50 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಉಳಿದ ಕ್ಷೇತ್ರಗಳ ಆಯ್ಕೆ ಬಾಕಿ ಇರಿಸಿ.

ಚುನಾವಣಾ ಪ್ರಚಾರದತ್ತ ಹೆಚ್ಚಿನ ಗಮನಹರಿಸಲು ತೀರ್ಮಾನಿಸಲಾಗಿದೆ. ಈಗಾಗಲೇ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಕುಮಾರ ಪರ್ವ ಯಾತ್ರೆ ಮೂಲಕ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಇನ್ನೊಂದೆಡೆ ಜೆಡಿಎಸ್‌ ವರಿಷ್ಠರೂ ಆಗಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರೂ ಜಿಲ್ಲಾ ಪ್ರವಾಸಕ್ಕೆ ಮುಂದಾಗಲಿದ್ದು,

ನಾಮಪತ್ರ ಸಲ್ಲಿಕೆ ಆರಂಭವಾಗುವ ಮುನ್ನ ಉಭಯ ನಾಯಕರೂ ಎಲ್ಲಾ ಜಿಲ್ಲೆಗಳಿಗೆ ಒಂದು ಸುತ್ತು ಓಡಾಡಲು ಮುಂದಾಗಿದ್ದಾರೆ. ಕಿಂಗ್‌ ಮೇಕರ್‌ ಆಗುವ ಪ್ರಯತ್ನ 2004ರ ಚುನಾವಣೆಯಲ್ಲಿ 58 ಸೀಟುಗಳನ್ನು ಹೊಂದಿದ್ದ ಜೆಡಿಎಸ್‌ ಕಾಂಗ್ರೆಸ್‌ ಜತೆ ಸೇರಿ ಮೈತ್ರಿ ಸರ್ಕಾರ ರಚಿಸಿತ್ತು. ಆದರೆ, 20 ತಿಂಗಳಲ್ಲೇ ಈ ಮೈತ್ರಿ ಮುರಿದುಬಿದ್ದು ನಂತರ ಬಿಜೆಪಿ ಜತೆ ಸೇರಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿತ್ತು.

ಆದರೆ, ಒಪ್ಪಂದದಂತೆ ಬಿಜೆಪಿಗೆ ಅಧಿಕಾರ ಬಿಟ್ಟುಕೊಡದ ಕಾರಣ ಸರ್ಕಾರ ಉರುಳಿತ್ತು. ಹೀಗಾಗಿ 2008ರ ಚುನಾವಣೆಯಲ್ಲಿ ಪಕ್ಷ ಕೇವಲ 27 ಸ್ಥಾನ ಮಾತ್ರ ಗಳಿಸಿತ್ತು. 2013ರ ಚುನಾವಣೆಯಲ್ಲಿ ಈ ಸ್ಥಾನವನ್ನು 40ಕ್ಕೆ ಏರಿಸಿಕೊಂಡಿದ್ದ ಪಕ್ಷ ನಂತರದಲ್ಲಿ 31ಕ್ಕೆ ಕುಸಿಯಿತು. ಈ ಬಾರಿ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗದಿದ್ದರೂ ಸೀಟುಗಳ ಸಂಖ್ಯೆ ಹೆಚ್ಚಿಸಿಕೊಂಡು ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಕಿಂಗ್‌ ಮೇಕರ್‌ ಆಗುವ ಪ್ರಯತ್ನವೂ ನಡೆಯಲಿದೆ ಎಂದು ಹೇಳಲಾಗಿದೆ.

Advertisement

ಕಾಂಗ್ರೆಸ್‌ ಮೊದಲ ಗುರಿ ಆಡಳಿತಾರೂಢ ಕಾಂಗ್ರೆಸ್‌ ಮತ್ತು ಪ್ರಮುಖ ಪ್ರತಿಪಕ್ಷ ಬಿಜೆಪಿ ವಿರುದ್ಧ ಸಮಾನಾಂತರದ ಹೋರಾಟ ನಡೆಸುತ್ತಿದ್ದೇವೆ ಎಂದು ಜೆಡಿಎಸ್‌ ನಾಯಕರು ಹೇಳುತ್ತಿದ್ದರೂ ಅದರ ಮೊದಲ ಗುರಿ ಕಾಂಗ್ರೆಸ್‌ ಎಂಬುದು ಸ್ಪಷ್ಟ. ಇದಕ್ಕೆ ಬಿಎಸ್‌ಪಿ ಜತೆ ಮಾಡಿಕೊಂಡಿರುವ ಚುನಾವಣಾ ಮೈತ್ರಿಯೇ ಉದಾಹರಣೆ.

2008ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಲವು ಅಭ್ಯರ್ಥಿಗಳ ಸೋಲಿಗೆ ಬಿಎಸ್‌ಪಿ ಕಾರಣವಾಗಿದ್ದು, ಜಾತ್ಯತೀತ ಪಕ್ಷಗಳು ಒಂದಾಗುವ ಹೆಸರಿನಲ್ಲಿ ಬಿಎಸ್‌ಪಿ ಜತೆ ಕೈಜೋಡಿಸಿ ಕಾಂಗ್ರೆಸ್‌ಗೆ ಬಿಸಿ ಮುಟ್ಟಿಸಲು ಮುಂದಾಗಿದೆ. ಪಕ್ಷದ ಏಳು ಮಂದಿ ಮಾಜಿ ಶಾಸಕರು ಸೇರಿದಂತೆ ಹಲವು ಮುಖಂಡರನ್ನು ಕಾಂಗ್ರೆಸ್‌ ಸೇರಿಸಿಕೊಂಡಿರುವುದು ಕೂಡ ಇದಕ್ಕೆ ಕಾರಣ. 

ಟಿಕೆಟ್‌ ಹಂಚಿಕೆ: ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ), ಎನ್‌ಸಿಪಿ ಜತೆ ಮೈತ್ರಿ ನಂತರ ಇದೀಗ ಸಮಾಜವಾದಿ ಪಕ್ಷ, ಎಡಪಕ್ಷಗಳ ಜತೆಯೂ ಮೈತ್ರಿಗೆ ಮುಂದಾಗಿದೆ. ಈ ಮಧ್ಯೆ, ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್‌ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿರುವುದರಿಂದ

ಎರಡನೇ ಪಟ್ಟಿ ಬಿಡುಗಡೆಗೆ ಅವಸರ ಮಾಡುವುದು ಬೇಡ ಎಂಬುದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರ ಅನಿಸಿಕೆಯಾಗಿದೆ. ಕಾಂಗ್ರೆಸ್‌, ಬಿಜೆಪಿಯವರು ಇನ್ನಷ್ಟೇ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಬೇಕಿದೆ. ಹೀಗಾಗಿ ಎರಡನೇ ಪಟ್ಟಿ ಬಿಡುಗಡೆ ಸಾವಧಾನದಿಂದ ಮಾಡೋಣ ಎಂದು ಎಚ್‌.ಡಿ.ಕುಮಾರಸ್ವಾಮಿಯವರಿಗೆ ಹೇಳಿದ್ದಾರೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ದೇವೇಗೌಡರ ರಾಜಕೀಯ ಲೆಕ್ಕಾಚಾರವೇ ಬೇರೆ ಇದೆ  ಎಂದು ಹೇಳಲಾಗಿದೆ. 

* ಪ್ರದೀಪ್‌ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next