Advertisement

ಎಸ್‌ಎಂಕೆಗೆ ಗಣ್ಯರಿಂದ ಹುಟ್ಟುಹಬ್ಬದ ಶುಭ ಹಾರೈಕೆ

12:23 AM May 02, 2019 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ತಮ್ಮ 88ನೇ ಜನ್ಮದಿನವನ್ನು ಸದಾಶಿವನಗರದ ನಿವಾಸದಲ್ಲಿ ಬುಧವಾರ ಸರಳವಾಗಿ ಆಚರಿಸಿಕೊಂಡರು.

Advertisement

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಮಾಜಿ ಡಿಸಿಎಂ ಆರ್‌.ಅಶೋಕ್‌, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಸಂಸದ ಪಿ.ಸಿ.ಮೋಹನ್‌, ಶಾಸಕರಾದ‌ ಎಲ್‌.ಎ.ರವಿಸುಬ್ರಹ್ಮಣ್ಯ, ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ನಗರ ಬಿಜೆಪಿ ಅಧ್ಯಕ್ಷ ಪಿ.ಎನ್‌.ಸದಾಶಿವ ಹಾಗೂ ಇತರರು ಇತರರು ಎಸ್‌.ಎಂ.ಕೃಷ್ಣ ಅವರ ನಿವಾಸಕ್ಕೆ ತೆರಳಿ ಜನ್ಮದಿನದ ಶುಭಾಶಯ ಕೋರಿದರು.

ಎಲ್ಲರ ಸಮ್ಮುಖದಲ್ಲೇ ಎಸ್‌.ಎಂ.ಕೃಷ್ಣ ಅವರು ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು. ನಂತರ ಪ್ರತಿಕ್ರಿಯಿಸಿದ ಬಿ.ಎಸ್‌.ಯಡಿಯೂರಪ್ಪ, ರಾಷ್ಟ್ರಕ್ಕೆ ಅನೇಕ ರೀತಿಯ ಸೇವೆ ಸಲ್ಲಿಸಿದ ಎಸ್‌.ಎಂ.ಕೃಷ್ಣ ಅವರ 88ನೇ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿದ್ದೇವೆ.

ಅವರು 100 ವರ್ಷಗಳ ಕಾಲ ಬಾಳಿ ನಮ್ಮನ್ನು ಹರಸಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ನಾನಾ ಕಡೆ ಅವರು ಪ್ರವಾಸ ನಡೆಸಿರುವುದರಿಂದ ರಾಜ್ಯದಲ್ಲಿ 22ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ದೊಡ್ಡ ಶಕ್ತಿ ಬಂದಿದೆ.

ಅದಕ್ಕಾಗಿ ಹಿರಿಯ ನಾಯಕರು, ಕಾರ್ಯಕರ್ತರ ಪರವಾಗಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಲಾಗಿದೆ. ಪ್ರತಿ ವರ್ಷ ಇದೇ ರೀತಿ ಉತ್ಸಾಹದಿಂದ ಹುಟ್ಟುಹಬ್ಬ ಆಚರಿಸುವ ಆಶಯವಿದೆ ಎಂದರು.

Advertisement

ಎಸ್‌.ಎಂ.ಕೃಷ್ಣ ಅವರ ಪರಿಶ್ರಮ ಹಾಗೂ ಬಲದಿಂದಾಗಿ ಈ ಬಾರಿ ದೊಡ್ಡ ಬದಲಾವಣೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆಯಲ್ಲಿ 290ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು, ಮತ್ತೆ ಮೋದಿಯವರು ಪ್ರಧಾನಿಯಾಗುತ್ತಾರೆ. ಅದಕ್ಕೆ ರಾಜ್ಯದಿಂದಲೂ 22 ಸ್ಥಾನಗಳನ್ನು ಕೊಡುಗೆಯಾಗಿ ನೀಡಲಾಗುವುದು ಎಂದು ತಿಳಿಸಿದರು.

ಬಳಿಕ ಮಾತನಾಡಿದ ಎಸ್‌.ಎಂ.ಕೃಷ್ಣ, ನಮ್ಮ ಬಿಜೆಪಿ ರಾಜ್ಯಾಧ್ಯಕ್ಷರು, ಇತರ ನಾಯಕರು ಹೀಗೆ ಬಂದು ಹುಟ್ಟುಹಬ್ಬ ಆಚರಿಸಿ ನನಗೆ ಆಶೀರ್ವಾದ ಮಾಡುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಏಕೆಂದರೆ ಸಾಧಾರಣವಾಗಿ ನಾನು ಜನ್ಮದಿನದಂದು ಬೆಂಗಳೂರಿನಲ್ಲಿ ಇರುತ್ತಿರಲಿಲ್ಲ.

ಈ ಬಾರಿ ಯಾರಿಗೂ ಗೊತ್ತಾಗುವುದಿಲ್ಲ ಎಂದು ಇಲ್ಲೇ ಇದ್ದೆ. ಆದರೆ ಇದು ಬಹಿರಂಗವಾಗಿದೆ. ನನ್ನ ಎಲ್ಲ ಸಹೃದಯಿ ನಾಯಕರು, ಸ್ನೇಹಿತರು, ಅಭಿಮಾನಿಗಳಿಗೆ ಋಣಿಯಾಗಿದ್ದೇನೆ ಎಂದು ಹೇಳಿದರು.

ಎಲ್ಲ ನಾಯಕರು, ಹಿತೈಷಿಗಳ ಆಶೀರ್ವಾದದಿಂದ ನಾನು ಇನ್ನೂ ಕೆಲವು ಕಾಲ ಸಾರ್ವಜನಿಕ ಜೀವನದಲ್ಲಿ ಬಹಳ ಉತ್ಸಾಹದಿಂದ ಮೋದಿಯವರು ಮತ್ತೆ ಐದು ವರ್ಷಗಳ ಕಾಲ ಪ್ರಧಾನಿಯಾಗಿ ಆಡಳಿತ ನಡೆಸುವ ಅವಧಿಯಲ್ಲಿ ಆಗಬಹುದಾದ ನಿರೀಕ್ಷೆಗಳನ್ನು ಗಮನವಿಟ್ಟು ನೋಡುತ್ತೇನೆ.

ರಾಜ್ಯದಲ್ಲೂ ಲೋಕಸಭಾ ಚುನಾವಣೆ ಫ‌ಲಿತಾಂಶದ ಬಳಿಕ ಏನೆಲ್ಲಾ ಪ್ರಕ್ರಿಯೆಗಳು ನಡೆಯುತ್ತವೆ ಎಂಬುದನ್ನು ಬಹಳ ಕುತೂಹಲದಿಂದ ನೋಡುತ್ತೇನೆ ಎಂದು ತಿಳಿಸಿದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಎಸ್‌.ಎಂ.ಕೃಷ್ಣ ಅವರು ಮುತ್ಸದ್ಧಿ ರಾಜಕಾರಣಿ. ಅವರು ನೂರು ಕಾಲ ಸುಖವಾಗಿರಲೆಂದು ಶುಭ ಹಾರೈಸಿದ್ದೇನೆ. ಕೃಷ್ಣ ಅವರಿಗೆ ಎಲ್ಲ ಕಡೆ ಸ್ಥಾನಮಾನ ಸಿಕ್ಕಿದೆ. ಸ್ಥಾನ ಮೀರಿದ ಬದುಕು ಕೃಷ್ಣ ಅವರದ್ದು.

ಹೀಗಾಗಿ, ಅವರೇ ಯಾವುದೇ ಸ್ಥಾನಮಾನ ಅಪೇಕ್ಷಿಸಿಲ್ಲ. ಸಮಯ, ಸಂದರ್ಭಕ್ಕನುಗುಣವಾಗಿ ಅವರ ಅನುಭವವನ್ನು ಪಕ್ಷ ಬಳಸಿಕೊಳ್ಳುತ್ತದೆ. ರಾಷ್ಟ್ರೀಯ ಕಾರ್ಯಕಾರಿಣಿಗೆ ಅವರನ್ನು ಆಹ್ವಾನಿತರನ್ನಾಗಿ ಸೇರಿಸಲಾಗಿದೆ. ಅವರು ಸ್ಟಾರ್‌ ಪ್ರಚಾರಕರಾಗಿದ್ದು, ಏನೂ ಅಪೇಕ್ಷೆ ಪಟ್ಟಿಲ್ಲ ಎಂದು ಹೇಳಿದರು.

ಡಿಕೆಶಿ ಭೇಟಿ: ಸಚಿವ ಡಿ.ಕೆ.ಶಿವಕುಮಾರ್‌ ಅವರು ಎಸ್‌.ಎಂ.ಕೃಷ್ಣ ನಿವಾಸಕ್ಕೆ ತೆರಳಿ ಹುಟ್ಟುಹಬ್ಬದ ಶುಭಾಶಯ ಕೋರಿದರು. ಇದೇ ಸಂದರ್ಭದಲ್ಲಿ ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ಪ್ರತ್ಯೇಕವಾಗಿ ಎಸ್‌.ಎಂ.ಕೃಷ್ಣ ಅವರೊಂದಿಗೆ ಮಾತುಕತೆ ನಡೆಸಿದರು.

ಬಳಿಕ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ಎಸ್‌.ಎಂ.ಕೃಷ್ಣ ಅವರು ನನ್ನ ತಂದೆ ಸಮಾನ. ಅವರ ಜನ್ಮದಿನಕ್ಕೆ ಶುಭ ಕೋರಲು ಬಂದಿದ್ದೆ. ಇತ್ತೀಚೆಗೆ ಹಬ್ಬದ ಸಂದರ್ಭದಲ್ಲೂ ಭೇಟಿಯಾಗಿದ್ದೆ.

ಅವರೊಂದಿಗೆ ಪ್ರತ್ಯೇಕವಾಗಿ ರಹಸ್ಯ ಮಾತುಕತೆ ಏನೂ ಇಲ್ಲ. ನನ್ನದೇನಿದ್ದರೂ ತೆರೆದ ಪುಸ್ತಕವಿದ್ದಂತೆ. ಏನು ಮಾತನಾಡುವುದಿದ್ದರೂ ಬಹಿರಂಗವಾಗಿಯೇ ಮಾತನಾಡುತ್ತೇನೆ. ನಾನು ಯಾರಿಗೂ ಹೆದರುವ ಅಗತ್ಯವಿಲ್ಲ ಎಂದು ಹೇಳಿದರು.

ಡಿಕೆಶಿ ಕಾಲಿಗೆರಗಿದ ಪ್ರತಾಪ್‌ ಸಿಂಹ: ಕೃಷ್ಣ ಅವರ ನಿವಾಸದಲ್ಲಿ ಎದುರಾದ ಸಚಿವ ಡಿ.ಕೆ.ಶಿವಕುಮಾರ್‌ ಅವರ ಕಾಲಿಗೆರಗಿದ ಸಂಸದ ಪ್ರತಾಪ್‌ಸಿಂಹ, ಆಶೀರ್ವಾದ ಪಡೆದರು. ಕೃಷ್ಣ ಅವರ ನಿವಾಸದಲ್ಲಿ ತಮ್ಮನ್ನು ಎದುರಾದ ಶಿವಕುಮಾರ್‌ ಕಾಲು ಮುಟ್ಟಿ ನಮಸ್ಕರಿಸಿದರು. ಡಿ.ಕೆ.ಶಿವಕುಮಾರ್‌ ಕೂಡ ಆತ್ಮೀಯವಾಗಿ ಮಾತನಾಡುತ್ತಾ ನಡೆದಿದ್ದು, ಚರ್ಚೆಗೆ ಗ್ರಾಸವಾಯಿತು.

ಎಚ್‌ಡಿಕೆ ಶುಭಾಶಯ: ಕೃಷ್ಣ ಅವರ ಹುಟ್ಟುಹಬ್ಬಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶುಭಾಶಯ ಕೋರಿದ್ದಾರೆ. ರಾಜ್ಯದ ಅತ್ಯಂತ ಹಿರಿಯ ರಾಜಕಾರಣಿ ಹಾಗೂ ಮುತ್ಸದ್ಧಿ ಕೃಷ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇವರು ಅವರಿಗೆ ಆಯುಷ್ಯ ಹಾಗೂ ಆರೋಗ್ಯ ನೀಡಲಿ ಎಂದು ಟ್ವೀಟ್‌ ಮೂಲಕ ಹಾರೈಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next